ಸಿಂಗಟಾಲೂರು ಬಳಿ ನವಿಲು ಧಾಮ ನಿರ್ಮಿಸಿ

| Published : Nov 11 2024, 01:09 AM IST / Updated: Nov 11 2024, 01:10 AM IST

ಸಾರಾಂಶ

ನವಿಲಿನ ನಾಟ್ಯ ಎಂಥವರನ್ನು ಮಂತ್ರಮುಗ್ಧರನ್ನಾಗಿಸುತ್ತದೆ ಎಂಬುದಕ್ಕೆ ಕಪ್ಪತ್ತಗುಡ್ಡದಲ್ಲಿ ಮೈದುಂಬಿ ನಾಟ್ಯವಾಡುತ್ತಿದ್ದ ನವಿಲುಗಳೇ ಸಾಕ್ಷಿ

ಶರಣು ಸೊಲಗಿ ಮುಂಡರಗಿ

ಮುಂಡರಗಿ ತಾಲೂಕಿನ ಸಿಂಗಟಾಲೂರು ಕ್ಷೇತ್ರದಲ್ಲಿ ಹೆಚ್ಚಿನ ನವಿಲು ಸಂತತಿ ಇದ್ದು, ಇದರ ಸಮೀಪದಲ್ಲಿಯೇ ನವಿಲು ಧಾಮ ನಿರ್ಮಾಣ ಮಾಡಬೇಕೆನ್ನುವುದು ಪಕ್ಷಿಪ್ರಿಯರು ಬಹು ವರ್ಷಗಳ ಒತ್ತಾಯವಾಗಿದೆ.

ಕೆಲವು ವರ್ಷಗಳ ಹಿಂದೆ ಬೆಳಗ್ಗೆ ಹಾಗೂ ಸಂಜೆ ಹೊತ್ತಿನಲ್ಲಿ ಕಪ್ಪತ್ತಗುಡ್ಡಕ್ಕೆ ಹಾಗೂ ಸುತ್ತಮುತ್ತಲಿನ ಪ್ರದೇಶಕ್ಕೆ ಬಂದರೆ ಸಾಕು ಅಲ್ಲಿನ ಹಸಿರು ಹಾಸಿಗೆಯ ಮೇಲೆ ಸ್ವಚ್ಛಂದವಾಗಿ ನಿರ್ಭಿಡೆಯಿಂದ ನವಿಲುಗಳು ನರ್ತಿಸುವ ದೃಶ್ಯ ಎಲ್ಲೆಡೆ ಕಾಣಬಹುದಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಕಪ್ಪತ್ತಗುಡ್ಡದಲ್ಲಿ ಆ ಸಂಖ್ಯೆ ಒಂದಿಷ್ಟು ಕಡಿಮೆಯಾಗುತ್ತಿದೆ ಎನ್ನಲಾಗುತ್ತಿದೆ.

ನವಿಲಿನ ನಾಟ್ಯ ಎಂಥವರನ್ನು ಮಂತ್ರಮುಗ್ಧರನ್ನಾಗಿಸುತ್ತದೆ ಎಂಬುದಕ್ಕೆ ಕಪ್ಪತ್ತಗುಡ್ಡದಲ್ಲಿ ಮೈದುಂಬಿ ನಾಟ್ಯವಾಡುತ್ತಿದ್ದ ನವಿಲುಗಳೇ ಸಾಕ್ಷಿಯಾಗಿದ್ದವು. ಬೆಳಗ್ಗೆ ಎಳೆ ಬಿಸಿಲಿನಲ್ಲಿ ನವಿಲಿನ ಕೇಕೆ ಮತ್ತು ನೖತ್ಯ ಕೇಳುವುದು ನೋಡುವುದೇ ಒಂದು ಸೌಭಾಗ್ಯ.

ಗಂಡು ನವಿಲಿನ ನೖತ್ಯಕ್ಕೆ ಹೆಣ್ಣು ನವಿಲು ಮಾರು ಹೋಗಿ ಓಡಾಡುತ್ತಿರುವ ದೖಶ್ಯ ಕಣ್ಣಿಗೆ ಹಬ್ಬವನ್ನುಂಟು ಮಾಡುವಂತದ್ದು. ಇತ್ತೀಚಿನ ವರ್ಷಗಳಲ್ಲಿ ಸ್ವಲ್ಪ ಮಟ್ಟಿಗೆ ನವಿಲುಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎನ್ನತ್ತಾರಾದರೂ ಇಡೀ ತಾಲೂಕಿನಾದ್ಯಂತ ಎಲ್ಲೆಂದರಲ್ಲಿ ನವಿಲುಗಳು ಕಾಣುತ್ತವೆ.

ಗದಗ ತಾಲೂಕಿನ ಬಿಂಕದಕಟ್ಟಿಯಿಂದ ಮುಂಡರಗಿ ತಾಲೂಕಿನ ಸಿಂಗಟಾಲೂರು ಕ್ಷೇತ್ರದ ವರೆಗಿರುವ ಕಪ್ಪತ್ತಗುಡ್ಡದುದ್ದಕ್ಕೂ ನವಿಲುಗಳ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದೆ. ಮುಂಡರಗಿ ಪಟ್ಟಣವೂ ಸೇರಿದಂತೆ ಡೋಣಿ, ಹಿರೇವಡ್ಡಟ್ಟಿ, ಡಂಬಳ, ಕದಾಂಪುರ, ಸಿಂಗಟಾಲೂರು, ಶೀರನಹಳ್ಳಿ, ಹಮ್ಮಿಗಿ, ನಾಗರಹಳ್ಳಿ, ಬೂದಿಹಾಳ, ಹೆಸರೂರ, ಕೊರ್ಲಹಳ್ಳಿ, ಬಾಗೇವಾಡಿ, ಕೆಲೂರು, ರಾಮೇನಹಳ್ಳಿ, ಶಿರೋಳ ಎಲ್ಲೆಡೆ ಗರಿಬಿಚ್ಚಿ ಆಡುವುದನ್ನು ಕಾಣಬಹುದು. ಅರಣ್ಯ ಇಲಾಖೆ ನವಿಲುಗಳ ಉಳುವಿಗಾಗಿ ವಿಶೇಷ ಕಾಳಜಿ ವಹಿಸುವ ಮೂಲಕ ನವಿಲುಗಳ ಸಂಖ್ಯೆ ಇನ್ನಷ್ಟು ಹೆಚ್ಚಿಸಲು ಮುಂದಾಗಬೇಕು.

ಇಲ್ಲೊಂದು ನವಿಲುಧಾಮ ನಿರ್ಮಾಣವಾಗಬೇಕನ್ನುವುದು ಇಂದು ನಿನ್ನೆಯ ಬೇಡಿಕೆಯಲ್ಲ, ಎಸ್.ಎಸ್. ಪಾಟೀಲ, ರಾಮಣ್ಣ ಲಮಾಣಿ ಹಾಗೂ ರಾಮಕೃಷ್ಣ ದೊಡ್ಡಮನಿ ಶಾಸಕರಿದ್ದಾಗಿನಿಂದಲೂ ಒತ್ತಾಯಿಸಲಾಗಿತ್ತು. ಈ ಬೇಡಿಕೆ ಮಾತ್ರ ಈಡೇರಿಲ್ಲ. ಸಿಂಗಟಾಲೂರು ಕ್ಷೇತ್ರವು ಉತ್ತರ ಕರ್ನಾಕದ ನೆಚ್ಚಿನ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದು. ಇಲ್ಲಿ ತುಂಗಭದ್ರಾ ನದಿ ಹರಿದಿದೆ. ಪ್ರತಿವರ್ಷ ಮಕರ ಸಂಕ್ರಾಂತಿಗೆ, ಕಾರ್ತಿಕ ಮಾಸದಲ್ಲಿ, ಸಿಂಗಟಾಲೂರು ಶ್ರೀ ವೀರಭದ್ರೇಶ್ವರ ಜಾತ್ರೆಗೆ ನಾಡಿನ ಲಕ್ಷಾಂತರ ಭಕ್ತರು ಬಂದು ಹೋಗುತ್ತಾರೆ. ಮೇಲಾಗಿ ಇಲ್ಲಿಯೇ ನವಿಲುಗಳ ಸಂಖ್ಯೆ ಹೆಚ್ಚಾಗಿರುವುದರಿಂದ ನಮ್ಮ ಜಿಲ್ಲಾ ಉಸ್ತುವಾರಿ ಸಚಿವರೇ ಪ್ರವಾಸೋದ್ಯಮ ಸಚಿವರಾಗಿರುವುದರಿಂದ ಇಲ್ಲೊಂದು ನವಿಲು ಧಾಮ ಮಾಡಿದರೆ ಪ್ರವಾಸಿ ಸ್ಥಾನವಾಗಿ ಬೆಳೆಯುವಲ್ಲಿಯೂ ಸಹಕಾರಿಯಾಗುತ್ತದೆ.

ಒಂದು ಅಂದಾಜಿನ ಪ್ರಕಾರ ಕಪ್ಪತ್ತಗುಡ್ಡದ ಸುತ್ತಮುತ್ತ ಸುಮಾರು 5ರಿಂದ 6 ಸಾವಿರ ನವಿಲುಗಳಿದ್ದು, ಎಲ್ಲ ವ್ಯವಸ್ಥೆ ಮಾಡಿ ಸರ್ಕಾರ ಒಂದು ನವಿಲು ಧಾಮ ನಿರ್ಮಾಣ ಮಾಡಿದರೆ ಎಲ್ಲವೂ ಒಂದೆಡೆ ವಾಸಿಸಲು ಅನುಕೂಲ ಮಾಡಿದಂತಾಗುತ್ತದೆ. ಅಲ್ಲದೇ ಪ್ರವಾಸಿಗರೂ ವೀಕ್ಷಿಸಲು ಅನುಕೂಲವಾಗುವುದರ ಜತೆಗೆ ನವಿಲುಗಳ ರಕ್ಷಣೆ ಸಹ ಮಾಡಿದಂತಾಗುತ್ತದೆ ಎಂದು ಜಿಲ್ಲಾ ಗೌರವ ವನ್ಯಜೀವಿ ಪರಿಪಾಲಕ ಸಿ.ಎಸ್. ಅರಸನಾಳ ಹೇಳಿದರು.