ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಎಲ್ಲ ಶಾಲೆಗಳಲ್ಲಿ ವಿಜ್ಞಾನ ಪಾರ್ಕ್ ನಿರ್ಮಿಸಿ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಿದಾಗ ಬಾಲ ವಿಜ್ಞಾನಿಗಳ ಸಂಖ್ಯೆ ಬೆಳೆದು ಭವ್ಯ ಭಾರತ ನಿರ್ಮಾಣ ಸಾಧ್ಯವಾಗಲಿದೆ ಎಂದು ಬೆಂಗಳೂರಿನ ಇಸ್ರೋ ಚಂದ್ರಯಾನ-3ರ ಡೆಪ್ಯೂಟಿ ಪ್ರಾಜೆಕ್ಟ್ ಮ್ಯಾನೇಜರ್ ಎಂ.ವಿ.ರೂಪ ಅಭಿಪ್ರಾಯಪಟ್ಟರು.ನಗರ ಹೊರವಲಯ ಕೆ.ವಿ. ಕ್ಯಾಂಪಸ್ ನಲ್ಲಿರುವ ಕೆ.ವಿ ಇಂಗ್ಲೀಷ್ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಂಸ್ಕೃತಿಕ ಹಬ್ಬ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿದ ನಂತರ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಅರವತ್ತು ವರ್ಷಗಳ ಹಿಂದೆ ಪ್ರಾರಂಭವಾದ ಚಂದ್ರಯಾನವು ತನ್ನ ಮೂರನೇ ಉಡ್ಡಯನದ ಯಶಸ್ಸಿನ ಮೂಲಕ ಜಗತ್ತಿನ ಭೂ ಪಟದಲ್ಲಿ ಭಾರತದ ಹೆಸರು ಪಸರಿಸುವಂತೆ ಮಾಡಿದೆ. ಚಂದ್ರಯಾನದ ಕಲ್ಪನೆ ಸುಮಾರು 60 ವರ್ಷಗಳ ಹಿಂದೆಯೇ ಬಂದಿದ್ದು. ಅಂತಹ ಸಾಧನೆ ಸಾಕಾರವಾಗಿದ್ದು ನಿಮ್ಮಂತೆಯೇ ಶಾಲೆಗಳಲ್ಲಿ ಓದಿ ವಿಜ್ಞಾನಿಗಳಾದವರಿಂದಲೇ ಎಂದರು.
ಮಕ್ಕಳಲ್ಲಿನ ಪ್ರತಿಭೆಯನ್ನು ಸುಪ್ತ ಮನಸ್ಸಿನಿಂದ ಹೊರತೆಗೆದು ಕಲಿಕೆಯತ್ತ ಮುನ್ನಡೆಸುವ ಜವಾಬ್ದಾರಿ ಶಿಕ್ಷಕರದ್ದು, ಮಕ್ಕಳಿಗೆ ಗುರಿ ಮತ್ತು ಛಲವನ್ನು ತುಂಬಬೇಕು. ಸಾಂಸ್ಕೃತಿಕ ಕಾರ್ಯಕ್ರಮಗಳು ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ರೂಪಿಸುತ್ತವೆ. ಹಾಗಾಗಿ ಶಾಲೆಯಲ್ಲಿ ಪ್ರತಿ ವರ್ಷ ವಾರ್ಷಿಕೋತ್ಸವ ಕಾರ್ಯಕ್ರಮ ವನ್ನು ನಡೆಸಿಕೊಂಡು ಬರಬೇಕು ಹಾಗೂ ಶಾಲಾ ಆವರಣದಲ್ಲಿ ನಡೆಯುವ ಎಲ್ಲ ಚಟುವಟಿಕೆಗಳೂ ವಿಜ್ಞಾನಮಯವಾಗಿರಬೇಕು. ಎಲ್ಲ ಶಾಲೆಗಳಲ್ಲೂ ವಿಜ್ಞಾನದ ಪಾರ್ಕ್ ಗಳನ್ನು ನಿರ್ಮಿಸಬೇಕು ಎಂದರು.ಕೆ.ವಿ ಮತ್ತು ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಗೂ ಬಿಎಂಟಿಸಿ ಮಾಜಿ ಉಪಾಧ್ಯಕ್ಷ ಕೆ.ವಿ.ನವೀನ್ ಕಿರಣ್ ಮಾತನಾಡಿ, ವಿಶ್ವದ ಸಾಧಕರ ಸಾಲಿನಲ್ಲಿರುವ ವ್ಯಕ್ತಿಗಳು ಗುರಿ ಮುಟ್ಟುವವರೆಗೆ ತಮ್ಮ ಪ್ರಯತ್ನ ಮಾಡುತ್ತಲೇ ಬಂದವರು. ಹಾಗಾಗಿ ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಓದಿ ಮುಂದೆ ಬರಬೇಕು. ವಿದ್ಯೆಯು ಮನುಷ್ಯನನ್ನು ಬೆಳೆಸುತ್ತದೆ. ಎತ್ತರಕ್ಕೆ ಬೆಳೆದ ವ್ಯಕ್ತಿಯು ಸಮಾಜದ ಪ್ರಗತಿ, ದೇಶದ ಅಭಿವೃದ್ಧಿಗೆ ಶ್ರಮಿಸಬೇಕು. ಎಲ್ಲರೂ ಸೇವಾ ಮನೋಭಾವದಿಂದ ಸಮಾಜ ಮತ್ತು ದೇಶದ ಪ್ರಗತಿಗೆ ನೆರವಾಗಬೇಕು. ಎಲ್ಲ ದಾನಕ್ಕಿಂತ ವಿದ್ಯಾದಾನ ಶ್ರೇಷ್ಠವಾದುದು, ಪೋಷಕರು ಮಕ್ಕಳಿಗೆ ಆಸ್ತಿ ಮಾಡುವುದು ಬೇಡ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂಬಂತೆ ಸಂಸ್ಕಾರಯುತ ಶಿಕ್ಷಣ ಕಲಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು. ಹಾಗೆಯೇ ಸಾಧಕರ ಸಾಧನೆಗಳನ್ನು ಮೈಗೂಡಿಸಿಕೊಂಡು ಉತ್ತಮ ಗುಣಮಟ್ಟದ ಶಿಕ್ಷಣ ಕಲಿಯುವಂತೆ ಮಕ್ಕಳಿಗೆ ಕರೆಯಿತ್ತರು. ಕೆ. ವಿ. ಇಂಗ್ಲೀಷ್ ಐಸಿಐಸಿ ವಿಭಾಗದ ಶಾಲೆಯಲ್ಲಿನ ಸಾಂಸ್ಕೃತಿಕ ಕಾರ್ಯಕ್ರಮವು ಪೋಷಕರು ಮಾತ್ರವಲ್ಲ ಸುತ್ತಮುತ್ತ ಹಳ್ಳಿಗಳು ಜನರಿಗೂ ಸಂಕ್ರಾತಿ ಹಬ್ಬದಂತೆ ಮೂಡಿಬಂದಿತ್ತು. ಕುರಿಬಾಂಡ್ ಖ್ಯಾತಿಯ ಸುನಿಲ್ ರನ್ನು ಕರೆಸಿ ಮಕ್ಕಳಿಗೆ ವಿಜ್ಞಾನದ ಜತೆಗೆ ವಿನೋಧವನ್ನೂ ಮೂಡಿಸುವ ಕೆಲಸವನ್ನು ಶಾಲಾ ಆಡಳಿತ ಮಂಡಳಿ ಮಾಡಿತು. ಶಾಲಾ ಪುಟಾಣಿಗಳಿಂದ ಹಿಡಿದು ಪ್ರೌಡಶಾಲಾ ಹಂತದವರೆಗಿನ ವಿದ್ಯಾರ್ಥಿಗಳು ನಡೆಸಿಕೊಟ್ಟ ವಿಭಿನ್ನ ಸಾಂಸ್ಕೃತಿಕ ಕಾರ್ಯಕ್ರಮಗಳು ಪೋಷಕರ ಆಕರ್ಷಣೆಗೆ ಕಾರಣವಾದವು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಕೊಲಿಜಿಗೇಟ್ ಬೋರ್ಡ್ ಜಂಟಿ ನಿರ್ದೇಶಕ ರಾಮಕೃಷ್ಣಾ ರೆಡ್ಡಿ,ಕುರಿಬಾಂಡ್ ಖ್ಯಾತಿಯ ಸುನಿಲ್, ಕೆ.ವಿ. ದತ್ತಿ ಶಾಲೆಗಳ ಆಡಳಿತ ಮಂಡಳಿ ಸದಸ್ಯರಾದ ಗೀತಾಮೂರ್ತಿ,ನಿರ್ಮಲಾ ಪ್ರಭು,ಬಿ.ಮುನಿಯಪ್ಪ, ಆಡಳಿತಾಧಿಕಾರಿ ಸಾಯಿಪ್ರಭು, ಪ್ರಾಂಶುಪಾಲ ತ್ಯಾಗರಾಜ್, ಮುಖ್ಯೋಪಾಧ್ಯಯ ಗಿರೀಶ್, ಶಾಲೆಯ ಭೋಧಕ,ಭೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಪೋಷಕರು ಇದ್ದರು.