ಮಾನವನ ದೈಹಿಕ ಮತ್ತು ಮಾನಸಿಕ ಆರೋಗ್ಯ ಬಹಳಷ್ಟು ಮುಖ್ಯ, ಬದುಕಿನಲ್ಲಿ ಸಿರಿ ಸಂಪತ್ತು ಗಳಿಸಿದರೂ ಆರೋಗ್ಯ ಗಳಿಸದಿದ್ದರೆ ಲಾಭವಿಲ್ಲ
ಗಂಗಾವತಿ: ಮನುಷ್ಯ ಸಂತನಂತೆ ಬದುಕಬೇಕು. ಸಂತನೆಂದರೆ ಕೇವಲ ಯಾಂತ್ರಿಕತೆಯ ಬದುಕಲ್ಲ ಬದಲಾಗಿ ಆರೋಗ್ಯಪೂರ್ಣ ಬದುಕನ್ನು ಹೊಂದುವುದು ಎಂದು ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು. ಅವರು ತಾಲೂಕಿನ ವಡ್ಡರಹಟ್ಟಿ ಗ್ರಾಮದಲ್ಲಿ ಕೆಎಲ್ಇ ಮಹಾವಿದ್ಯಾಲಯ, ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ ಬೆಳಗಾವಿ ಡಾ. ಸಂಪತ್‌ಕುಮಾರ್ ಎಸ್. ಶಿವಣಗಿ ಕ್ಯಾನ್ಸರ್ ಆಸ್ಪತ್ರೆ, ಜವಾಹರಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯ, ಕೆಎಲ್‌ಇ ಎಜ್ಯುಕೇಷನ್ ಗಂಗಾವತಿ ಸಹಯೋಗದಲ್ಲಿ ನಡೆದ ಉಚಿತ ಮೆಗಾ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ಮಾನವನ ದೈಹಿಕ ಮತ್ತು ಮಾನಸಿಕ ಆರೋಗ್ಯ ಬಹಳಷ್ಟು ಮುಖ್ಯ, ಬದುಕಿನಲ್ಲಿ ಸಿರಿ ಸಂಪತ್ತು ಗಳಿಸಿದರೂ ಆರೋಗ್ಯ ಗಳಿಸದಿದ್ದರೆ ಲಾಭವಿಲ್ಲ. ಆದ್ದರಿಂದ ಆರೋಗ್ಯ ಕಾಪಾಡಿಕೊಂಡು ಹೋಗುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.ಮಾಜಿ ಶಾಸಕ ಪರಣ್ಣ ಮುನವಳ್ಳಿ, ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳ ಆಶೀರ್ವಾದದಿಂದ ಹಮ್ಮಿಕೊಂಡ ಈ ಬೃಹತ್ ಉಚಿತ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಸೌಲಭ್ಯ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು ಸಂತಸದ ವಿಷಯ.ನಮ್ಮ ಸಂಸ್ಥೆ ಇಂತಹ ಹಲವಾರು ಸಾಮಾಜಿಕ ಉಪಯುಕ್ತತೆಯ ಸೇವೆ ನೀಡುತ್ತಾ ಬಂದಿದೆ. ಈಗ ಗಂಗಾವತಿಯಲ್ಲಿ ನಡೆಯುತ್ತಿರುವ ಈ ಶಿಬಿರ ಸಾರ್ವಜನಿಕರಿಗೆ ಹೆಚ್ಚು ನೆರವಾಗಲಿದೆ ಎಂದರು.
ಈ ಶಿಬಿರದಲ್ಲಿ ಹೃದಯರೋಗ, ಪ್ಲಾಸ್ಟಿಕ್ ಸರ್ಜರಿ,ಗ್ಯಾಸ್ಟ್ರೋಎಂಟರಾಲಜಿ, ಮೂತ್ರರೋಗ ನರರೋಗ, ಉಸಿರಾಟದ ಕಾಯಿಲೆ ಸೇರಿದಂತೆ ವಿವಿಧ ತಜ್ಞ ವೈದ್ಯರು ಸೇವೆ ಸಲ್ಲಿಸಿದರು.ಸಾಮಾನ್ಯ ವೈದ್ಯಕೀಯ, ಸಾಮಾನ್ಯ ಶಸ್ತ್ರಚಿಕಿತ್ಸೆ, ಅಸ್ಥಿ ಮತ್ತು ಕೀಲುರೋಗ, ಸ್ತ್ರೀರೋಗ ಮತ್ತು ಪ್ರಸೂತಿ, ಮಕ್ಕಳ ವೈದ್ಯಕೀಯ, ಕಿವಿ-ಮೂಗು-ಗಂಟಲು, ನೇತ್ರ ಚಿಕಿತ್ಸಾ ವಿಭಾಗ, ಚರ್ಮರೋಗ, ಆಯುರ್ವೇದ, ಹೋಮಿಯೋಪಥಿ, ದಂತ ವೈದ್ಯಕೀಯ ಹಾಗೂ ಫಿಸಿಯೋಥೆರಪಿ ವಿಭಾಗಗಳ ತಜ್ಞರು ಆರೋಗ್ಯ ಸೇವೆ ಒದಗಿಸಿದರು.
ಶಿಬಿರದಲ್ಲಿ ರಕ್ತದೊತ್ತಡ, ಹಿಮೋಗ್ಲೋಬಿನ್, ರ್ಯಾಂಡಮ್ ಬ್ಲಡ್ ಶುಗರ್, ಇಸಿಜಿ, ಇಕೋ ಸೇರಿದಂತೆ ವಿವಿಧ ಉಚಿತ ಪರೀಕ್ಷೆ ನಡೆಸಲಾಯಿತು.ಅಗತ್ಯವಿರುವ ರೋಗಿಗಳಿಗೆ ಅಲೋಪತಿ, ಆಯುರ್ವೇದ ಹಾಗೂ ಹೋಮಿಯೋಪಥಿ ಔಷಧಿ ಉಚಿತವಾಗಿ ವಿತರಿಸಲಾಯಿತು.ಆರೋಗ್ಯ ಶಿಬಿರದಲ್ಲಿ ಒಟ್ಟು 2,000ಕ್ಕೂ ಅಧಿಕ ಜನರು ಆರೋಗ್ಯ ತಪಾಸಣೆಯ ಪ್ರಯೋಜನ ಪಡೆದಿದ್ದು, ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದ 210 ರೋಗಿಗಳನ್ನು ಬೆಳಗಾವಿ,ಹುಬ್ಬಳ್ಳಿ ಕೆಎಲ್‌ಇ ಆಸ್ಪತ್ರೆಗಳಿಗೆ ಮುಂದಿನ ಚಿಕಿತ್ಸೆಗಾಗಿ ರೆಫರ್ ಮಾಡಲಾಯಿತು.
ಕೆಎಲ್ಇ ಸಂಸ್ಥೆಯ ಆಡಳಿತ ಮಂಡಳಿ ಸಲಹಾ ಸಮಿತಿಯ ಸದಸ್ಯ ಶಂಕ್ರಣ್ಣ ಮುನವಳ್ಳಿ, ಮಾಜಿ ಸಂಸದ ಶಿವರಾಮಗೌಡ್ರು, ಮಾಜಿ ಸಚಿವ ಮಲ್ಲಿಕಾರ್ಜುನ್ ನಾಗಪ್ಪ, ಮಾಜಿ ಶಾಸಕ ಜಿ.ವೀರಪ್ಪ, ಮಾಜಿ ವಿಧಾನ ಪರಿಷತ್ ಸದಸ್ಯ ಎಚ್.ಆರ್.ಶ್ರೀನಾಥ್, ಗಂಗಾವತಿಯ ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ ಗಿರಿಯಪ್ಪ ಪಂಪಣ್ಣ ಹೊಸಕೇರಿ, ಮಂಜುನಾಥ ಎಸ್ ಮುನವಳ್ಳಿ, ಪ್ರಭಾಕರ್ ಪಿ.ಹೊಸಕೇರಿ, ಡಾ.ಮಾನಸ ಡಿ.ಎ, ಡಾ.ಜಿ ಚಂದ್ರಪ್ಪ, ಡಾ.ಸೋಮರಾಜು, ಡಾ.ಅಲ್ಲಮಪ್ರಭು ಕುಡಚಿ, ಚೇತನ್,ಮಂಜುನಾಥ್ ಲಗಮಳ್ಳಿ, ರಾಜು ಹಾದಿಮನಿ, ರವಿ, ಜಿ.ಕೆ.ಪಾಟೀಲ್, ಸಾಯಿಪ್ರಕಾಶ್,ಯುವರಾಜ, ಮಂಜುನಾಥ, ರೇಖಾ, ಮಂಜುಳಾ ಹಾಗೂ ಕಾಲೇಜು ಸಿಬ್ಬಂದಿ ಹಾಜರಿದ್ದರು. ಕಾರ್ಯಕ್ರಮವನ್ನು ಉಪನ್ಯಾಸಕ ಡಾ.ಚಂದ್ರಶೇಖರ ವ್ಯಾಕರನಾಳ ನಿರೂಪಿಸಿದರು. ಉಪನ್ಯಾಸಕಿ ಸ್ನೇಹ ಶರತ್ ಸ್ವಾಗತಿಸಿದರೆ, ಉಪನ್ಯಾಸಕಿ ಜೈಬುನ್ನಿಸಾ ವಂದಿಸಿದರು.