ಸಾಹಿತ್ಯದಿಂದ ಸುಂದರ ಸಮಾಜ ನಿರ್ಮಾಣ ಸಾಧ್ಯವಿರುವುದರಿಂದ ಸಾಹಿತ್ಯವನ್ನು ಓದುವ ಮೂಲಕ ನಮ್ಮ ಸಂಸ್ಕೃತಿಯನ್ನು ಉಳಿಸಬೇಕು ಎಂದು ಸಿರಿವಂತೆ ಸರ್ಕಾರಿ ಪ್ರೌಢಶಾಲೆ ೮ನೇ ತರಗತಿ ವಿದ್ಯಾರ್ಥಿನಿ ಸಾಹಿತ್ಯ ಕೆ. ಹೇಳಿದರು.

ಕನ್ನಡಪ್ರಭ ವಾರ್ತೆ ಸಾಗರ

ಸಾಹಿತ್ಯದಿಂದ ಸುಂದರ ಸಮಾಜ ನಿರ್ಮಾಣ ಸಾಧ್ಯವಿರುವುದರಿಂದ ಸಾಹಿತ್ಯವನ್ನು ಓದುವ ಮೂಲಕ ನಮ್ಮ ಸಂಸ್ಕೃತಿಯನ್ನು ಉಳಿಸಬೇಕು ಎಂದು ಸಿರಿವಂತೆ ಸರ್ಕಾರಿ ಪ್ರೌಢಶಾಲೆ ೮ನೇ ತರಗತಿ ವಿದ್ಯಾರ್ಥಿನಿ ಸಾಹಿತ್ಯ ಕೆ. ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಸಾಗರ ಘಟಕ ಶುಕ್ರವಾರ ಹಮ್ಮಿಕೊಂಡಿದ್ದ ತಾ.೧೪ನೇ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳ ಮನಸ್ಸನ್ನು ಗೆದ್ದ ಸಾಹಿತ್ಯವೇ ನಿಜವಾದ ಸಾಹಿತ್ಯ ಎಂದು ಅಭಿಪ್ರಾಯಪಟ್ಟರು.

ಪುಸ್ತಕಗಳನ್ನು ಪ್ರೀತಿಸುವವರು ಎಂದೂ ಒಂಟಿಯಲ್ಲ. ಪುಸ್ತಕಗಳು ನಮ್ಮೊಳಗಿನ ಕಣ್ಣನ್ನು ತೆರೆಸಿ ಹೊರಗಿನವರ ಜೊತೆಗಿನ ಬಾಂಧವ್ಯವನ್ನು ಹೆಚ್ಚಿಸುತ್ತದೆ. ಪುಸ್ತಕ ಜ್ಞಾನದಿಂದ ನಮ್ಮ ಕಲ್ಪನಾಶಕ್ತಿ ಬೆಳೆಯುತ್ತದೆ. ಪುಸ್ತಕ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತೆಗೆದುಕೊಂಡು ಹೋಗುವ ಮಹತ್ತರ ಘಟ್ಟದಲ್ಲಿ ನಾವಿದ್ದು ಮಕ್ಕಳ ಸಾಹಿತ್ಯ ಸಮ್ಮೇಳನಗಳು ಮಕ್ಕಳಲ್ಲಿ ಸಾಹಿತ್ಯದ ಹಸಿವನ್ನು ನೀಗಿಸಬೇಕು. ಹೊಸಹೊಸ ಪ್ರತಿಭೆಗಳು ಬರೆಯಲು ಮುಂದೆ ಬರಬೇಕು. ಇತರೆ ಎಲ್ಲಾ ಭಾಷೆಗಳನ್ನು ನಾವು ಗೌರವಿಸುವ ಜೊತೆಗೆ ಕನ್ನಡ ಭಾಷೆಯನ್ನು ಹೃದಯಾಳದಿಂದ ಪ್ರೀತಿಸಿ ಹೆಮ್ಮರವಾಗಿ ಬೆಳೆಸಬೇಕು ಎಂದು ಹೇಳಿದರು.

ಕನ್ನಡ ಮಾತನಾಡಲು ಬಳಸಲು ಹಿಂದೇಟು ಹಾಕುವುದು ಬೇಡ. ಒಂದೊಮ್ಮೆ ನನಗೆ ಅವಕಾಶ ಸಿಕ್ಕರೆ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಕನ್ನಡದಲ್ಲಿಯೆ ಮಾತನಾಡುವ ಇಚ್ಚೆ ನನ್ನದಾಗಿದೆ. ಏಕೆಂದರೆ ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರಭಾಷೆಯನ್ನು ಬಳಸುವ ರೀತಿ ಹೆಮ್ಮೆ ತರುತ್ತದೆ. ಕನ್ನಡ ಭಾಷೆ ಉಳಿದರೆ ನಮ್ಮ ಸಂಸ್ಕೃತಿ ಉಳಿಯುತ್ತದೆ ಎಂದರು.

ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್, ಮಕ್ಕಳ ಸಾಹಿತ್ಯ ಸಮ್ಮೇಳನ ಮೂಲಕ ಹೊಸ ಪ್ರತಿಭೆಗಳನ್ನು ಗುರುತಿಸಿ ಸಾಹಿತ್ಯ ಲೋಕಕ್ಕೆ ಪರಿಚಯಿಸುವ ಕೆಲಸ ಮಾಡಲಾಗುತ್ತಿದೆ. ಬದಲಾದ ಇವತ್ತಿನ ಕಾಲಘಟ್ಟದಲ್ಲಿ ಸಾಹಿತ್ಯದ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ. ಪಠ್ಯದಲ್ಲಿ ಕವನ, ಕಥೆ, ಪ್ರಬಂಧದಂತಹ ಪ್ರಕಾರ ಇದ್ದರೂ ಮಕ್ಕಳು ರೆಡಿಮೆಡ್ ಪ್ರಿಂಟೌಟ್ ತೆಗೆಸಿಕೊಂಡು ಓದುತ್ತಿದ್ದಾರೆ. ಇದರಿಂದ ನಮ್ಮ ಸಾಹಿತ್ಯದ ಆಳ ಅವರಿಗೆ ಅರ್ಥವಾಗುತ್ತಿಲ್ಲ. ಸೃಜನಾತ್ಮಕವಾಗಿ ಆಲೋಚನೆ ಮಾಡುವುದನ್ನು ಮಕ್ಕಳಿಗೆ ಕಲಿಸಬೇಕಾಗಿದೆ. ಮಕ್ಕಳನ್ನು ಶಾಲೆಯಿಂದ ಹೊರಗೆ ಕರೆತಂದು ಅವರಿಗೆ ಸಂಸ್ಕೃತಿ ವಿನಿಮಯದ ಮಹತ್ವ ತಿಳಿಸುವಂತಾಗಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ವಿ.ಗಣೇಶ್ ಬರೆದಿರುವ ಮಕ್ಕಳಿಗಾಗಿ ರಾಮಾಯಣ, ಮಕ್ಕಳಿಗಾಗಿ ಮಹಾಭಾರತ ಕೃತಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದಸ್ವಾಮಿ ಬಿಡುಗಡೆ ಮಾಡಿದರು. ಸಮ್ಮೇಳನಾಧ್ಯಕ್ಷೆ ಶ್ರೀಲಕ್ಷ್ಮಿ ಅಟ್ಟೆ, ನಿಕಟಪೂರ್ವ ಅಧ್ಯಕ್ಷೆ ಬಿಂದು ಬಿ., ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಸತ್ಯನಾರಾಯಣ ಸಿರಿವಂತೆ, ಲಕ್ಷ್ಮಣ್ ಆರ್. ನಾಯ್ಕ್, ಓಂಕಾರಪ್ಪ, ಭೂಕೇಶ್ವರಪ್ಪ, ವಿ.ಟಿ.ಸ್ವಾಮಿ, ಗುಡ್ಡೆಮನೆ ನಾಗರಾಜ್, ಕವಿರಾಜ್ ಇತರರು ಹಾಜರಿದ್ದರು.

ದಿಯಾ ಹೆಗಡೆ ಪ್ರಾರ್ಥಿಸಿದರು. ಸದಾನಂದ ಶರ್ಮ ಸ್ವಾಗತಿಸಿದರು. ಗಜಾನನ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರಾವ್ಯ ಸಾಗರ ನಿರೂಪಿಸಿದರು. ಸಚಿನ್ ಹೆಗಡೆ ವಂದಿಸಿದರು.