ಅಸೋಸಿಯೇಶನ್ ಆಫ್ ಕನ್ಸಸ್ಟಲಿಂಗ್ ಎಂಜಿನಿಯರ್ಸ್ ಧಾರವಾಡದ ಕರ್ನಾಟಕ ವಿಜ್ಞಾನ ಕಾಲೇಜಿನ ಆವರಣದಲ್ಲಿ ಟರ್ಬೋ ಸ್ಟೀಲ್ ಸಹಕಾರದಲ್ಲಿ ಮೂರು ದಿನಗಳ (ಡಿ. 26 ರಿಂದ 28) ಕಾಲ ಆಯೋಜಿಸಿದ್ದ ಬಿಲ್ಡ್ ಎಕ್ಸ್‌ಪೋಗೆ ಅತ್ಯದ್ಭುತ ಸ್ಪಂದನೆ ದೊರಕಿದ್ದು, ಅಭೂತಪೂರ್ವ ಯಶಸ್ವು ತಂದುಕೊಟ್ಟಿದೆ.
ಧಾರವಾಡ:
ಮನೆ ನಿರ್ಮಾಣವೆಂದರೆ ಬರೀ ಇಟ್ಟಂಗಿ, ಉಸುಕು, ಸಿಮೆಂಟ್, ಕಟ್ಟಿಗೆ ಹಾಗೂ ಕಬ್ಬಿಣದಿಂದ ಮಾತ್ರ ಎಂಬುದು ಸಾಮಾನ್ಯ ತಿಳಿವಳಿಕೆ. ಆದರೆ, ಈ ವಸ್ತುಗಳನ್ನು ಹೊರತುಪಡಿಸಿ ಹೊಸ ತಂತ್ರಜ್ಞಾನ, ಕಡಿಮೆ ವೆಚ್ಚ ಹಾಗೂ ಪರಿಸರ ಸ್ನೇಹಿಯಾಗಿ ತಮ್ಮ ಕನಸಿನ ಮನೆಯನ್ನು ಅದ್ಭುತವಾಗಿ ನಿರ್ಮಿಸಿಕೊಳ್ಳಬಹುದು ಎಂಬುದನ್ನು ಮೂರು ದಿನಗಳ ಕಾಲ ಇಲ್ಲಿ ನಡೆದ ಬಿಲ್ಡ್ ಎಕ್ಸ್‌ಪೋ ತೋರಿಸಿಕೊಟ್ಟಿದೆ.ಅಸೋಸಿಯೇಶನ್ ಆಫ್ ಕನ್ಸಸ್ಟಲಿಂಗ್ ಎಂಜಿನಿಯರ್ಸ್ ಸಂಸ್ಥೆಯು ಇಲ್ಲಿಯ ಕರ್ನಾಟಕ ವಿಜ್ಞಾನ ಕಾಲೇಜಿನ ಆವರಣದಲ್ಲಿ ಟರ್ಬೋ ಸ್ಟೀಲ್ ಸಹಕಾರದಲ್ಲಿದೀ ಬಿಲ್ಡ್ ಎಕ್ಸ್‌ಪೋ ಆಯೋಜಿಸಿತ್ತು. ಇದಕ್ಕೆ ಸಾರ್ವಜನಿಕರಿಂದ ಅತ್ಯದ್ಭುತ ಸ್ಪಂದನೆ ದೊರೆಯಿತು.
ಎಕ್ಸ್‌ಪೋದಲ್ಲಿ 66 ಮಳಿಗೆಗಳಿದ್ದು, ಮೊದಲ ದಿನ ಸುಮಾರು 2000 ಜನರ ಭೇಟಿಯಾದರೆ, 2ನೇ ದಿನ 8000 ಹಾಗೂ ಕೊನೆ ದಿನ ಬರೋಬ್ಬರಿ 12000 ಜನರು ಭೇಟಿ ನೀಡಿ ಎಕ್ಸ್‌ಪೋ ಸದುಪಯೋಗ ಮಾಡಿಕೊಂಡರು. ಮೊದಲ ದಿನ ಹೆಚ್ಚು ಆಕರ್ಷಣೆಗೊಂಡಿದ್ದು, ಲ್ಯಾಂಡ್ ಸ್ಕೇಪಿಂಗ್. ಮನೆ-ಮನೆಗಳಲ್ಲಿ ಉದ್ಯಾನವನ ಮಾಡಬೇಕೆನ್ನುವರಿಗೆ ಇಕೋ ವಿಲೇಜ್ ನಿರ್ಮಿಸಿದ್ದ ಮಾದರಿ ಗಮನ ಸೆಳೆಯಿತು.ಮಣ್ಣಿನ ಇಟ್ಟಿಗೆಗಳ ಬದಲು ಕಡಿಮೆ ತೂಕದ ಇಟ್ಟಿಗೆಗಳು, ಜಿಪ್ಸಂ ಬಳಸಿ ಸಿಮೆಂಟ್, ಮರಳು ಇಲ್ಲದೇ ಗೋಡೆ ನಿರ್ಮಾಣದ ತಾಂತ್ರಿಕತೆ, ಕಟ್ಟಿಗೆ ಬಳಕೆ ಇಲ್ಲದ ಸ್ಟೀಲ್ ಡೋರ್ಸ್, ಕಿಟಕಿ ಹಾಗೂ ಸ್ಟೇರ್‌ಕೇಸ್ ಹೀಗೆ ಮನೆ ನಿರ್ಮಾಣಕ್ಕೆ ಬೇಕಾದ ಎಲ್ಲ ತಾಂತ್ರಿಕತೆಗಳಿದ್ದವು. ಜತೆಗೆ ಮನೆಯೊಳಗಿನ ವಿನ್ಯಾಸ ಹಾಗೂ ಗೃಹ ಬಳಕೆಯ ವಸ್ತುಗಳು ಸಹ ಗ್ರಾಹಕರ ಗಮನ ಸೆಳೆದವು. ದಿನದಿಂದ ದಿನಕ್ಕೆ ಕಟ್ಟಡ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಆಗುತ್ತಿವೆ. ಹೊಸ ತಂತ್ರಜ್ಞಾನಗಳು ಬರುತ್ತಿದ್ದು, ಮನೆ ನಿರ್ಮಾಣ ಎಷ್ಟು ಕಷ್ಟವೋ ಅಷ್ಟೇ ಸರಳವೂ ಆಗುತ್ತಿದೆ. ಆದರೆ, ಮನೆ ನಿರ್ಮಾಣ ಮಾಡುವವರು ಸರಿಯಾದ ಎಂಜಿನಿಯರಿಂಗ್ ಮಾರ್ಗದರ್ಶನ ಪಡೆಯಬೇಕಷ್ಟೇ. ಬಿಲ್ಡ್ ಎಕ್ಸ್‌ಪೋ ಬರೀ ವಸ್ತುಗಳ ಪ್ರದರ್ಶನ ಮಾತ್ರವಲ್ಲದೇ ಮನೆ ನಿರ್ಮಿಸುವವರಿಗೆ ಸರಿಯಾದ ಮಾರ್ಗದರ್ಶನ ನೀಡಿತು. ವೃತ್ತಿಪರರಿಗೆ, ಹೊಸ ಪೀಳಿಗೆ ಎಂಜಿನಿಯರ್‌ಗಳಲ್ಲಿ ಇರುವ ಸಮಸ್ಯೆಗಳಿಗೆ ಪರಿಹಾರ ಮಾರ್ಗೋಪಾಯಗಳನ್ನು ಸಹ ಈ ಎಕ್ಸ್‌ಪೋ ನೀಡಿದೆ ಎನ್ನುವುದು ಅಸೋಯೇಶನ್ ಪದಾಧಿಕಾರಿಗಳ ಅಭಿಪ್ರಾಯ.
ಈ ಎಕ್ಸ್‌ಪೋ ಯಶಸ್ವಿಗೆ ಟರ್ಬೋ ಸ್ಟೀಲ್ ತುಂಬ ಸಹಕಾರ ನೀಡಿದೆ. ಮಳಿಗೆ ಹಾಕಿದ ಉತ್ಪಾದಕರು ಹಾಗೂ ಎಕ್ಸ್‌ಪೋಗೆ ಭೇಟಿ ನೀಡಿದ ಸಾವಿರಾರು ಜನರಿಗೆ ಧನ್ಯವಾದ ಹೇಳಿದ ಅಸೋಸಿಯೇಶನ್ ಅಧ್ಯಕ್ಷ ಸುನೀಲ ಬಾಗೇವಾಡಿ ಹಾಗೂ ಉಪಾಧ್ಯಕ್ಷ ಅರುಣ ಶೀಲವಂತ ಅವರು, ಎಕ್ಸ್‌ಪೋ ಸಂಪೂರ್ಣವಾಗಿ ಜನರಿಗೆ ತಲುಪಲು ಸಹಕಾರಿಯಾಗಿದ್ದು, ಪಂ. ಪುಟ್ಟರಾಜ ಗವಾಯಿಗಳ ಕಲಾ ಸಂಸ್ಥೆಯು ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ. ಎಕ್ಸ್‌ಪೋ ಬಳಿಯ ವೇದಿಕೆಯಲ್ಲಿ ಮೂರು ದಿನ ಸಂಸ್ಥೆಯ ಮಾರ್ತಾಂಡಪ್ಪ ಕತ್ತಿ ನೇತೃತ್ವದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾದವು ಎಂದರು.ಮೂರು ದಿನಗಳ ಈ ಎಕ್ಸ್‌ಪೋಗೆ ಶಾಸಕ ಮಹೇಶ ಟೆಂಗಿನಕಾಯಿ ಚಾಲನೆ ನೀಡಿದರು. ಎಕ್ಸ್‌ಪೋ ಕೈಪಿಡಿಯನ್ನು ಪಾಲಿಕೆ ಸಭಾನಾಯಕ ಈರೇಶ ಅಂಚಟಗೇರಿ ನೆರವೇರಿಸಿದರು. ಅಂಜುಮನ್ ಇಸ್ಲಾಂ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ, ಕರ್ನಾಟಕ ವಿಜ್ಞಾನ ಕಾಲೇಜಿನ ಪ್ರಾಚಾರ್ಯ ಡಾ. ಎಂ.ಎಸ್. ಸಾಳುಂಕೆ ಭಾಗವಹಿಸಿದ್ದರು. ವಿಪ ಸಭಾಪತಿ ಬಸವರಾಜ ಹೊರಟ್ಟಿ ಅಸೋಸಿಯೇಶನ್ ಗೌರವ ಸ್ವೀಕರಿಸಿದರು. ಕೊನೆ ದಿನ ಶಾಸಕ ಅರವಿಂದ ಬೆಲ್ಲದ ಸಹ ಎಕ್ಸ್‌ಪೋಗೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.