ಸಾರಾಂಶ
ಯಲ್ಲಾಪುರ: ನಾವು ನಮ್ಮ ಮಕ್ಕಳಿಗೆ ಸಂಸ್ಕಾರ, ಪರಂಪರೆ ತಿಳಿಸಿಕೊಡುವ ಅವಶ್ಯಕತೆ ಇದ್ದು,ಮುಂದಿನ ದಿನಗಳಲ್ಲಿ ಮಾತೆಯರು ತಮ್ಮ ಮಕ್ಕಳನ್ನು ಕಾರ್ಯಕ್ರಮಕ್ಕೆ ಕರೆ ತನ್ನಿ, ಮಕ್ಕಳಿಂದ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲಾ ಮುಖ್ಯಾಧ್ಯಾಪಕಿ ಮುಕ್ತಾ ಶಂಕರ ಹೇಳಿದರು.
ಅವರು ಪಟ್ಟಣದ ಗ್ರಾಮದೇವಿ ದೇವಸ್ಥಾನದಲ್ಲಿ ವಿಶ್ವ ಹಿಂದೂ ಪರಿಷತ್ ಮಾತೃ ಮಂಡಳಿ ಹಮ್ಮಿಕೊಂಡ ೧೮ ನೇ ವರ್ಷದ ಸಾಮೂಹಿಕ ಅರಿಶಿಣ ಕುಂಕುಮ ಕಾರ್ಯಕ್ರಮ ಉದ್ಘಾಟಿಸಿ ಉಪನ್ಯಾಸ ನೀಡಿ, ಸನ್ಮಾನ ಸ್ವೀಕರಿಸಿ ಮಾತನಾಡಿದರು.ಮಕ್ಕಳಲ್ಲಿ ಭಾರತೀಯ ಸಮಗ್ರತೆ,ಅಖಂಡತೆ, ಸಾಂಸ್ಕೃತಿಕ ಏಕತೆಯ ಪ್ರತೀಕವಾದ ಕುಂಕುಮದ ಕುರಿತು ತಿಳಿವಳಿಕೆ ಮೂಡಿಸಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಡಾ.ಸುಚೇತಾ ಮದ್ಗುಣಿ, ಸರಿತಾ ಮುರ್ಕುಂಬಿ, ನೇತ್ರಾವತಿ ಬಾಮಣಿ, ಮುಕ್ತಾಶಂಕರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಸನ್ಮಾನಿತರ ಪರವಾಗಿ ಡಾ. ಸುಚೇತಾ ಮಾತನಾಡಿ, ಮಹಿಳೆಯರು ಸಂಘಟಿತರಾಗುವ ಮೂಲಕ ಮನೆಯಿಂದ ಹೊರಬಂದು ಸಂಸ್ಕಾರ ಪರಂಪರೆ ಬೆಳೆಸುವ,ಸಕಾರಾತ್ಮಕ ಭಾವನೆ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ಅರಿಶಿಣ ರೋಗ ನಿರೋಧಕ ಶಕ್ತಿ ಹೆಚ್ಚಿಸಿದರೆ, ಕುಂಕುಮ ಆಜ್ಞಾ ಚಕ್ರ ಸದಾ ಪ್ರಚೋದಿಸಿ ಮಾನಸಿಕ ಚೈತನ್ಯ ನೀಡುತ್ತದೆ ಎಂದರು.
ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಎಸ್.ಎನ್. ಭಟ್ಟ ಏಕಾನ ಮಾತನಾಡಿ, ಮಕ್ಕಳಲ್ಲಿ ಸಂಸ್ಕಾರ ಪರಂಪರೆ ಕಲಿಸಿ, ಹಿಂದೂ ಸಮಾಜದ ಅಂಕುಡೊಂಕು ತಿದ್ದುವ ಕಾರ್ಯ ಮಾಡುತ್ತಿರುವ ಕಾರಣ ಮಹಿಳೆಗೆ ಮಾತೆ ಎಂದು ಕರೆಯಲಾಗಿದೆ. ಆ ನೆಲೆಯಲ್ಲಿ ಮಾತೆಯರು ಇಂತಹ ಕಾರ್ಯಕ್ರಮ ಮಾಡುವ ಮೂಲಕ ಎಲ್ಲ ಮಹಿಳೆಯರಿಗೆ ಆದರ್ಶಪ್ರಾಯರಾಗಿದ್ದಾರೆ ಎಂದರು.ವಿಶ್ವ ಹಿಂದೂ ಪರಿಷತ್ ಮಾತೃಮಂಡಳಿ ಅಧ್ಯಕ್ಷೆ ಗೌರಿ ನಂದೊಳ್ಳಿಮಠ ಅಧ್ಯಕ್ಷತೆ ವಹಿಸಿ ಸಾಂದರ್ಭಿಕ ಮಾತನಾಡಿದರು.
ವಿ. ಅನಂತ ಭಟ್ಟ ಸಿದ್ರಪಾಲ ಲಲಿತಾ ಅಷ್ಟೋತ್ತರದ ಮೂಲಕ ಕುಂಕುಮಾರ್ಚನೆ ಕಾರ್ಯಕ್ರಮ ನಡೆಸಿಕೊಟ್ಟರು. ಗಿರಿಜಾ ಮಾವಳ್ಳಿ, ವಿಶ್ವ ಹಿಂದೂ ಪರಿಷತ್ ತಾಲೂಕಾಧ್ಯಕ್ಷ ಗಜಾನನ ನಾಯ್ಕ ವೇದಿಕೆಯಲ್ಲಿದ್ದರು.ಸಂಘಟನೆಯ ಪ್ರಮುಖರಾದ ಪ್ರೇಮಾ ಅಂಬಿಗ ಪ್ರಾರ್ಥಿಸಿದರು. ಸಾಕ್ಷಿ ಮುರಕುಂಬಿ ಸ್ವಾಗತಿಸಿದರು. ಸಂಚಾಲಕ ರಾಮು ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿಗಳಾದ ಶ್ಯಾಮಿಲಿ ಪಾಠಣಕರ, ವೀಣಾ ಯಲ್ಲಾಪುರಕರ ನಿರ್ವಹಿಸಿದರು. ಪೂಜಾ ಶೇಟ್ ಸನ್ಮಾನಿತರನ್ನು ಪರಿಚಯಿಸಿದರು. ಪುಷ್ಪಾ ಜೋಗಾರಶೆಟ್ಟರ್ ವಂದಿಸಿದರು.
ಕುಂಕುಮಾರ್ಚನೆಯಲ್ಲಿ ಭಾಗವಹಿಸಿದ್ದ ೩೦೦ಕ್ಕೂ ಅಧಿಕ ಮಹಿಳೆಯರಿಗೆ ಸಂಘಟನೆ ವತಿಯಿಂದ ಅರಿಶಿಣ ಕುಂಕುಮ ಹಚ್ಚಿ ಉಡಿ ತುಂಬಲಾಯಿತು. ವನವಾಸಿ ಕಲ್ಯಾಣಾಶ್ರಮದ ವತಿಯಿಂದ ರಕ್ಷಾಬಂಧನ ಕಾರ್ಯಕ್ರಮ ನಡೆಯಿತು.