ನೂರು ವರ್ಷ ಬಾಳಿಕೆ ಬಂದಿರುವ ಬ್ರಿಟಿಷ್‌ ಕಟ್ಟಡಗಳು ನಮ್ಮ ಕಣ್ಮುಂದಿವೆ. ಆ ರೀತಿಯಲ್ಲಿ ಬಾಳಿಕೆ ಬರುವ ಗುಣಮಟ್ಟದ ಕಟ್ಟಡಗಳನ್ನು ನಿರ್ಮಾಣ ಮಾಡಬೇಕೆಂದು ಶಾಸಕ ಕೆ.ಎಸ್.ಬಸವಂತಪ್ಪ ಗುತ್ತಿಗೆದಾರ ಮತ್ತು ಎಂಜಿನಿಯರ್‌ಗೆ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ನೂರು ವರ್ಷ ಬಾಳಿಕೆ ಬಂದಿರುವ ಬ್ರಿಟಿಷ್‌ ಕಟ್ಟಡಗಳು ನಮ್ಮ ಕಣ್ಮುಂದಿವೆ. ಆ ರೀತಿಯಲ್ಲಿ ಬಾಳಿಕೆ ಬರುವ ಗುಣಮಟ್ಟದ ಕಟ್ಟಡಗಳನ್ನು ನಿರ್ಮಾಣ ಮಾಡಬೇಕೆಂದು ಶಾಸಕ ಕೆ.ಎಸ್.ಬಸವಂತಪ್ಪ ಗುತ್ತಿಗೆದಾರ ಮತ್ತು ಎಂಜಿನಿಯರ್‌ಗೆ ಸೂಚನೆ ನೀಡಿದರು.

ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ವಡೆಯರಹಳ್ಳಿ ಗ್ರಾಮದಲ್ಲಿ ಭಾನುವಾರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ನೂತನವಾಗಿ ನಿರ್ಮಿಸಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಶಿಕ್ಷಕರ, ಸಿಬ್ಬಂದಿಯ 9.60 ಕೋಟಿ ರು. ವೆಚ್ಚದ ವಸತಿ ಸಮುಚ್ಚಯ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ದೂರದಿಂದ ಶಾಲೆಗೆ ಬರಲು ಪ್ರತಿನಿತ್ಯ ಭಾರಿ ಸಮಸ್ಯೆ ಆಗುತ್ತಿದೆ ಎಂದು ಶಿಕ್ಷಕರು ಮತ್ತು ಸಿಬ್ಬಂದಿ ವಸತಿ ಸಮುಚ್ಚಯ ನಿರ್ಮಾಣಕ್ಕೆ ಸಾಕಷ್ಟು ಒತ್ತಡ ಹಾಕಿದ್ದರು. ಅಲ್ಪಸಂಖ್ಯಾತ ಇಲಾಖೆ ಸಚಿವರ ಬಳಿ ಈ ಬಗ್ಗೆ ಚರ್ಚಿಸಿ 9.60 ಕೋಟಿ ರೂ. ಬಿಡುಗಡೆ ಮಾಡಿಸಿ, ಈಗ ವಸತಿ ಸಮುಚ್ಛಯ ನಿರ್ಮಾಣ ಮಾಡಲಾಗುತ್ತಿದೆ. ಬ್ರಿಟಿಷರ ಕಟ್ಟಡಗಳು ಬಾಳಿಕೆ ಬರುವ ರೀತಿಯಲ್ಲಿ ಕಟ್ಟಡಗಳನ್ನು ನಿರ್ಮಾಣ ಮಾಡಬೇಕೆಂದು ಗುಣಮಟ್ಟದ ಕಾಮಗಾರಿಗೆ ತಾಕೀತು ಮಾಡಿದರು.

ಶಾಲೆಗೆ ಸಂಪರ್ಕ ಕಲ್ಪಿಸುವ ರಸ್ತೆ, ಕಾಲುವೆ ನಿರ್ಮಾಣ, ಕಾಂಪೌಂಡ್ ನಿರ್ಮಾಣ ಸೇರಿದಂತೆ ಶಾಲೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಇನ್ನು 9 ಕೋಟಿ ರು. ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರದಲ್ಲಿಯೇ ಅನುದಾನ ಬಿಡುಗಡೆಯಾಗಲಿದ್ದು, ಟೆಂಡರ್ ಕರೆದು ಕಾಮಗಾರಿ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಗ್ರಾಮೀಣ ಪ್ರದೇಶಗಳಲ್ಲಿನ ಬಡ ಮಕ್ಕಳಿಗೆ ಶಿಕ್ಷಣ ಕೊಟ್ಟು ಭವಿಷ್ಯದಲ್ಲಿ ಸತ್ಪ್ರಜೆಗಳನ್ನಾಗಿ ರೂಪಿಸಬೇಕೆಂಬ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ ಅವರು ರಾಜ್ಯದ ಪ್ರತಿ ಹೋಬಳಿಗೊಂದು ವಸತಿ ಶಾಲೆ ತೆರೆಯಬೇಕೆಂದು ನಿರ್ಧರಿಸಿದ್ದಾರೆ. ಅದರಂತೆ ವಡೆಯರಹಳ್ಳಿಯಲ್ಲಿ ಮೊರಾರ್ಜಿ ವಸತಿ ಶಾಲೆ ನಿರ್ಮಿಸಲಾಗುದೆ. ಇಲ್ಲಿ 6ನೇ ತರಗತಿಯಿಂದ 12ನೇ ತರಗತಿಯವರೆಗೆ ಒಂದೇ ಕ್ಯಾಂಪಸ್ ನಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಕೂಲಿ ಕಾರ್ಮಿಕರ ಮಕ್ಕಳೇ ಹೆಚ್ಚು ಬರುತ್ತಿದ್ದು, ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡಬೇಕೆಂದು ಸಲಹೆ ನೀಡಿದರು.

ಸಂಕೇತ ಕಲ್ಯಾಣ ಇಲಾಖೆ ಅಧಿಕಾರಿ ಮಾರ್ಕಂಡೇಯ, ಪ್ರಾಂಶುಪಾಲರಾದ ಅಷ್ಮಾ ಫರ್ವೀನ್, ಗುತ್ತಿಗೆದಾರರಾದ ಅಭಿಷೇಕ್, ದೀಶ ಕಮಿಟಿ ಸದಸ್ಯ ಎಸ್‌.ಕೆ.ಚಂದ್ರಣ್ಣ, ಕಾಂಗ್ರೆಸ್ ಮುಖಂಡರಾದ ಅಶೋಕಣ್ಣ, ರಾಜಶೇಖರಪ್ಪ, ಗ್ರಾಮ ಪಂಚಾಯತ್ ಸದಸ್ಯ ಗಂಗನಗಟ್ಟೆ ಮರುಳ ಸಿದ್ದಾಚಾರಿ, ಕಳವೂರು ಕಾಂಗ್ರೆಸ್ ಮುಖಂಡರಾದ ನಾಗರಾಜಗೌಡ್ರು, ಷಣ್ಮುಖಪ್ಪ, ಈಚಘಟ್ಟ ಗ್ರಾಮದ ಸತೀಶ್, ಶಿವಕುಮಾರ್, ಯುವ ಮುಖಂಡ ದಿಂಡದಹಳ್ಳಿ ಮಂಜುನಾಥ್, ಗ್ರಾಮಸ್ಥರು ಹಾಜರಿದ್ದರು.

ಈ ಪ್ರದೇಶದಲ್ಲಿ ಹೆಚ್ಷು ತೇವಾಂಶ ಇದ್ದು, 9 ರಿಂದ 10 ಅಡಿ ಆಳ ಗುಂಡಿ ತೆಗೆದು ಭದ್ರವಾದ ಬುನಾದಿ ಹಾಕಿದರೆ ಮಾತ್ರ ಈ ಕಟ್ಟಡ ಹೆಚ್ಚು ವರ್ಷಗಳ ಕಾಲ ಬಾಳಿಕೆ ಬರಲು ಸಾಧ್ಯ. ಗುತ್ತಿಗೆದಾರ ಮತ್ತು ಎಂಜಿನಿಯರ್ ಈ ಕಡೆ ಹೆಚ್ಚು ಗಮನ ಹರಿಸಬೇಕು. ಗ್ರಾಮಸ್ಥರು ಕೂಡ ಕಟ್ಟಡ ಕಾಮಗಾರಿ ಬಗ್ಗೆ ನಿಗಾ ವಹಿಸಬೇಕು.

ಕೆ.ಎಸ್.ಬಸವಂತಪ್ಪ, ಶಾಸಕ, ಮಾಯಕೊಂಡ.