ಸಾರಾಂಶ
ಹಿರಿಯೂರು: ಪಟ್ಟಣದ ವೇದಾವತಿ ನಗರದ 3ನೇ ವಾರ್ಡ್‌ನ ಚಂದ್ರಾ ಲೇಔಟ್ ನಿವಾಸಿಗಳು ಬರುವ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ಹೋಗಲಾದರೂ ದಾರಿ ನಿರ್ಮಿಸಿಕೊಡಿ ಎಂದು ನಾಗರಿಕ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ಎಸ್.ವಿ.ರಂಗನಾಥ್ ಮನವಿ ಮಾಡಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ಸೈಂಟ್ ಆನ್ಸ್ ಕಾನ್ವೆಂಟ್‌ನಲ್ಲಿರುವ ಮತಗಟ್ಟೆಗೆ ಹೋಗಲು ಚಂದ್ರಾ ಲೇಔಟ್ ನಿವಾಸಿಗಳಿಗೆ ರಸ್ತೆ ಸಂಪರ್ಕ ಇಲ್ಲ.ಈ ಭಾಗದ ರಸ್ತೆ ಸಮಸ್ಯೆ ಇತ್ಯರ್ಥಕ್ಕೆ ಜಿಲ್ಲಾಧಿಕಾರಿಗಳ ಆದೇಶವಿದ್ದು, ಜಿಲ್ಲಾ ಉಸ್ತುವಾರಿ ಸಚಿವರು, ಲೋಕೋಪಯೋಗಿ ಸಚಿವರು, ಮುಖ್ಯಮಂತ್ರಿಗಳು ಸಹ ಪತ್ರ ಬರೆದಿದ್ದರೂ ಕೂಡ ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ.
ರಸ್ತೆ ನಿರ್ಮಾಣ ಮಾಡಬೇಕಾದ ಜಾಗದಲ್ಲಿ ವಿದ್ಯುತ್ ಕಂಬಗಳಿವೆ. ರಸ್ತೆ ನಿರ್ಮಾಣ ಮಾಡಬೇಕಾದರೆ ಕಂಬಗಳನ್ನು ತೆರವುಗೊಳಿಸಬೇಕಾಗುತ್ತದೆ. ಆದರೆ ಅಧಿಕಾರಿಗಳು ಕಾಮಗಾರಿಗೆ ಅನುದಾನವಿಲ್ಲ ಇನ್ನಿತರೆ ಕಾರಣಗಳನ್ನು ನೀಡಿ ರಸ್ತೆ ನಿರ್ಮಾಣ ಮಾಡಲು ಹಿಂದೇಟು ಹಾಕುತ್ತಿವೆ. ರಸ್ತೆ ಇಲ್ಲದ ಹಿನ್ನೆಲೆಯಲ್ಲಿ ಜನರು 2-3 ಕಿ.ಮೀ ಸುತ್ತುವರೇದು ಹೋಗಬೇಕಾದ ಪರಿಸ್ಥಿತಿಯಿದೆ.ಚಂದ್ರಾ ಲೇಔಟ್ ನಾಗರಿಕ ಹಿತರಕ್ಷಣಾ ಸಮಿತಿವತಿಯಿಂದ 2023ರ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಲು ಮುಂದಾದಾಗ ರಾತ್ರೋರಾತ್ರಿ ನಾಮಕಾವಸ್ತೆಗೆ ಸ್ಥಳಕ್ಕೆ ಭೇಟಿ ನೀಡಿ ಶೀಘ್ರದಲ್ಲೇ ರಸ್ತೆ ಸಮಸ್ಯೆ ಇತ್ಯರ್ಥ ಮಾಡುವುದಾಗಿ ತಿಳಿಸಿದ್ದ ಅಧಿಕಾರಿಗಳು ಇಲ್ಲಿಯತನಕ ರಸ್ತೆ ಸಂಪರ್ಕ ಕಲ್ಪಿಸಿಲ್ಲ.
ರಸ್ತೆ ಬಿಡಿಸಿಕೊಡಲು ಜಿಲ್ಲಾಧಿಕಾರಿಗಳು, ನಗರ ಯೋಜನೆ ಯೋಜನಾ ನಿರ್ದೇಶಕರು, ತಹಸೀಲ್ದಾರ್, ಪೌರಾಯುಕ್ತರಿಗೆ ಹಲವಾರು ಬಾರಿ ಪೂರಕ ದಾಖಲೆಗಳ ಸಹಿತ ಅರ್ಜಿ ಸಲ್ಲಿಸಿ ಪ್ರತಿ ಭಾನುವಾರ ಚಳುವಳಿ ಮಾಡಿದ್ದೇವೆ. ಅಹೋರಾತ್ರಿ ಧರಣಿ ಸತ್ಯಾಗ್ರಹಗಳನ್ನು ಮಾಡಿದ್ದೇವೆ. ಆದಾಗ್ಯೂ ಈ ಭಾಗದ ನಾಗರೀಕರ ಗೋಳು ಕೇಳುವವರು ಇಲ್ಲವಾಗಿದೆ.ಆದ್ದರಿಂದ ಲೋಕಸಭಾ ಚುನಾವಣೆಯಲ್ಲಿ ಈ ಭಾಗದ ನಾಗರೀಕರಿಗೆ ಮತಗಟ್ಟೆಗೆ ಹೋಗಲು ತ್ವರಿತಗತಿಯಲ್ಲಿ ರಸ್ತೆ ಕಾಮಗಾರಿ ಮುಗಿಸಿ ಶಾಶ್ವತ ರಸ್ತೆ ಮಾಡಿಸಿಕೊಡಬೇಕೆಂದು ಅವರು ಜಿಲ್ಲಾಧಿಕಾರಿಗಳಿಗೆ ಒತ್ತಾಯ ಮಾಡಿದ್ದಾರೆ.