ಹರಿಹರ ನಗರ ಮಧ್ಯೆಯೇ ಇಂದಿರಾ ಕ್ಯಾಂಟೀನ್‌ ನಿರ್ಮಿಸಿ

| Published : Dec 07 2024, 12:33 AM IST

ಸಾರಾಂಶ

ಹೊನ್ನಾಳಿ ನಗರದಿಂದ ದೂರದ ಚನ್ನಪ್ಪಸ್ವಾಮಿ ವಿದ್ಯಾಪೀಠದ ಆಶ್ರಯದಲ್ಲಿ ನಡೆಯುತ್ತಿರುವ ಎಸ್.ಎಂ.ಎಫ್,ಸಿ. ಕಾಲೇಜು ಆವರಣ ಸಮೀಪ ಇಂದಿರಾ ಕ್ಯಾಂಟಿನ್ ನಿರ್ಮಾಣ ವಿಚಾರಕ್ಕೆ ಪುರಸಭೆ ಸದಸ್ಯ ಹೊಸಕೇರಿ ಸುರೇಶ್ ಸೇರಿದಂತೆ ಕೆಲ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ.

- ಪುರಸಭೆ ಅಧ್ಯಕ್ಷ ಮೈಲಪ್ಪ ಅಧ್ಯಕ್ಷತೆ ವಿಶೇಷ ಸಭೆಯಲ್ಲಿ ಸದಸ್ಯರ ಆಗ್ರಹ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ನಗರದಿಂದ ದೂರದ ಚನ್ನಪ್ಪಸ್ವಾಮಿ ವಿದ್ಯಾಪೀಠದ ಆಶ್ರಯದಲ್ಲಿ ನಡೆಯುತ್ತಿರುವ ಎಸ್.ಎಂ.ಎಫ್,ಸಿ. ಕಾಲೇಜು ಆವರಣ ಸಮೀಪ ಇಂದಿರಾ ಕ್ಯಾಂಟಿನ್ ನಿರ್ಮಾಣ ವಿಚಾರಕ್ಕೆ ಪುರಸಭೆ ಸದಸ್ಯ ಹೊಸಕೇರಿ ಸುರೇಶ್ ಸೇರಿದಂತೆ ಕೆಲ ಸದಸ್ಯರು ವಿರೋಧ ವ್ಯಕ್ತಪಡಿಸಿದರು.

ಶುಕ್ರವಾರ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಮೈಲಪ್ಪ ಅಧ್ಯಕ್ಷತೆಯಲ್ಲಿ ಜರುಗಿದ ವಿಶೇಷ ಸಭೆಯಲ್ಲಿ ಸದಸ್ಯ ಹೊಸಕೇರಿ ಸುರೇಶ್ ಮಾತನಾಡಿ, ನಗರದ ಹೃದಯ ಭಾಗದಲ್ಲಿ ಇಂದಿರಾ ಕ್ಯಾಂಟಿನ್ ನಿರ್ಮಿಸಬೇಕು. ಹೀಗಾದಲ್ಲಿ ಸರ್ಕಾರದ ಸದ್ದುದ್ದೇಶ ಈಡೇರುತ್ತಿತ್ತು. ಆದರೆ ಈಗ ಇಂದಿರಾ ಕ್ಯಾಂಟಿನ್ ನಿರ್ಮಾಣ ಆಗುತ್ತಿದೆ. ಶ್ರಮಿಕರು, ಕೂಲಿಕಾರರು ಹಾಗೂ ಬಡವರು ಎಲ್ಲರೂ ನಗರದಿಂದ ದೂರ ಇರುವ ಕಾಲೇಜು ಆವರಣವರೆಗೆ ಹೋಗಿ ಊಟ, ಉಪಾಹಾರ ಮಾಡಲಿಕ್ಕೆ ಅಸಾಧ್ಯ ಎಂದರು.

ಈ ನಿರ್ಧಾರ ಬದಲು ನಗರದ ಹೃದಯ ಭಾಗದಲ್ಲಿಯೇ ಕ್ಯಾಂಟಿನ್ ನಿರ್ಮಾಣ ಮಾಡಿದಿದ್ದರೆ ಎಲ್ಲ ವರ್ಗದ ಜನರಿಗೆ ತುಂಬಾ ಅನುಕೂಲ. ಆದ್ದರಿಂದ ಪಟ್ಟಣದ ಖಾಸಗಿ ಬಸ್ ನಿಲ್ದಾಣ ಸುತ್ತಮುತ್ತ ಪ್ರದೇಶಗಳ ಜಾಗದ ಎಲ್ಲಿಯಾದರೂ ನಿರ್ಮಿಸಿದರೆ ತುಂಬಾ ಅನುಕೂಲ ಎಂದು ಹೇಳಿದರು.

ಸದಸ್ಯ ಎಂ.ಸುರೇಶ್ ಮಾತನಾಡಿ, ನಗರದಲ್ಲಿ ಎಲ್ಲಿಯೂ 60*60 ನಿವೇಶನ ಇಲ್ಲ. ಹಾಗಾಗಿ ಇಂದಿರಾ ಕ್ಯಾಂಟಿನ್‌ ಕಾಲೇಜು ಆವರಣದಲ್ಲಿ ನಿರ್ಮಾಣ ಮಾಡಲು ಶಾಸಕರು, ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಇಲ್ಲಿ ಕ್ಯಾಂಟಿನ್ ನಿರ್ಮಿಸಿದಲ್ಲಿ ವಿದ್ಯಾರ್ಥಿಗಳು ಹಾಗೂ ಪಕ್ಕದ ಆಸ್ಪತ್ರೆಯ ರೋಗಿಗಳು, ನ್ಯಾಯಾಲಯಕ್ಕೆ ಬರುವ ಕಕ್ಷಿದಾರರು, ಸಾರ್ವಜನಿಕರು ಎಲ್ಲರಿಗೂ ಪ್ರಯೋಜನ ಸಿಗಲಿದೆ ಎಂದು ಸಮಜಾಯಿಷಿ ನೀಡಿದರು.

ಹಿಂದಿನ ಸಾಮಾನ್ಯ ಸಭೆಯಲ್ಲಿ ಮುಂದೂಡಿದ ಜಮಾ ಖರ್ಚು ಓದಿ, ಚರ್ಚಿಸಿ ಒಪ್ಪುವ ವಿಚಾರದಲ್ಲಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಫೆ. 2023ರಿಂದ ಆಗಸ್ಟ್ 2024 ರವರೆಗೆ ನಡೆದ ಜಮಾ ಖರ್ಚುಗಳ ಚರ್ಚೆ ಸಂದರ್ಭ ಈ ಅವಧಿಯಲ್ಲಿ ಆಗಿರುವ ಜಮಾ ಖರ್ಚಿನ ಬಗ್ಗೆ ತನಿಖೆಗೆ ಒಳಪಡಿಸಬೇಕು ಎಂದು ಕೆಲ ಸದಸ್ಯರು ಅಧ್ಯಕ್ಷರನ್ನು ಒತ್ತಾಯಿಸಿದರು. ಆಗ ಸದಸ್ಯರ ನಡುವೆ ಮಾತಿನ ಚಕಮಕಿ ಉಂಟಾಯಿತು. ಆದರೆ ಈ ಬಗೆ ಸ್ಪಷ್ಟ ನಿಲುವಿಗೆ ಸಭೆ ಬರಲಿಲ್ಲ.

ನೂತನವಾಗಿ ನಿರ್ಮಿಸಿರುವ ಆರು ಮಳಿಗೆಗಳ ಹರಾಜು ಪ್ರಕ್ರಿಯೆ ಬಗ್ಗೆ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು. ಬಾಕಿ 26 ಮಳಿಗೆಗಳನ್ನು ಏಕೆ ಹರಾಜು ಮಾಡಿಲ್ಲ ಎಂದು ಮುಖ್ಯಾಧಿಕಾರಿಯನ್ನು ಸದಸ್ಯರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಲೀಲಾವತಿ, 26 ಮಳಿಗೆಗಳು ಹರಾಜು ಮಾಡಲು ತಾಂತ್ರಿಕ ತೊಂದರೆ ಇತ್ತು. ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಂದ ವರದಿ ಬಂದ ನಂತರ ಮಳಿಗೆಗಳ ಹರಾಜು ಪ್ರಕ್ರಿಯೆ ನಡೆಸಲಾಗುವುದು. ಮೊದಲು ನೂತನ ಮಳಿಗೆಗಳನ್ನು ಹರಾಜು ಮಾಡಲು ಅನುಮತಿ ನೀಡಿ ಎಂದರು. ಆಗ ಹೇಗಿದ್ದರೂ ರಸ್ತೆ ಅಗಲೀಕರಣಕ್ಕೆ ಏಳೆಂಟು ಮಳಿಗೆಗಳು ನೆಲಸಮಾ ಆಗಲಿವೆ. ರಸ್ತೆ ಅಗಲೀಕರಣ ನಂತರ ಎಲ್ಲ ಮಳಿಗೆಗಳ ಹರಾಜು ಮಾಡುವ ಕುರಿತು ಸರ್ವಾನುಮತದಿಂದ ತೀರ್ಮಾನ ತೆಗೆದುಕೊಳ್ಳಲಾಯಿತು.

ಸಭೆಯಲ್ಲಿ ಉಪಾಧ್ಯಕ್ಷೆ ಸಾವಿತ್ರಮ್ಮ ವಿಜೇಂದ್ರಪ್ಪ, ಮಾಜಿ ಅಧ್ಯಕ್ಷರಾದ ಕೆ.ವಿ.ಶ್ರೀಧರ್, ಬಾಬು ಹೋಬಳದಾರ್, ಸದಸ್ಯರಾದ ಬಾವಿ ಮನೆ ರಾಜಪ್ಪ, ರಾಜೇಂದ್ರ, ಸುಮಾ ಮಂಜುನಾಥ್, ಸವಿತಾ ಮಹೇಶ್ ಹುಡೇದ್, ಸುಮಾ ಸತೀಶ್, ಉಷಾ ಗಿರೀಶ್, ಪದ್ಮಾ ಪ್ರಶಾಂತ್, ಅನುಶಂಕರ್ ಚಂದ್ರು, ಎಂಜಿನಿಯರ್ ದೇವರಾಜ್, ಮೋಹನ್ ಇತರರು ಇದ್ದರು.

- - - -6ಎಚ್.ಎಲ್.ಐ2:

ಹೊನ್ನಾಳಿ ಪುರಸಭೆ ಸಭಾಂಗಣದಲ್ಲಿ ಶುಕ್ರವಾರ ಅಧ್ಯಕ್ಷ ಮೈಲಪ್ಪ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ನಡೆಯಿತು.