ಸಾರಾಂಶ
ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳ ಆಯ್ದ ಗ್ರಾಮೀಣ ಶಾಲೆಗಳನ್ನು ನಗರ ಪ್ರದೇಶದಲ್ಲಿರುವ ಖಾಸಗಿ ಶಾಲೆಗಳ ಮಾದರಿಯಲ್ಲಿ ತಯಾರಿಸಲು ಅಗತ್ಯ ಕ್ರಮ ಕೈಗೊಳ್ಳಿ ಎಂದು ಜಿಪಂ ಸಿಇಒ ರಾಹುಲ್ ಶಿಂಧೆ ನಿರ್ದೇಶನ ನೀಡಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳ ಆಯ್ದ ಗ್ರಾಮೀಣ ಶಾಲೆಗಳನ್ನು ನಗರ ಪ್ರದೇಶದಲ್ಲಿರುವ ಖಾಸಗಿ ಶಾಲೆಗಳ ಮಾದರಿಯಲ್ಲಿ ತಯಾರಿಸಲು ಅಗತ್ಯ ಕ್ರಮ ಕೈಗೊಳ್ಳಿ ಎಂದು ಜಿಪಂ ಸಿಇಒ ರಾಹುಲ್ ಶಿಂಧೆ ನಿರ್ದೇಶನ ನೀಡಿದರು.ನಗರದ ಜಿಪಂ ಕಚೇರಿಯ ಸಭಾಂಗಣದಲ್ಲಿ ಸೋಮವಾರ ನಡೆದ ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳ ಶಿಕ್ಷಣ ಇಲಾಖೆಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗ್ರಾಮೀಣ ಶಾಲೆಗಳ ಮೂಲಸೌಕರ್ಯ ಉತ್ತಮಗೊಳಿಸುವುದರಿಂದ, ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣಕ್ಕಾಗಿ ನಗರಗಳಿಗೆ ವಲಸೆ ಹೋಗದೇ ಇರುವಂತೆ ತಡೆಯಲು ಸರ್ಕಾರ ಗ್ರಾಮಾಂತರ ಪ್ರದೇಶಗಳಲ್ಲಿ 1 ರಿಂದ 12ನೇ ತರಗತಿಯವರೆಗೆ ಗುಣಮಟ್ಟದ ಶಿಕ್ಷಣ ನೀಡಲು ಯೋಜಿಸಿದೆ ಎಂದು ತಿಳಿಸಿದರು.
ಈಗಾಗಲೇ ಆಯ್ಕೆಯಾದ ಶಾಲೆಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳು, ಮಾನವ ಸಂಪನ್ಮೂಲ (ಭೋಧಕ ಹಾಗೂ ಭೋಧಕೇತರ)ಗಳನ್ನು ಒದಗಿಸುವುದು ಈ ಯೋಜನೆಯ ಮೂಲ ಉದ್ದೇಶವಾಗಿರುತ್ತದೆ. ಇದರಿಂದಾಗಿ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆಯಲ್ಲಿ ಏರಿಕೆಯಾಗಲಿದೆ ಎಂದು ತಿಳಿಸಿದರು. ಆದ್ದರಿಂದ ಬೆಳಗಾವಿ ಹಾಗೂ ಚಿಕ್ಕೋಡಿಗೆ ತಲಾ 14 ಮತ್ತು 16 ಆಯ್ಕೆಯಾಗಿರುವ ಶಾಲೆಗಳ ನಿವೇಶನದ ಟೋಟಲ್ ಸ್ಟೇಷನ್ ಸರ್ವೆ ಕಾರ್ಯ ನಡೆಸಿ, ನಿವೇಶನದ ವಿಸ್ತೀರ್ಣ, ಭೌಗೋಳಿಕ ಗುಣ ಲಕ್ಷಣ , ಕೌಂಟರ್ ಮ್ಯಾಪ್, ಹಾಲಿ ಇರುವ ಕಟ್ಟಡಗಳನ್ನು ಗುರ್ತಿಸಿ ಅವುಗಳ ಸ್ಚಾಬಿಲಿಟಿ ಸರ್ಪಿಫಿಕೆಟ್ , ನಕಾಶೆ, ಮಣ್ಣಿನ ಪರೀಕ್ಷಾ ವರದಿ ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಲು ಸಭೆಗೆ ತಿಳಿಸಿದರು.2023-24ನೇ ಸಾಲಿನ ಫಲಿತಾಂಶದ ಆಧಾರದ ಮೇಲೆ 2024-25ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ವಾರ್ಷಿಕ ಪರೀಕ್ಷೆಗಳ ಫಲಿತಾಂಶ ಸುಧಾರಣೆಗೆ ಕ್ರಮ ಹಾಗೂ ಮಾರ್ಗೋಪಾಯಗಳನ್ನು ಹಾಕಿಕೊಂಡು ಸಕ್ರಿಯವಾಗಿ ಕಾರ್ಯನಿರ್ವಹಿಸಲು ಸೂಚಿಸಿದರು.
ಬೆಳಗಾವಿ ಹಾಗೂ ಚಿಕ್ಕೋಡಿಯ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮೋಹನಕುಮಾರ ಹಂಚಾಟೆ, ಡೈಟ್ ಡಿ.ಡಿಪಿ.ಐ ಅಭಿವೃದ್ದಿ ಬಿ.ಎಮ್. ನಾಲತವಾಡ, ಜಿಲ್ಲಾ ಯೋಜನಾ ಉಪ ಸಮನ್ವಯಾಧಿಕಾರಿಗಳು ಬಿ.ಎಚ್.ಮಿಲ್ಲಾನಟ್ಟಿ, ಪ್ರಕಾಶ, ರೇವತಿ ಮಠದ, ಇಒ ಸುಜಾತಾ ಬಾಳೆಕುಂದ್ರಿ, ಬಿ.ಇ.ಒ ಅಜಿತ ಮಣ್ಣಿಕೇರಿ, ಜಿ.ಬಿ. ಬಳಿಗಾರ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.