ಸಾರಾಂಶ
ತಂಬಾಕಿನಲ್ಲಿರುವ ನಿಕೋಟಿನ್ ಅತ್ಯಂತ ವಿಷಕಾರಿಯಾಗಿದ್ದು, ಆರೋಗ್ಯದ ಮೇಲೆ ಗಂಭೀರವಾದ ದುಷ್ಪರಿಣಾಮಗಳನ್ನು ಬೀರುತ್ತದೆ.
ಹಳಿಯಾಳ: ಯುವಸಮೂಹ ತಂಬಾಕಿನ ದಾಸರಾಗದೇ ಆರೋಗ್ಯವಂತ ಸಮಾಜದ ನಿರ್ಮಾಣ ಕಾರ್ಯಕ್ಕೆ ಮುಂದಾಗಬೇಕು ಎಂದು ಹಳಿಯಾಳದ ಹಿರಿಯ ಸಿವಿಲ್ ನ್ಯಾಯಾಧೀಶ ನಾಗಮ್ಮ ಇಚ್ಚಂಗಿ ಕರೆ ನೀಡಿದರು.
ಪಟ್ಟಣದ ದೇಶಪಾಂಡೆ ಆರ್‌ಸೆಟಿಯಲ್ಲಿ ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆ, ಕಾನೂನು ಸೇವಾ ಸಮಿತಿ ಹಳಿಯಾಳ, ತಾಲೂಕು ಆರೋಗ್ಯ ಇಲಾಖೆ ಮತ್ತು ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿ ಜಂಟಿ ಆಶ್ರಯದಲ್ಲಿ ವಿಶ್ವ ತಂಬಾಕು ರಹಿತ ದಿನದ ನಿಮಿತ್ತ ಆಯೋಜಿಸಿದ್ದ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಆರೋಗ್ಯದ ಅರಿವು ಕಾರ್ಯಾಗಾರದಲ್ಲಿ ಮಾತನಾಡಿದರು.ತಂಬಾಕಿನಲ್ಲಿರುವ ನಿಕೋಟಿನ್ ಅತ್ಯಂತ ವಿಷಕಾರಿಯಾಗಿದ್ದು, ಆರೋಗ್ಯದ ಮೇಲೆ ಗಂಭೀರವಾದ ದುಷ್ಪರಿಣಾಮಗಳನ್ನು ಬೀರುತ್ತದೆ. ತಂಬಾಕು ಕಂಪನಿಗಳು ಯುವಸಮೂಹವನ್ನು ಗುರಿಯಾಗಿಟ್ಟುಕೊಂಡು ಜಾಹೀರಾತುಗಳ ಮೂಲಕ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ತಂಬಾಕು ಸೇವನೆಯತ್ತ ಆಕರ್ಷಿಸುತ್ತಿವೆ. ಈ ಮೋಹಕ ಜಾಹೀರಾತುಗಳಿಗೆ ಮರುಳಾಗಿ ತಮ್ಮ ಭವಿಷ್ಯ ಹಾಳುಗೆಡವಬೇಡಿ ಎಂದರು.
ಹಿರಿಯ ವಕೀಲರಾದ ರಾಧಾರಾಣಿ ಕೊಳಾಂಬಿ ಅವರು ಮಾತನಾಡಿ, ತಂಬಾಕು ಸೇವನೆ ಹಾಗೂ ಮಾದಕ ದ್ರವ್ಯ ಸೇವನೆಯಂತಹ ದುಶ್ಚಟಗಳು ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತವೆ. ಜತೆಗೆ ಕೌಟುಂಬಿಕ ಆಶಾಂತಿಗೂ ಕಾರಣವಾಗುತ್ತಿವೆ, ಇಷ್ಟೇ ಅಲ್ಲದೇ ಅನಾರೋಗ್ಯಕ್ಕೂ ಕಾರಣವಾಗುತ್ತವೆ. ಸಾರ್ವಜನಿಕ ಸ್ಥಳದಲ್ಲಿ ತಂಬಾಕು ಸೇವಿಸುವುದು, ಅನಧಿಕೃತವಾಗಿ ಮಾರಾಟ ಮಾಡುವುದು, 18 ವರ್ಷಗಳಕ್ಕಿಂತ ಕೆಳಗಿನ ವಯಸ್ಸಿನವರಿಂದ ಮಾರಾಟ ಮಾಡಿಸುವುದು ಕಂಡು ಬಂದಲ್ಲಿ ಸಹಾಯವಾಣಿಗೆ ದೂರು ನೀಡಬೇಕು ಎಂದು ತಿಳಿಸಿ, ಅಗತ್ಯವಾದ ಕಾನೂನು ಮಾಹಿತಿ ನೀಡಿದರು.ತಾಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ರೂಪಾ ತುರುಮುರಿ ಮಾತನಾಡಿ, ತಂಬಾಕು ಮತ್ತು ಉತ್ಪನ್ನಗಳ ಸೇವನೆಯಿಂದಾಗುವ ರೋಗ-ರುಜಿನ, ಸಾವು-ನೋವು, ದುಗುಡ ದುಮ್ಮಾನಗಳ ಬಗ್ಗೆ ಪ್ರಾಯೋಗಿಕವಾಗಿ ಚಿತ್ರಗಳ ಮೂಲಕ ಅರಿವು ಮೂಡಿಸಿದರು.
ಸಂಸ್ಥೆಯ ಪ್ರಾಚಾರ್ಯ ದಿನೇಶ ಆರ್ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿಗಳ ಸಂಘದ ಅಧ್ಯಕ್ಷ ಸುಂದರ ಕಾನ್ಕತ್ರಿ, ಮಂಗಳವಾಡ ಸರ್ಕಾರಿ ಆಸ್ಪತ್ರೆಯ ಆರೋಗ್ಯಾಧಿಕಾರಿ ಡಾ. ಅಮಿತಕುಮಾರ ಇದ್ದರು. ಸಂಸ್ಥೆಯ ತರಬೇತಿ ಅಧಿಕಾರಿ ಡಿ.ಡಿ, ನಾಯ್ಕ ನಿರ್ವಹಿಸಿದರು.