ತಳ ಸಮುದಾಯದವರು ಸಂಘಟನಾ ಶಕ್ತಿ ಬೆಳೆಸಿಕೊಳ್ಳಿ

| Published : Jan 20 2025, 01:30 AM IST

ಸಾರಾಂಶ

ತಳ ಸಮುದಾಯದವರು ಸಂಘಟಿತರಾಗಿ ಶಕ್ತಿ ರೂಢಿಸಿಕೊಂಡಾಗ ಹಕ್ಕುಗಳನ್ನು ಪಡೆಯಲು ಸಾಧ್ಯವಾಗುತ್ತದೆ, ತಮ್ಮ ಬೇಡಿಕೆಗಳಿಗೂ ಬೆಲೆ ಬರುತ್ತದೆ. ವಿಶೇಷವಾಗಿ ರಾಜಕೀಯ ಅಧಿಕಾರ ಹೊಂದಿದರೆ ತಮ್ಮ ಸಮುದಾಯದ ಆಗುಹೋಗುಗಳಿಗೆ ಧ್ವನಿಯಾಗಬಹುದು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.

ಕನ್ನಡಪ್ರಭ ವಾರ್ತೆ, ತುಮಕೂರುತಳ ಸಮುದಾಯದವರು ಸಂಘಟಿತರಾಗಿ ಶಕ್ತಿ ರೂಢಿಸಿಕೊಂಡಾಗ ಹಕ್ಕುಗಳನ್ನು ಪಡೆಯಲು ಸಾಧ್ಯವಾಗುತ್ತದೆ, ತಮ್ಮ ಬೇಡಿಕೆಗಳಿಗೂ ಬೆಲೆ ಬರುತ್ತದೆ. ವಿಶೇಷವಾಗಿ ರಾಜಕೀಯ ಅಧಿಕಾರ ಹೊಂದಿದರೆ ತಮ್ಮ ಸಮುದಾಯದ ಆಗುಹೋಗುಗಳಿಗೆ ಧ್ವನಿಯಾಗಬಹುದು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.ಜಿಲ್ಲಾ ಮೇದ (ಎಸ್.ಟಿ) ಗಿರಿ ಜನಾಂಗ ಕ್ಷೇಮಾಭಿವೃದ್ಧಿ ಸಂಘ ಭಾನುವಾರ ನಗರದ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಮೇದರ ಸಮಾವೇಶ, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಗೌರವಾರ್ಪಣೆ ಹಾಗೂ ವಧೂವರರ ಸಮಾವೇಶ ಸಮಾರಂಭದಲ್ಲಿ ಮಾತನಾಡಿದರು. ಮೇದರ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರು, ಸಿಬ್ಬಂದಿ ನೇಮಕ, ಅನುದಾನ ಬಿಡುಗಡೆ ಮತ್ತಿತರ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿಗಳ ಬಳಿಗೆ ನಿಯೋಗ ಬನ್ನಿ ನಿಮ್ಮ ಜೊತೆ ನಾನೂ ಇರುತ್ತೇನೆ, ಅವರೊಂದಿಗೆ ಚರ್ಚಿಸಿ ಬೇಡಿಕೆ ಈಡೇರಿಸಿಕೊಳ್ಳೋಣ ಎಂದರು.ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಳಸಮುದಾಯಗಳಿಗೆ ನ್ಯಾಯ ಒದಗಿಸಲು ಆದ್ಯತೆ ನೀಡುತ್ತಾರೆ. ಇಂತಹ ಸಮುದಾಯಗಳಿಗೆ ಶಕ್ತಿ ತುಂಬುವಲ್ಲಿ ದೇವರಾಜ ಅರಸು ನಂತರ ಸಿದ್ದರಾಮಯ್ಯನವರು ಹೆಚ್ಚು ಕಾಳಜಿ ವಹಿಸಿದ್ದಾರೆ. ಯಾರೊಬ್ಬರೂ ಹಸಿವಿನಿಂದ ಇರಬಾರದು ಎಂದು ಸಿದ್ದರಾಮಯ್ಯನವರು ಅನ್ಯಭಾಗ್ಯದಂತಹ ಪುಣ್ಯದ ಯೋಜನೆಯನ್ನು ಜಾರಿಗೆ ತಂದು ರಾಜ್ಯದ ಬಡವರಲ್ಲಿ ಅನ್ನದ ಚಿಂತೆ ಇಲ್ಲದಂತೆ ಮಾಡಿದರು ಎಂದು ಹೇಳಿದರು.ಮೇದರು ಶ್ರಮಿಕ ಸಮುದಾಯದವರು. ಬೆವರು ಸುರಿಸಿ ಬದುಕುವವರು. ಬಿದಿರಿನ ಕಸುಬು ಅನುಸರಿಸಿಕೊಂಡು ಬರುವ ಮೇದರ ಜೀವನ ಈಗ ಸಂಕಷ್ಟದಲ್ಲಿದೆ. ಕುಲಕಸುಬು ಈಗ ಲಾಭದಾಯಕವಾಗಿಲ್ಲ, ಕಸುಬನ್ನು ಅವಲಂಬಿಸದೆ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರನ್ನು ಸಮಾಜದಲ್ಲಿ ಒಳ್ಳೆಯ ಸ್ಥಾನ ಪಡೆಯಲು ಆದ್ಯತೆ ನೀಡಿ. 2025ರ ಜನಗಣತಿಯಲ್ಲಿ ಮೇದರು ತಮ್ಮ ಜಾತಿ ಸಂಬಂಧಿಸಿದ ಸಮರ್ಪಕ ಮಾಹಿತಿಯನ್ನು ನೋಂದಾಯಿಸಿ, ಜನಸಂಖ್ಯೆ ಆಧಾರದಲ್ಲಿ ಹಕ್ಕು, ಅನುಕೂಲಗಳನ್ನು ಪಡೆಯಿರಿ ಎಂದು ಸಚಿವ ಕೆ.ಎನ್.ರಾಜಣ್ಣ ಸಲಹೆ ಮಾಡಿದರು.ಚಿತ್ರದುರ್ಗ ಮೇದರ ಗುರುಪೀಠದ ಇಮ್ಮಡಿ ಬಸವ ಮೇದಾರ ಕೇತೇಶ್ವರ ಸ್ವಾಮೀಜಿ ಸಮಾರಂಭದ ಸಾನಿಧ್ಯವಹಿಸಿ, ರಾಜ್ಯದಲ್ಲಿ ಮೇದರ ಒಳಪಂಗಡಗಳು ಸೇರಿ ಸುಮಾರು ನಾಲ್ಕೂವರೆ ಲಕ್ಷ ಜನಸಂಖ್ಯೆ ಇದ್ದು, ಜನಸಂಖ್ಯೆಗೆ ಆಧಾರದಲ್ಲಿ ನಮಗೆ ಸರ್ಕಾರದ ಸವಲತ್ತುಗಳು ದೊರೆಯುತ್ತಿಲ್ಲ, ಮೇದರ ಅಭಿವೃದ್ಧಿ ನಿಗಮದ ಕಚೇರಿ ಸ್ಥಾಪನೆ ಮಾಡಿ, ಅಧ್ಯಕ್ಷರು, ಸಿಬ್ಬಂದಿ ನೇಮಕ ಮಾಡಿ ನಮ್ಮ ಜನಸಂಖ್ಯೆಗೆ ಆಧಾರದಲ್ಲಿ ಅನುದಾನ ಬಿಡುಗಡೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.ಬಸವಣ್ಣನವರ ಸಮಕಾಲೀನರಾದ ಶರಣ ಮೇದಾರ ಕೇತಯ್ಯ ಅವರ ಜಯಂತಿಯನ್ನು ಸರ್ಕಾರ ರಜೆರ ಹಿತವಾಗಿ ಆಚರಣೆ ಮಾಡಬೇಕು, ಮೇದರ ಸಮುದಾಯದ ನಾಯಕರನ್ನು ವಿಧಾನ ಪರಿಷತ್ತಿಗೆ ನೇಮಕ ಮಾಡಬೇಕು. ಈ ಸಂಬಂಧ ಮುಖ್ಯಮಂತ್ರಿಗಳ ಬಳಿಗೆ ನಿಯೋಗ ಹೋಗಿ ಬೇಡಿಕೆ ಸಲ್ಲಿಸಬೇಕು, ಇದಕ್ಕಾಗಿ ತಾವು ಸಹಕಾರ ನೀಡಬೇಕು ಎಂದು ಸಚಿವ ಕೆ.ಎನ್.ರಾಜಣ್ಣ ಅವರಿಗೆ ಹೇಳಿದರು. ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಮಾತನಾಡಿ, ಸಣ್ಣ ಸಮುದಾಯಗಳು ಸಂಘಟನೆಯಾಗಬೇಕು ಇಲ್ಲವಾದರೆ ರಾಜಕಾರಣಿಗಳೂ ಸೇರಿದಂತೆ ಎಲ್ಲರೂ ನಿಮ್ಮನ್ನು ಪರಿಗಣಿಸುವುದಿಲ್ಲ. ಸಂಘಟನೆಯಾದಾಗ ಮಾತ್ರ ಸವಲತ್ತು, ರಾಜಕೀಯ ಪ್ರಾತಿನಿಧ್ಯ ಪಡೆಯಲು, ಸರ್ಕಾರದ ಗಮನ ಸೆಳೆಯಲು ಸಾಧ್ಯ. ಮೇದರು ಎಷ್ಟು ದಿನ ಹೀಗೆ ಎಲೆಮರೆಯ ಕಾಯಿಯಂತೆ ಇರುವಿರಿ. ಸಂಘಟಿತರಾಗಿ ಸಮಾಜದ ಮುಖ್ಯವಾಹಿನಿಗೆ ಬನ್ನಿ ಎಂದು ಕರೆ ನೀಡಿದರು.ನಿವೃತ್ತ ಇಂಜಿನಿಯರ್, ಮೇದರ ಟ್ರಸ್ಟ್ ಅಧ್ಯಕ್ಷ ಸಿ.ಸಿ.ಪಾಟೀಲ್ ಅವರು ತಮ್ಮ ಸಮುದಾಯದ ವಿವಿಧ ಬೇಡಿಕೆಗಳ ಬಗ್ಗೆ ಸಚಿವರಿಗೆ ವಿವರ ನೀಡಿದರು.ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು ಆಗಮಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು. ಈ ವೇಳೆ ಮೇದ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ವಿತರಿಸಲಾಯಿತು. ಸಮಾಜದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.ವಿಜಯಪುರ ನಗರ ಪಾಲಿಕೆ ಉಪಮೇಯರ್ ದಿನೇಶ್ ಹಳ್ಳಿ, ಹೊಸದುರ್ಗ ಪುರಸಭೆ ಅಧ್ಯಕ್ಷೆ ರಾಜೇಶ್ವರಿ ಆನಂದ್, ಪ್ರಾಧ್ಯಾಪಕ ಡಾ.ಎಸ್.ಕುಂಭಿನರಸಯ್ಯ, ಜಿಲ್ಲಾ ಸಂಘದ ಗೌರವಾಧ್ಯಕ್ಷ ದೊರೆರಾಜ್, ಅಧ್ಯಕ್ಷ ಚೆನ್ನಬಸವಯ್ಯ, ಉಪಾಧ್ಯಕ್ಷ ನಾಗರಾಜು, ಕಾರ್ಯದರ್ಶಿ ನಾರಾಯಣರಾಜು, ಖಜಾಂಚಿ ಬಂಬೂ ಮೋಹನ್, ಗುತ್ತಿಗೆದಾರ ಎ.ಡಿ.ಬಲರಾಮಯ್ಯ, ಮುಖಂಡರಾದಶಿರಾ ರಾಮಣ್ಣ, ಡಾ. ಚಂದ್ರಶೇಖರ್, ಡಾ.ಕೀರ್ತನಾ, ಹನುಮಂತಪ್ಪ, ಜಗದೀಶ್, ಡಾ.ಮುರಳೀಧರ್, ಕರಾಟೆ ಕೃಷ್ಣಮೂರ್ತಿ ಮೊದಲಾದವರು ಭಾಗವಹಿಸಿದ್ದರು.