ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ಯಾವುದೇ ವ್ಯಸನಗಳಿಗೆ ಬಲಿಯಾಗದೆ, ನಿಯಮಿತ ವ್ಯಾಯಾಮ, ಕ್ರೀಡಾ ಚಟುವಟಿಕೆಯಲ್ಲಿ ಭಾಗಿಯಾಗಿ ಸದೃಢರಾಗಿ ಆರೋಗ್ಯವಂತ ಸಮಾಜ ನಿರ್ಮಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಯುವಜನರಿಗೆ ಕರೆ ನೀಡಿದ್ದಾರೆ.ಅವರು ಭಾಲ್ಕಿ ಪಟ್ಟಣದ ಹೊರವಲಯದ ಅಂಬೆ ಸಾಂಗವಿ ಕ್ರಾಸ್ ರಸ್ತೆಯ ಟೇಕಣಿ ಸಮೀಪದಲ್ಲಿ ಶನಿವಾರ ಆಯೋಜಿಸಿದ್ದ 14.75 ಕೋಟಿ ರು., ಅನುದಾನದ ಹೊರಾಂಗಣ ಕ್ರೀಡಾಂಗಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ದೈಹಿಕವಾಗಿ ಸದೃಢರಾಗಿದ್ರೆ, ಅದುವೇ ಸ್ವರ್ಗ, ಆರೋಗ್ಯವೇ ಭಾಗ್ಯ ಎಂದರು.
ತಾಲೂಕಿನಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ ಆಗಬೇಕು ಎನ್ನುವುದು ಬಹು ದಿನಗಳ ಕನಸಾಗಿತ್ತು. ಆದರೆ ಸೂಕ್ತ ಜಮೀನು ಸಿಗದಿರುವ ಹಿನ್ನೆಲೆಯಲ್ಲಿ ವಿಳಂಬವಾಯಿತು. ಇದೀಗ ಪಟ್ಟಣದ ಟೇಕಣಿ ಸಮೀಪದ ಅರಣ್ಯ ಭೂಮಿಯನ್ನು ನಿಯಮಾನುಸಾರ ಹಸ್ತಾಂತರಿಸಿ ಸುಮಾರು 18 ಎಕರೆ ಪ್ರದೇಶದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ ಮಾಡಲಾಗುತ್ತಿದೆ ಎಂದರು.14.75 ಕೋಟಿ ರು., ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಕ್ರೀಡಾಂಗಣ ರಾಷ್ಟ್ರ ಮಟ್ಟದ ಕ್ರೀಡೆಗಳನ್ನು ನಡೆಸುವ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ. ಈ ಕ್ರೀಡಾಂಗಣದಲ್ಲಿ ಬ್ಯಾಡ್ಮಿಂಟನ್, ಕಬ್ಬಡಿ, ಬಾಸ್ಕೆಟ್ ಬಾಲ್, ಕ್ರಿಕೆಟ್ ಮೈದಾನ, ಈಜುಕೊಳ ಸೇರಿದಂತೆ ಏಕಕಾಲಕ್ಕೆ ಹತ್ತು ವಿವಿಧ ಆಟಗಳನ್ನು ನಡೆಸಬಹುದಾಗಿದೆ ಎಂದರು.
ಮುಂದಿನ ಒಂದು ವರ್ಷದಲ್ಲಿ ಕ್ರೀಡಾಂಗಣ ಕಾಮಗಾರಿ ಪುರ್ಣಗೊಳಿಸಿ ಸಿಎಂ ಮತ್ತು ಡಿಸಿಎಂ ಅವರನ್ನು ಕರೆಯಿಸಿ ಈ ಕ್ರೀಡಾಂಗಣವನ್ನು ಯುವ ಜನಾಂಗಕ್ಕೆ ಲೋಕಾರ್ಪಣೆ ಮಾಡಲಾಗುವುದು ಎಂದು ಭರವಸೆ ನೀಡಿದರು.ಕ್ರೀಡೆಗಳು ನೋಡುಗರಿಗೆ ಮನರಂಜನೆ ನೀಡಿದರೆ, ಆಡುವವರಿಗೆ ಆರೋಗ್ಯವನ್ನು ನೀಡುತ್ತದೆ. ದೇಹ ಸದೃಢವಾಗುತ್ತದೆ. ಬುದ್ಧಿ ಮತ್ತು ಮನಸ್ಸು ಎರಡನ್ನೂ ಸಮತೋಲನದಲ್ಲಿಡುತ್ತದೆ ಎಂದರು.ಕ್ರೀಡಾಂಗಣದ ನಿರ್ಮಾಣ ಮಾಡುತ್ತಿರುವ ಉದ್ದೇಶ. ನಮ್ಮ ಭಾಗದ ಯುವಜನರು ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ವಹಿಸಬೇಕು. ಆಸಕ್ತರು ಇಲ್ಲಿ ಬಂದು ಅಭ್ಯಾಸ ಮಾಡಬೇಕು. ಆ ಮೂಲಕ ಕ್ರೀಡಾ ಪ್ರತಿಭೆಗಳಾಗಿ ಹೊರ ಹೊಮ್ಮಬೇಕು. ತಾಲೂಕು ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗಿಯಾಗಿ, ಅಲ್ಲಿ ಗೆದ್ದು, ಜಿಲ್ಲಾ ಮಟ್ಟದಲ್ಲಿ ಮಿಂಚಿ ನಂತರ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಬೇಕು ಎಂಬುವು ದಾಗಿದೆ ಎಂದರು.
ಗ್ರಾಮೀಣ ಯುವಜನರ ಸೂಪ್ತ ಪ್ರತಿಭೆಯನ್ನು ಗುರುತಿಸಿ, ಅವರನ್ನು ಉತ್ತಮ ಕ್ರೀಡಾಪಟುಗಳಾಗಿ ರೂಪಿಸಬೇಕಾದರೆ, ಅವರಿಗೆ ಅಭ್ಯಾಸ ಮಾಡಲು ಸೂಕ್ತ ಅನುಕೂಲತೆ ಬೇಕು, ಅದನ್ನು ಈ ಕ್ರೀಡಾಂಗಣ ನಿಮಗೆ ಒದಗಿಸಲಿದೆ ಎಂದು ಹೇಳಿದರು.ಗಡಿ ಜಿಲ್ಲೆ ಬೀದರ್‌ನಲ್ಲಿ ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರು ಸುಮಾರು 2025 ಕೋಟಿ ರು., ಅನುದಾನದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ಮಾಡಿದ್ದಾರೆ. ಆದರೆ ಈ ಕ್ರೀಡಾಂಗಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿರಲಿಲ್ಲ. ಇದೀಗ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಶಶಿಕಲಾ ಅಶೋಕ, ಉಪಾಧ್ಯಕ್ಷ ವಿಜಯಕುಮಾರ ರಾಜಭವನ, ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಹಣಮಂತರಾವ್ ಚವ್ಹಾಣ್, ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ವಂಕೆ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮಡಿವಾಳಪ್ಪ ಮಂಗಲಗಿ, ಅರಣ್ಯಾಧಿಕಾರಿ ಆಶಿಶ ರೆಡ್ಡಿ, ಎಸ್ಪಿ ಪ್ರದೀಪ ಗುಂಟಿ, ಉದ್ಯಮಿ ಗುರುನಾಥ ಕೊಳ್ಳೂರ, ಪ್ರಥಮ ದರ್ಜೆ ಗುತ್ತಿಗೆದಾರ ಸಚಿನ ಕೊಳ್ಳೂರ, ಪಿಯು ಉಪನಿರ್ದೇಶಕ ಚಂದ್ರಕಾಂತ ಶಾಹಬಾದಕರ್, ತಹಸೀಲ್ದಾರ ಮಲ್ಲಿಕಾರ್ಜುನ ವಡ್ಡನಕೇರೆ ಸೇರಿದಂತೆ ಹಲವರು ಇದ್ದರು.ಲೋಕೋಪಯೋಗಿ ಇಲಾಖೆಯ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರು ಶಿವಶಂಕರ ಕಾಮಶೆಟ್ಟಿ ಸ್ವಾಗತಿಸಿದರು. ದೀಪಕ ಠಮಕೆ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಸಚಿವರು ಪ್ರತಿಜ್ಞಾವಿಧಿ ಬೋಧಿಸಿದರು.
ಕೋಟಿ ಸಸಿ ನೆಡುವ ಗುರಿಗಡಿ ಜಿಲ್ಲೆ ಬೀದರ್‌ನಲ್ಲಿ ಮುಂದಿನ ಎರಡು ವರ್ಷದೊಳಗೆ ಒಂದು ಕೋಟಿ ಸಸಿ ನೆಡುವ ಗುರಿ ಹೊಂದಲಾಗಿದೆ. ಜಿಲ್ಲೆಯಲ್ಲಿ ಹಸಿರು ಹೊದಿಕೆ ಹೆಚ್ಚಿಸುವ ಆಶಯದೊಂದಿಗೆ ಈಗಾಗಲೇ ಕಳೆದ ಎರಡು ವರ್ಷಗಳಿಂದ 40ಲಕ್ಷ ಸಸಿ ನೆಡಲಾಗಿದೆ. ನೆಟ್ಟಿರುವ ಸಸಿಗಳನ್ನು ಪಾಲನೆ ಪೋಷಣೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಕೂಡ ಮನೆಗೊಂದು ಸಸಿ ನೆಟ್ಟು ಪರಿಸರ ಸಂರಕ್ಷಣೆ ಮಾಡುವ ಕೆಲಸ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತಿಳಿಸಿದರು.