ನಗರದಲ್ಲಿ ವಾಹನ ದಟ್ಟಣೆಯಿಂದ ಉಂಟಾಗಿರುವ ಟ್ರಾಫಿಕ್‌ನ್ನು ನಿಯಂತ್ರಿಸಲು ಪ್ರಮುಖ ಸರ್ಕಲ್ ಗಳಲ್ಲಿ ಸ್ಕೈ ವಾಕ್ ಅಥವಾ ಅಂಡರ್ ಪಾಸ್ ನಿರ್ಮಿಸುವ ಮೂಲಕ ಸಾರ್ವಜನಿಕರು ಸುರಕ್ಷಿತವಾಗಿ ಓಡಾಡಲು ಅನುಕೂಲ ಮಾಡಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಸೂಚಿಸಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದಲ್ಲಿ ವಾಹನ ದಟ್ಟಣೆಯಿಂದ ಉಂಟಾಗಿರುವ ಟ್ರಾಫಿಕ್‌ನ್ನು ನಿಯಂತ್ರಿಸಲು ಪ್ರಮುಖ ಸರ್ಕಲ್ ಗಳಲ್ಲಿ ಸ್ಕೈ ವಾಕ್ ಅಥವಾ ಅಂಡರ್ ಪಾಸ್ ನಿರ್ಮಿಸುವ ಮೂಲಕ ಸಾರ್ವಜನಿಕರು ಸುರಕ್ಷಿತವಾಗಿ ಓಡಾಡಲು ಅನುಕೂಲ ಮಾಡಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಸೂಚಿಸಿದರು.ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನೂತನ ಜಿಲ್ಲಾಧಿಕಾರಿಗಳೊಂದಿಗೆ ಏರ್ಪಡಿಸಿದ್ದ ಸಮಾಲೋಚನಾ ಸಭೆಯಲ್ಲಿ ಮಾತನಾಡಿ, ಸಂದೇಶ್ ಮೋಟಾರ್ ಸರ್ಕಲ್, ಸರ್ಕಾರಿ ಮತ್ತು ಖಾಸಗಿ ಬಸ್ ನಿಲ್ದಾಣ, ಆಲ್ಕೊಳ ಸರ್ಕಲ್ ಸೇರಿದಂತೆ ನಗರದ ಅನೇಕ ಸರ್ಕಲ್‌ಗಳು ಮತ್ತು ಮುಖ್ಯ ರಸ್ತೆಗಳಲ್ಲಿ ಹೆಚ್ಚಿನ ವಾಹನ ದಟ್ಟಣೆಯಿಂದ ರಸ್ತೆ ದಾಟಲು ಹಾಗೂ ರಸ್ತೆಯಲ್ಲಿ ಸಂಚರಿಸಲು ಸಾರ್ವಜನಿಕರು ಪರದಾಡುವಂತಾಗಿದೆ. ಇದರಿಂದ ರಸ್ತೆ ಅಪಘಾತಗಳೂ ಹೆಚ್ಚುತ್ತಿದೆ. ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಿ ಸಾರ್ವಜನಿಕರಿಗೆ ಯಾವುದೇ ತೊಂದರೆ ಉಂಟಾಗದಂತೆ ಸ್ಕೈ ವಾಕ್ ಅಥವಾ ಅಂಡರ್ ಪಾಸ್ ನಿರ್ಮಾಣ ಮಾಡಬೇಕು ಎಂದು ತಿಳಿಸಿದರು.
ಈಗಾಗಲೇ ನಗರದಲ್ಲಿ ಶಿವಪ್ಪನಾಯಕ ಮತ್ತು ಅಮೀರ್ ಅಹಮದ್ ಸರ್ಕಲ್‌ನಲ್ಲಿ ಅಂಡರ್ ಪಾಸ್ ನಿರ್ಮಾಣವಾಗಿದ್ದು, ಮಳೆಗಾಲದಲ್ಲಿ ಪ್ಯಾಸೇಜ್ ನೀರು ಒಳ ಬರುವುದರಿಂದ ಇದನ್ನು ಮುಚ್ಚಲಾಗಿದೆ. ಅದನ್ನು ಕೂಡಲೇ ಪರಿಶೀಲಿಸಿ ಮಳೆಗಾಲ ಹೊರತುಪಡಿಸಿ ಉಳಿದ ದಿನಗಳಲ್ಲಿ ಅಂಡರ್‌ಪಾಸ್‌ಗಳನ್ನು ತೆರೆದು ಸಾರ್ವಜನಿಕರಿಗೆ ಸುಗಮವಾಗಿ ರಸ್ತೆ ದಾಟಲು ಅನುವು ಮಾಡಿಕೊಡಲಾಗುತ್ತದೆ ಎಂದು ತಿಳಿಸಿದರು.ಶಿವಮೊಗ್ಗದ ಶಾಂತಮ್ಮ ಲೇಔಟ್ ಮಾರ್ಗವಾಗಿ ಚಿತ್ರದುರ್ಗ ಹೋಗುವ ರಸ್ತೆ ಹಾಗೂ ಗುಂಡಪ್ಪ ಶೆಡ್ ರಸ್ತೆಯಲ್ಲಿ ಈಗಾಗಲೇ ಅಂಡರ್‌ಪಾಸ್ ಮಾಡಲು ತೀರ್ಮಾನಿಸಿದ್ದು, ಮರ ಕಡಿತ ಬಾಕಿ ಇದೆ. ಅರಣ್ಯ ಇಲಾಖೆ ಮತ್ತು ರೈಲ್ವೆ ಇಲಾಖೆ ಜಂಟಿ ಸರ್ವೆ ಮಾಡಿ ವರದಿ ನೀಡಿದ ಕೂಡಲೇ ಅಂಡರ್‌ಪಾಸ್ ಕಾಮಗಾರಿ ಕೆಲಸ ಆರಂಭವಾಗುತ್ತದೆ. ಹಾಗೂ ತರೀಕೆರೆ ಬೈ ಪಾಸ್ ಕಾಮಗಾರಿ ಮರ ಕಡಿತದಿಂದ ಅರ್ಧಕ್ಕೆ ನಿಂತಿದ್ದು, ಅರಣ್ಯ ಇಲಾಖೆ ಈ ಸಮಸ್ಯೆಯನ್ನು ಕೂಡಲೇ ಬಗೆಹರಿಸಿ ಕಾಮಗಾರಿಗೆ ದಾರಿ ಮಾಡಿಕೊಡಬೇಕು ಎಂದರು.
ಕೇಂದ್ರ ಸರ್ಕಾರ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಕಳೆದ ಬಾರಿ 3500 ಕೋಟಿ ರು.ನೀಡಿತ್ತು. ಆದರೆ ಈ ಬಾರಿ 1500 ಕೋಟಿ ರು. ಬಿಡುಗಡೆ ಮಾಡಿದೆ. ಆಗುಂಬೆ ಮಾರ್ಗದ ಅಭಿವೃದ್ಧಿಗೆ 400 ಕೋಟಿ ರು. ಬಿಡುಗಡೆ ಆಗಿದೆ. ರಾಜ್ಯ ಸರ್ಕಾರ, ಅಧಿಕಾರಿಗಳು, ಪರಿಸರವಾದಿಗಳು ವರದಿ ನೀಡಿದ ಮೇಲೆ ಆ ಮಾರ್ಗಕ್ಕೆ ಟನಲ್ ಮಾಡುವುದೊ ಅಥವಾ ರಸ್ತೆ ಅಗಲೀಕರಣ ಮಾಡುವುದೊ ಎಂಬುದರ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.ಶಿವಮೊಗ್ಗದಿಂದ ಶಿಕಾರಿಪುರಕ್ಕೆ ಸಂಚರಿಸಲು ಈಗಾಗಲೇ ರೈಲ್ವೆ ಮಾರ್ಗವನ್ನು ನಿರ್ಮಿಸಲಾಗುತ್ತಿದೆ. ಆದರೆ ಶಿಕಾರಿಪುರದಿಂದ ರಾಣೆಬೆನ್ನೂರು ರೈಲ್ವೆ ಮಾರ್ಗ ಮಾಡಲು ಭೂಸ್ವಾಧೀನ ಕುರಿತಾದ ಸಮಸ್ಯೆ ಇದೆ. ಈ ಸಮಸ್ಯೆ ಬಗೆಹರಿಸಲು ರಾಜ್ಯ ಸರ್ಕಾರ 45 ಕೋಟಿ ರು. ಹಣವನ್ನು ಒಂದು ವಾರದಲ್ಲಿ ಬಿಡುಗಡೆ ಮಾಡುವುದಾಗಿ ತಿಳಿಸಿದ್ದು, ಅದು ಬಂದ ಕೂಡಲೇ ಈ ಕಾರ್ಯ ಮುಂದುವರೆಯುತ್ತದೆ. ಮಾರ್ಚ್ ಒಳಗೆ ಶಿವಮೊಗ್ಗದಿಂದ ಶಿಕಾರಿಪುರ, ಶಿಕಾರಿಪುರದಿಂದ ರಾಣೆಬೆನ್ನೂರು ರೈಲ್ವೆ ಮಾರ್ಗ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಸಿಸಿಎಫ್ ಹನುಂತಪ್ಪ, ಎಸ್‌ಪಿ ಬಿ.ನಿಖಿಲ್, ಡಿಸಿಎಫ್ ಅಜ್ಜಯ್ಯ, ಅಪರ ಜಿಲ್ಲಾಧಿಕಾರಿ ವಿ.ಅಭಿಷೇಕ್, ವಿಶೇಷ ಭೂಸ್ವಾಧೀನಾಧಿಕಾರಿ ಸಿದ್ದಲಿಂಗ ರೆಡ್ಡಿ, ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.