ನಮ್ಮ ಸಮಾಧಿಯ ಮೇಲೆ ಬಂದರು ನಿರ್ಮಾಣ ಮಾಡಿ

| Published : Jul 23 2025, 12:31 AM IST

ಸಾರಾಂಶ

ಸಾವಿರಾರು ಪ್ರತಿಭಟನಾಕಾರರು ತಹಸೀಲ್ದಾರ್ ಡಾ. ಚಿಕ್ಕಪ್ಪ ನಾಯಕ ಮೂಲಕ ಮುಖ್ಯಮಂತ್ರಿ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ

ಅಂಕೋಲಾ: ತಾಲೂಕಿನ ಕೇಣಿಯಲ್ಲಿ ನಿರ್ಮಿಸಲು ಉದ್ದೇಶಿಸಲಾದ ಬೃಹತ್ ಸರ್ವ ಋತು ವಾಣಿಜ್ಯ ಬಂದರನ್ನು ತಕ್ಷಣ ಸರ್ಕಾರ ಕೈ ಬಿಡಬೇಕು ಎಂದು ಒತ್ತಾಯಿಸಿ ಸಾವಿರಾರು ಪ್ರತಿಭಟನಾಕಾರರು 3ಕಿಮೀ ಪಾದಯಾತ್ರೆ ನಡೆಸಿ ಪ್ರತಿಭಟನೆ ನಡೆಸಿದರು.

ಕೇಣಿಯ ಅರಬ್ಬಿ ಸಮುದ್ರದ ಬಳಿಯಿಂದ ಅಂಕೋಲಾದ ತಾಲೂಕು ದಂಡಾಧಿಕಾರಿಗಳ ಕಾರ್ಯಾಲಯದವರೆಗೆ ಕಾಲ್ನಡಿಗೆಯಲ್ಲಿ ಬಂದ ಸಾವಿರಾರು ಪ್ರತಿಭಟನಾಕಾರರು ತಹಸೀಲ್ದಾರ್ ಡಾ. ಚಿಕ್ಕಪ್ಪ ನಾಯಕ ಮೂಲಕ ಮುಖ್ಯಮಂತ್ರಿ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಕಾಂಗ್ರೆಸ್ ಪ್ರಮುಖ ಗೋಪಾಲಕೃಷ್ಣ ನಾಯಕ ಮಾತನಾಡಿ, ಅತ್ಯಂತ ಕಷ್ಟದಲ್ಲಿ ಜೀವನ ಕಳೆಯುತ್ತಿರುವ ಮೀನುಗಾರಿಗೆ ಕಳೆದ ಹಲವು ದಿನಗಳಿಂದ ಈ ವಾಣಿಜ್ಯ ಬಂದರಿನ ಭೂತ ಕಾಡತೊಡಗಿದೆ. ಕೇಂದ್ರ ಸರ್ಕಾರದ ಯೋಜನೆ ಇದಾಗಿದ್ದು, ರಾಜ್ಯ ಸರ್ಕಾರ ಈ ಯೋಜನೆ ನಿರ್ವಹಿಸಲೇ ಬೇಕಾಗುತ್ತದೆ. ಇಲ್ಲಿ ಜೆ ಎಸ್ ಡಬ್ಲ್ಯೂ ಕಂಪನಿಯವರು ಮೊದಲು ಭೂಮಿ ಖರೀದಿಗಾಗಿ ರೌಡಿಶೀಟರ್‌ಗಳನ್ನು ಭೇಟಿ ಮಾಡಿ ಅವರಿಗೆ ಹಣ ನೀಡಿ ಕೋಟಿ ಕೋಟಿ ಪಂಗನಾಮ ಹಾಕಿಸಿಕೊಂಡಿದ್ದಾರೆ. ಈ ಬಂದರು ಯೋಜನೆ ಸ್ಥಳೀಯ ಮೀನುಗಾರರ ಉದ್ಧಾರಕ್ಕೆ ಬಂದಿಲ್ಲ. ಈ ಯೋಜನೆ ಉದ್ಯಮಿಗಳ ಪಾಲಿಗೆ ವರದಾನವಾಗಲಿದೆ. ಈ ಬಂದರಿಗೆ ನಮ್ಮೆಲ್ಲರ ತೀವ್ರ ವಿರೋಧವಿದೆ. ಒಂದು ವೇಳೆ ಬಂದರು ನಿರ್ಮಾಣ ಮಾಡುವುದೇ ಆದಲ್ಲಿ ನಮ್ಮೆಲ್ಲರ ಸಮಾಧಿಯ ಮೇಲೆ ಬಂದರು ನಿರ್ಮಾಣ ಮಾಡಿ ಎಂದರು.

ವಿಧಾನ ಪರಿಷತ್ ಶಾಸಕ ಗಣಪತಿ ಉಳ್ವೆಕರ್ ಮಾತನಾಡಿ, ಮೀನುಗಾರರಿಗೆ ತೊಂದರೆಯಾಗುವ ಈ ಯೋಜನೆ ನಮಗೆ ಬೇಡ. ಎಲ್ಲ ಯೋಜನೆ ನಮ್ಮ ಕರಾವಳಿ ತೀರಕ್ಕೆ ತಂದು ಹಾಕುವ ಉದ್ದೇಶ ಒಳ್ಳೆಯದಲ್ಲ. ವ್ಯವಹಾರ ವಹಿವಾಟಿಗೆ ಬೇಲೆಕೇರಿ ಬಂದರು ಸುಸಜ್ಜಿತವಾಗಿದೆ. ಮತ್ತೆ ಕೇಣಿಯಲ್ಲಿ ವಾಣಿಜ್ಯ ಬಂದರು ಮಾಡುವ ಅಗತ್ಯತೆ ಇಲ್ಲ. ಇಲ್ಲಿಯ ನಾಗರಿಕರ ಹೊಟ್ಟೆಯ ಮೇಲೆ ಹೊಡೆದರೆ ನಾವು ಸುಮ್ಮನಿರುವುದಿಲ್ಲ ಎಂದರು.

ಬಂದರೂ ವಿರೋಧಿ ಹೋರಾಟ ಸಮಿತಿಯ ಪ್ರಮುಖ ಸಂಜೀವ್ ಬಲೆಗಾರ ಮಾತನಾಡಿ, ಈ ಕೇಣಿಯಲ್ಲಿ ಬಂದರು ನಿರ್ಮಾಣ ಬೇಡ ಎನ್ನುವ ವಿಚಾರ ಪದೇಪದೇ ಎಚ್ಚರಿಸುತ್ತಲೇ ಬಂದಿದ್ದೇವೆ. ಈಗಲೂ ಸಹ ನಮ್ಮೆಲ್ಲರ ಆಗ್ರಹ ಒಂದೇ ಈ ಬಂದರನ್ನು ಮೊದಲು ತೊಲಗಿಸಿ. ಇಲ್ಲಿ ಹಲವು ಯೋಜನೆಗಳು ಬಂದು ಸಮುದ್ರ ತೀರದಲ್ಲಿ ನಿರ್ಮಾಣ ಮಾಡಿ ಮೀನುಗಾರರನ್ನು ಹೊರದಬ್ಬುವ ಕೆಲಸ ಸರ್ಕಾರ ಮಾಡುತ್ತಿವೆ. ಇದೇ ರೀತಿ ಮುಂದುವರೆದಲ್ಲಿ ಪ್ರಾಣ ಕೊಟ್ಟೆವು ಬಂದರು ಮಾಡಲು ಬಿಡಲಾರೆವು ಎಂದರು.

ಬಿಜೆಪಿ ಪ್ರಮುಖ ರಾಜೇಂದ್ರ ನಾಯ್ಕ ಮಾತನಾಡಿ, ಈಗಾಗಲೇ ನಮ್ಮ ತಾಲೂಕುಗಳಿಗೆ ಹಲವು ಯೋಜನೆ ಬಂದು ಇಲ್ಲಿಯ ಸಂಪೂರ್ಣ ಭೂಮಿ ಕಸಿದುಕೊಂಡಿವೆ. ಈಗ ಮತ್ತೆ ಯೋಜನೆ ತರುವುದು ಸರಿಯಲ್ಲ. ಅಭಿವೃದ್ಧಿಯ ಹೆಸರಲ್ಲಿ ಹಲವು ಯೋಜನೆ ಇಲ್ಲಿಗೆ ತಂದು ಇಲ್ಲಿಯ ಜನರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡಿದರೆ ನಾವು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದರು.

ಹೋರಾಟ ಸಮಿತಿಯ ಅಧ್ಯಕ್ಷ ಶ್ರೀಕಾಂತ್ ದುರ್ಗೆಕರ್, ಉದಯ ನಾಯಕ ಭಾವಿಕೇರಿ ಮಾತನಾಡಿದರು. ಬಾವಿಕೇರಿ ಗ್ರಾಪಂ ಅಧ್ಯಕ್ಷೆ ದೀಪಾ ನಾಯಕ, ಮೀನುಗಾರ ಪ್ರಮುಖ ರಾಜು ಹರಿಕಂತ್ರ, ಬಿಜೆಪಿ ಪ್ರಮುಖ ಭಾಸ್ಕರ್ ನಾರ್ವೇಕರ್, ಹೂವಾ ಖಂಡೇಕರ್, ವೆಂಕಟೇಷ ದುರ್ಗೆಕರ, ಸಂಜಯ್ ನಾಯ್ಕ ಸೇರಿದಂತೆ 3000 ಕ್ಕಿಂತಲೂ ಹೆಚ್ಚಿನ ಪ್ರತಿಭಟನಾಕಾರರು ಉಪಸ್ಥಿತರಿದ್ದರು. ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಒದಗಿಸಿತ್ತು.

ತಹಸೀಲ್ದಾರ್ ಚಿಕ್ಕಪ್ಪನಾಯಕ್ ಮನವಿ ಸ್ವೀಕರಿಸಿ ಈ ವಿಚಾರವನ್ನು ಜಿಲ್ಲಾಧಿಕಾರಿಗಳಿಗೆ ತಿಳಿಸುತ್ತೇನೆ. ಮುಂದಿನ ತಿಂಗಳಲ್ಲಿ ಸಾರ್ವಜನಿಕ ಸಂಪರ್ಕ ಅಹವಾಲು ಸಭೆ ಕರೆಯಲು ಜಿಲ್ಲಾಧಿಕಾರಿಗಳು ತಿಳಿಸಿದ್ದು ಈ ವಿಚಾರವಾಗಿ ಅವರೊಂದಿಗೆ ಮಾತನಾಡುತ್ತೇನೆ ಎಂದರು.

ಮೀನಿನ ಬುಟ್ಟಿಯಲ್ಲಿ ಅರ್ಜಿ ಸಲ್ಲಿಸಿದ ಪ್ರತಿಭಟನಾಕಾರರು: ಮೀನುಗಾರ ಮಹಿಳೆಯರು ಮೀನು ಮಾರುವ ಬುಟ್ಟಿಯಲ್ಲಿ ಅರ್ಜಿಗಳನ್ನು ತುಂಬಿ ತಂದಿದ್ದರು. ಪ್ರತಿಯೊಬ್ಬ ಪ್ರತಿಭಟನಾಕಾರರು ಒಂದೊಂದು ಅರ್ಜಿ ಪ್ರತ್ಯೇಕವಾಗಿ ಬರೆದು ಆಗ್ರಹಿಸಿದ್ದರಿಂದ 3 ಸಾವಿರಕ್ಕೂ ಹೆಚ್ಚಿನ ಅರ್ಜಿಯನ್ನು 8 ಬುಟ್ಟಿಗಳಲ್ಲಿ ತುಂಬಿ ತಹಸೀಲ್ದಾರರಿಗೆ ನೀಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.