ಹೊಸಪೇಟೆ: ಸರ್ಕಾರದ ಎಲ್ಲ ಇಲಾಖೆಗಳು ಒಂದೇ ಕಡೆ ಇರುವಂತೆ ನೂತನ ಜಿಲ್ಲಾಡಳಿತ ಭವನ (ಮಿನಿ ವಿಧಾನಸೌಧ) ನಿರ್ಮಾಣ, ಜಿಲ್ಲಾ ಕೇಂದ್ರ ಹೊಸಪೇಟೆಯಲ್ಲಿ ಮೆಡಿಕಲ್ ಕಾಲೇಜ್, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ವಿಜಯನಗರ ಜಿಲ್ಲೆ ಪ್ರಜಾ ಜಾಗೃತಿ ವೇದಿಕೆ, ಮಾಹಿತಿ ಹಕ್ಕು ಕಾರ್ಯಕರ್ತರ ವೇದಿಕೆ ಸಂಘಟನೆಗಳ ನೇತೃತ್ವದಲ್ಲಿ ಸೋಮವಾರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ವಿವಿಧ ಬೇಡಿಕೆಗಳ ಮನವಿ ಸಲ್ಲಿಸಿ ಒತ್ತಾಯಿಸಿದರು.
ವೇದಿಕೆಯ ಪ್ರಧಾನ ಕಾರ್ಯದರ್ಶಿ ವೈ.ಯಮುನೇಶ್ ಮಾತನಾಡಿ, ವಿಜಯನಗರ ಜಿಲ್ಲೆ ರಚನೆಯಾಗಿ 5 ವರ್ಷ ಕಳೆದರೂ ಜಿಲ್ಲಾ ಕೇಂದ್ರದಲ್ಲಿ ಅಗತ್ಯವಾಗಿರುವ ಮೂಲಸೌಲಭ್ಯಗಳೂ ಇಲ್ಲದೇ ನೂತನ ಜಿಲ್ಲೆಯ ರಚನೆಯ ಮೂಲ ಉದ್ದೇಶವೇ ವಿಫಲವಾಗಿದೆ. ಹಲವು ವರ್ಷಗಳ ಜನಪರ ಸಂಘಟನೆಗಳ ಹೋರಾಟದ ಫಲವಾಗಿ 18-11-2020ರಂದು ನೂತನ ವಿಜಯನಗರ ಜಿಲ್ಲೆ ಅಸ್ತಿತ್ವಕ್ಕೆ ಬಂದಿತು. ಹೊಸ ಜಿಲ್ಲೆ ಉದಯದ ನಂತರ ಹೊಸಪೇಟೆ, ಹಿಂದುಳಿದ ತಾಲೂಕುಗಳಲ್ಲಿ ಸಮಗ್ರ ಅಭಿವೃದ್ಧಿ, ಪರಿವರ್ತನೆಯ ಗಾಳಿ ಬೀಸಬಹುದೆಂಬ ಜನರ ನಿರೀಕ್ಷೆ ಹುಸಿಯಾಗಿದೆ. ಜಿಲ್ಲಾ ಕೇಂದ್ರಕ್ಕೆ ಸಂಬಂಧಿಸಿದ ಕೆಲವು ಕಚೇರಿಗಳು ಇನ್ನು ಬಳ್ಳಾರಿಯಲ್ಲಿಯೇ ಇದ್ದು, ಪಶ್ಚಿಮ ತಾಲೂಕುಗಳ ಜನರು ತಮ್ಮ ಕೆಲಸ ಕಾರ್ಯಕ್ಕೆ ನೂರಾರು ಮೈಲು ದೂರದ ಹಳೆಯ ಜಿಲ್ಲಾ ಕೇಂದ್ರಕ್ಕೆ ಅಲೆದಾಡುವ ಪರಿಸ್ಥಿತಿ ತಪ್ಪಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.ಜಿಲ್ಲಾ ಖನಿಜ ನಿಧಿ, ಕರ್ನಾಟಕ ಗಣಿಬಾಧಿತ ಪ್ರದೇಶ ಪುನಶ್ಚೇತನ ನಿಗಮದ ವಿಶೇಷ ಆರ್ಥಿಕ ಸಂಪನ್ಮೂಲಗಳು ಜಿಲ್ಲೆಗೆ ಲಭ್ಯವಾಗಿದ್ದರೂ ಗಣಿ ಸಂಪನ್ಮೂಲಗಳ ಸಮರ್ಪಕವಾಗಿ ಸದ್ಬಳಕೆಯಾಗದೇ ಜಿಲ್ಲೆಯ ಹಿಂದುಳಿಯುವಿಕೆಗೆ ಕಾರಣವಾಗಿದೆ ಎಂದು ಹೇಳಿದರು.
ವೇದಿಕೆಯ ಅಧ್ಯಕ್ಷ ಯು.ಆಂಜನೇಯಲು ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಮಂಜೂರಾಗುವ ಅನುದಾನದ ಸದ್ಬಳಕೆ, ಅಭಿವೃದ್ಧಿ ಯೋಜನೆಗಳಲ್ಲಿ ಗುಣಮಟ್ಟ, ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಸ್ಥಳೀಯ ಮುಖಂಡರಾದ ಎ.ಪಂಪಣ್ಣ, ಎ.ಜಗನ್ನಾಥ, ಭೀಮಪ್ಪ, ನೀಲಕಂಠಪ್ಪ, ವಿಶ್ವನಾಥ, ಎಚ್.ತಿಪ್ಪೇಸ್ವಾಮಿ, ಶಿವಾನಂದ ಕೌತಾಳ್, ಎಂ.ನಾಗಲಿಂಗಪ್ಪ, ಎಂ.ಬಿ. ಗೌಡಣ್ಣನವರ್, ಎ.ಬಿ. ಬಸವರಾಜ, ಎಂ.ಶಂಕ್ರಪ್ಪ, ಕೆ.ವಿ. ರಾಮಾಲಿ, ಎಸ್.ಎಂ. ಬಾಷಾ, ಇ.ಪ್ರಶಾಂತ ಇದ್ದರು.