ರಾಮನಗರ: ಜಗತ್ತಿನಲ್ಲಿ ಬದಲಾವಣೆ ತರುವುದಕ್ಕಿಂತಲೂ ಮೊದಲು ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಶಿಕ್ಷಣಾರ್ಜನೆಯ ಸಮಯದಲ್ಲಿಯೇ ವ್ಯಕ್ತಿತ್ವ ರೂಪಿಸಿಕೊಳ್ಳದಿದ್ದರೆ ಜಗತ್ತಿನಲ್ಲಿ ಬದಲಾವಣೆ ತರುವುದು ಕಷ್ಟವಾಗುತ್ತದೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ (ಡಿಜಿ-ಐಜಿಪಿ) ಡಾ.ಎಂ.ಎ.ಸಲೀಂ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು
ರಾಮನಗರ: ಜಗತ್ತಿನಲ್ಲಿ ಬದಲಾವಣೆ ತರುವುದಕ್ಕಿಂತಲೂ ಮೊದಲು ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಶಿಕ್ಷಣಾರ್ಜನೆಯ ಸಮಯದಲ್ಲಿಯೇ ವ್ಯಕ್ತಿತ್ವ ರೂಪಿಸಿಕೊಳ್ಳದಿದ್ದರೆ ಜಗತ್ತಿನಲ್ಲಿ ಬದಲಾವಣೆ ತರುವುದು ಕಷ್ಟವಾಗುತ್ತದೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ (ಡಿಜಿ-ಐಜಿಪಿ) ಡಾ.ಎಂ.ಎ.ಸಲೀಂ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಗರದ ಗೌಸಿಯಾ ಎಂಜಿನಿಯರಿಂಗ್ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆದ ಕಾಲೇಜು ವಾರ್ಷಿಕೋತ್ಸವ - ಗೌಸಿಯಾನ - 2026 ಸಮಾರಂಭದಲ್ಲಿ ಮಾತನಾಡಿದ ಅವರು, ಉತ್ತಮ ಮಾನವ ಗುಣಗಳಾದ ಸತ್ಯನಿಷ್ಠೆ, ಬೌದ್ಧಿಕ , ನೈತಿಕ ಪ್ರಾಮಾಣಿಕತೆ ಮತ್ತು ಸರಿಯಾದ ಮೌಲ್ಯಗಳ ಮೇಲೆ ನಂಬಿಕೆಯನ್ನು ರೂಢಿಸಿಕೊಂಡಲ್ಲಿ ಉತ್ತಮ ವ್ಯಕ್ತಿತ್ವ ರೂಪುಗೊಳ್ಳಲಿದೆ ಎಂದರು.ನೀವೆಲ್ಲರು (ವಿದ್ಯಾರ್ಥಿಗಳು) ಭವಿಷ್ಯದಲ್ಲಿ ಸಮಾಜಕ್ಕೆ ಬದಲಾವಣೆ ತರುವ ವ್ಯಕ್ತಿಗಳಾಗುತ್ತೀರಿ ಎಂಬ ನಂಬಿಕೆ ನನಗಿದೆ. ಈ ಕಾಲೇಜು ನಿಮ್ಮೆಲ್ಲರಿಗೂ ಉತ್ತಮ ಜ್ಞಾನ, ಶಕ್ತಿ ಮತ್ತು ವ್ಯಕ್ತಿತ್ವ ನಿರ್ಮಾಣಕ್ಕೆ ಅಗತ್ಯವಾದ ಮೌಲ್ಯಗಳನ್ನು ನೀಡುತ್ತಿದೆ. ಇಲ್ಲಿಂದ ಹೊರಬಂದ ನಂತರ ನೀವು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರುವವರಾಗುತ್ತೀರಿ ಎಂದು ತಿಳಿಸಿದರು.
ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸಮಾಜಕ್ಕೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಬಹುದು. ಐಎಎಸ್, ಐಪಿಎಸ್ ನಂತಹ ಉನ್ನತ ಹುದ್ದೆಗಳನ್ನು ಅಲಂಕರಿಸಿದವರಲ್ಲಿ ಎಂಜಿನಿಯರಿಂಗ್ ಪದವೀಧರರೆ ಹೆಚ್ಚು ಮಂದಿ ಇದ್ದಾರೆ. ನಿಮ್ಮಲ್ಲು ಕಠಿಣ ಪರಿಶ್ರಮ ಇದ್ದರೆ ಉನ್ನತ ಹುದ್ದೆ ಅಲಂಕರಿಸುವುದರಲ್ಲಿ ಅನುಮಾನ ಇಲ್ಲ ಎಂದು ಹೇಳಿದರು.ಈ ಭೂಮಿಯನ್ನು ಬದುಕಲು ಉತ್ತಮ ಸ್ಥಳವನ್ನಾಗಿಸಲು ಶಿಲಾಯುಗದಿಂದಲೂ ಮಾನವನ ಪ್ರಯತ್ನ ಸಾಗಿದೆ. ವಿಶ್ವದ ಅನೇಕ ಮಹಾನ್ ವ್ಯಕ್ತಿಗಳು ಅಪಾರ ಪರಿಶ್ರಮ ಮತ್ತು ನಿಷ್ಠೆಯಿಂದ ಅವಿಷ್ಕಾರಗಳನ್ನು ಮಾಡಿ ಈ ಭೂಮಿಯನ್ನು ಉತ್ತಮ ಸ್ಥಳವನ್ನಾಗಿಸಲು ಶ್ರಮಿಸಿದ್ದಾರೆ. ಎಲ್ಲರೂ ತಮ್ಮ ಮಟ್ಟಗೆ ಈ ಪ್ರಯತ್ನದಲ್ಲಿರಬೇಕು ಎಂದರು.
ಇಂದು ನಮಗಿರುವ ಸೌಲಭ್ಯಗಳು 100-200 ವರ್ಷಗಳ ಹಿಂದೆ ಇರಲಿಲ್ಲ. ಈಗ ನಮ್ಮ ಮನೆಯಲ್ಲಿಯೇ ಕುಳಿತು ವಿದೇಶದಲ್ಲಿರುವ ವ್ಯಕ್ತಿಯೊಂದಿಗೆ ಮಾತನಾಡುತ್ತೇವೆ. ಅದು ನಮ್ಮ ಎದುರಿನಲ್ಲೇ ಕುಳಿತು ಮಾತನಾಡುತ್ತಿದ್ದೇವೆ ಎಂಬ ಅನುಭವವಾಗುತ್ತದೆ. ಮಾನವನ ಜೀವನ ಹೇಗೆ ಸುಧಾರಿಸಿದೆ ಎಂಬುದಕ್ಕೆ ಇದು ಉದಾಹರಣೆ. ಈ ಬದಲಾವಣೆಗೆ ಎಂಜಿನಿಯರ್ ಗಳ ಕೊಡುಗೆ ಅಪಾರವಾಗಿದೆ ಸಲೀಂ ಶ್ಲಾಘಿಸಿದರು.ಗೌಸಿಯಾ ತಾಂತ್ರಿಕ ಮತ್ತು ಕೈಗಾರಿಕಾ ಟ್ರಸ್ಟ್ ಗೌರವ ಕಾರ್ಯದರ್ಶಿ ಉಮರ್ ಇಸ್ಮಾಯಿಲ್ ಖಾನ್ ಮಾತನಾಡಿ, ಗೌಸಿಯಾ ಎಂಜಿನಿಯರಿಂಗ್ ಕಾಲೇಜಿನಿಂದ ಇಲ್ಲಿಯವರೆಗೆ ಸುಮಾರು 20 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಎಂಜಿನಿಯರ್ ಗಳಾಗಿ ಹೊರಹೊಮ್ಮಿದ್ದಾರೆ. ಇದರಲ್ಲಿ ಅಲ್ಪಸಂಖ್ಯಾತ ಸಮುದಾಯದ ರಾಮನಗರದ 200 ಕ್ಕೂ ಹೆಚ್ಚು ಯುವತಿಯರು ಸೇರಿದ್ದಾರೆ. ಬಹುಶಃ ರಾಮನಗರದಲ್ಲಿ ಎಂಜಿನಿಯರಿಂಗ್ ಕಾಲೇಜು ಇಲ್ಲದಿದ್ದರೆ ಇಷ್ಟು ಮಂದಿ ಅಲ್ಪಸಂಖ್ಯಾತ ಯುವತಿಯರು ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದರು.
ವಿದ್ಯಾರ್ಥಿಗಳು ಪೋಷಕರು ಮತ್ತು ಗುರುಗಳಿಗೆ ಗೌರವ ಕೊಡುವುದನ್ನು ಮರೆಯಬಾರದು. ಉದಾರತೆ, ದಯೆ ಮತ್ತು ಸಹನೆಯನ್ನು ರೂಢಿಸಿಕೊಳ್ಳಬೇಕು. ನೀವು ಇನ್ನೊಬ್ಬರ ಬಗ್ಗೆ ಕಾಳಜಿ ವಹಿಸಿದರೆ, ಭಗವಂತನೂ ನಿಮ್ಮ ಬಗ್ಗೆ ಕಾಳಜಿ ವಹಿಸುತ್ತಾನೆ. ವಿದ್ಯಾರ್ಥಿಗಳು ಮಾನವೀಯ ಗುಣಗಳನ್ನು ರೂಢಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಈ ಸಂದರ್ಭದಲ್ಲಿ ಎಂಜಿನಿಯರಿಂಗ್ ಪದವಿಯ ವಿವಿಧ ವಿಭಾಗಗಳಲ್ಲಿ ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳು ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಗೌಸಿಯಾ ತಾಂತ್ರಿಕ ಮತ್ತು ಕೈಗಾರಿಕಾ ಟ್ರಸ್ಟ್ ಅಧ್ಯಕ್ಷ ನವಾಜ್ ಎ ಷರೀಫ್ , ಗೌಸಿಯಾ ಕಾಲೇಜು ಪ್ರಾಂಶುಪಾಲ ಡಾ.ಎನ್.ಎಸ್.ಕುಮಾರ್ , ಆಡಳಿತಾಧಿಕಾರಿ ಪ್ರೊ.ಕೆ.ಆರ್.ಏಜಾಜ್ ಅಹಮದ್, ಸಂಚಾಲಕ ಡಾ.ಸೈಫುಲ್ಲಾ ಖಾನ್ ಉಪಸ್ಥಿತರಿದ್ದರು.ಕೋಟ್ ...............
ದೇಶ ಅಥವಾ ಸಮಾಜಕ್ಕಾಗಿ ಜೀವನವನ್ನು ಅರ್ಪಿಸುವುದು ಮಹತ್ವದ್ದು. ಆದರೆ , ಲಾರಿ ಅಥವಾ ಟ್ರಕ್ ಚಕ್ರಗಳ ಕೆಳಗೆ ಪ್ರಾಣ ಕಳೆದುಕೊಳ್ಳುವುದು ಜೀವನದ ವ್ಯರ್ಥ ಮತ್ತು ನಷ್ಟ. ಹೀಗಾಗಿ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು.- ಡಾ.ಎಂ.ಎ.ಸಲೀಂ, ಡಿಜಿ - ಐಜಿಪಿ
ಕೋಟ್ .............ಭಾರತ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದೆ. ಎಲ್ಲ ಜಾತಿ ವರ್ಗದವರು ಪರಸ್ಪರ ಸಹಕಾರದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಆದರೆ, ಮಾಧ್ಯಮಗಳಲ್ಲಿ ತೋರಿಸುತ್ತಿರುವ ಕೋಮು ಗಲಭೆ ಸುದ್ದಿಗಳಿಂದ ಪ್ರಭಾವಿತರಾಗಬೇಡಿ. ಏಕೆಂದರೆ ಭಾರತದಲ್ಲಿ ಪ್ರತಿನಿತ್ಯ ಸಾವಿರಾರು ಹಿಂದು ಸಮುದಾಯದ ವೈದ್ಯರು ಮುಸಲ್ಮಾನರಿಗೆ ಚಿಕಿತ್ಸೆ ಕೊಡುತ್ತಿದ್ದಾರೆ. ಕ್ರಿಶ್ಚಿಯನ್ ಸಮುದಾಯದ ಶಿಕ್ಷಣ ಸಂಸ್ಥೆಗಳಲ್ಲಿ ಮುಸಲ್ಮಾನರು, ಹಿಂದೂಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇದೇ ನಿಜವಾದ ಭಾರತ. ವಿದ್ಯಾರ್ಥಿಗಳು ಸಕರಾತ್ಮಕವಾಗಿಯೇ ಯೋಚನೆ ಮಾಡಬೇಕು.
-ಉಮರ್ ಇಸ್ಮಾಯಿಲ್ ಖಾನ್, ಗೌರವ ಕಾರ್ಯದರ್ಶಿ, ಜಿಐಇಟಿ13ಕೆಆರ್ ಎಂಎನ್ 8.ಜೆಪಿಜಿ
ರಾಮನಗರದ ಗೌಸಿಯಾ ಎಂಜಿನಿಯರಿಂಗ್ ಕಾಲೇಜಿನ ಕ್ರೀಡಾಂಗಣದಲ್ಲಿ ಕಾಲೇಜು ವಾರ್ಷಿಕೋತ್ಸವ - ಗೌಸಿಯಾನ - 2026 ಸಮಾರಂಭದಲ್ಲಿ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಡಿಜಿ-ಐಜಿಪಿ ಡಾ.ಎಂ.ಎ.ಸಲೀಂ ಬಹುಮಾನ ವಿತರಿಸಿದರು.