ಸಕಾರಾತ್ಮಕ ಚಿಂತನೆಗಳಿಂದ ಉತ್ತಮ ಸಮಾಜ ನಿರ್ಮಾಣ

| Published : Jan 25 2024, 02:05 AM IST

ಸಕಾರಾತ್ಮಕ ಚಿಂತನೆಗಳಿಂದ ಉತ್ತಮ ಸಮಾಜ ನಿರ್ಮಾಣ
Share this Article
  • FB
  • TW
  • Linkdin
  • Email

ಸಾರಾಂಶ

ಚಾಮರಾಜನಗರಪ್ರಸ್ತುತ ಜಗತ್ತು ತೀವ್ರಗತಿಯಲ್ಲಿ ಬದಲಾವಣೆಯಾಗುತ್ತಿದೆ, ಆದರೆ, ಮನುಷ್ಯನ ಒಳ ಮನಸ್ಸು ಬದಲಾವಣೆಯಾಗದೆ ಸದಾ ಒತ್ತಡದಲ್ಲಿದ್ದು, ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯವಾಗುತ್ತಿಲ್ಲ ಎಂದು ಶಿರಸಿಯ ರಾಜಯೋಗ ಶಿಕ್ಷಣ ಕೇಂದ್ರದ ಹಿರಿಯ ರಾಜಯೋಗಿ ಶಿಕ್ಷಕಿ ಬ್ರಹ್ಮಾಕುಮಾರಿ ವೀಣಾಜೀ ತಿಳಿಸಿದರು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ನ್ಯಾಯಾಂಗ ಇಲಾಖೆ, ಜಿಲ್ಲಾ ವಕೀಲರ ಸಂಘ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯ ಹಾಗೂ ಸಂಜೀವಿನಿ ಟ್ರಸ್ಟ್ ವತಿಯಿಂದ ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ಎ.ಡಿ.ಆರ್ ಕಟ್ಟಡದಲ್ಲಿ ಆಯೋಜಿಸಿದ್ದ ಸಮಯದ ಕರೆ-ಸಕಾರಾತ್ಮಕ ಬದಲಾವಣೆ ಕುರಿತ ಕಾರ್ಯಾಗಾರದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು.

ಮನುಷ್ಯನ ಒಳ ಮನಸ್ಸು ಬದಲಾವಣೆಯಾದರೆ ನೆಮ್ಮದಿ ಸಾಧ್ಯ । ಬ್ರಹ್ಮಕುಮಾರಿ ವೀಣಾಜೀ । ಸಮಯದ ಕರೆ-ಸಕಾರಾತ್ಮಕ ಬದಲಾವಣೆ ಕುರಿತ ಕಾರ್ಯಗಾರ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಪ್ರಸ್ತುತ ಜಗತ್ತು ತೀವ್ರಗತಿಯಲ್ಲಿ ಬದಲಾವಣೆಯಾಗುತ್ತಿದೆ, ಆದರೆ, ಮನುಷ್ಯನ ಒಳ ಮನಸ್ಸು ಬದಲಾವಣೆಯಾಗದೆ ಸದಾ ಒತ್ತಡದಲ್ಲಿದ್ದು, ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯವಾಗುತ್ತಿಲ್ಲ ಎಂದು ಶಿರಸಿಯ ರಾಜಯೋಗ ಶಿಕ್ಷಣ ಕೇಂದ್ರದ ಹಿರಿಯ ರಾಜಯೋಗಿ ಶಿಕ್ಷಕಿ ಬ್ರಹ್ಮಾಕುಮಾರಿ ವೀಣಾಜೀ ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ನ್ಯಾಯಾಂಗ ಇಲಾಖೆ, ಜಿಲ್ಲಾ ವಕೀಲರ ಸಂಘ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯ ಹಾಗೂ ಸಂಜೀವಿನಿ ಟ್ರಸ್ಟ್ ವತಿಯಿಂದ ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ಎ.ಡಿ.ಆರ್ ಕಟ್ಟಡದಲ್ಲಿ ಆಯೋಜಿಸಿದ್ದ ಸಮಯದ ಕರೆ-ಸಕಾರಾತ್ಮಕ ಬದಲಾವಣೆ ಕುರಿತ ಕಾರ್ಯಾಗಾರದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು.

ಬದಲಾವಣೆ ಜಗದ ನಿಯಮ, ಬದಲಾವಣೆ ಎಂಬುದು ನಿರಂತರವಾಗಿ ನಡೆಯುತ್ತದೆ, ಅದರಂತೆ ಪ್ರಸ್ತುತ ಸನ್ನಿವೇಶದಲ್ಲೂ ಸಾಮಾಜಿಕ, ಅರ್ಥಿಕ, ಭೌದ್ಧಿಕ ಬದಲಾವಣೆಗಳು ತ್ರೀವಗತಿಯಲ್ಲಿ ನಡೆಯುತ್ತಿದ್ದು, ಒಳ ಮನಸ್ಸು ಮಾತ್ರ, ಅಸಮಾನತೆಯಲ್ಲಿ ಇರುವುದರಿಂದ ಶಾಂತಿ, ನೆಮ್ಮದಿಯನ್ನು ಕಾಣಲು ಸಾಧ್ಯವಾಗುತ್ತಿಲ್ಲ ಎಂದರು.

ಇಂದು ಒಂದು ಮಗುವಿನ ಕೈಯಲ್ಲೂ ೫೦೦ ರು. ನೋಟು ಇರುವುದನ್ನು ಕಾಣುತ್ತೇವೆ, ಇದರಿಂದಾಗಿ ನೋಟಿನ ಮೌಲ್ಯ ಕಡಿಮೆಯಾಗುತ್ತಿದೆ, ಮುಂದಿನ ಪೀಳಿಗೆಗೆ ನಾವು ಸಕಾರಾತ್ಮಕತೆಯ ಜೀವನ ಶೈಲಿಯನ್ನು ಕಲಿಸದಿದ್ದರೆ ಉತ್ತಮ ಸಮಾಜ ಕಾಣಲು ಸಾಧ್ಯವಾಗುವುದಿಲ್ಲ ಎಂದರು.

ಬೇಡವಾದವುಗಳನ್ನು ಹೆಚ್ಚು ಕಲಿಯುತ್ತೇವೆ, ಬೇಕಾದವುಗಳ ಬಗ್ಗೆ ನಕಾರಾತ್ಮಕ ಧೋರಣೆ ತಳೆಯುತ್ತಿದ್ದೇವೆ, ಆಧ್ಯಾತ್ಮಿಕ ಚಿಂತನೆಯನ್ನು ಕಡಿತಗೊಳಿಸುತ್ತಿರುವುದರಿಂದ ಗೊಂದಲ, ತೋಯ್ದಾಟದಲ್ಲಿ ಜೀವನ ನಡೆಸುತ್ತಾ ಹೆಚ್ಚು ಒತ್ತಡಕ್ಕೆ ಸಿಲುಕಿಗೊಳ್ಳುತ್ತಿದ್ದೇವೆ ಎಂದರು.

ಮನೆಗಳು ದೊಡ್ಡದಾಗುತ್ತಿದ್ದಾವೆಯೇ ಹೊರತು ಮನಸ್ಸು ದೊಡ್ಡದಾಗುತ್ತಿಲ್ಲ, ವ್ಯಕ್ತಿಗಳ ನಡುವೆ ಗೋಡೆ ನಿರ್ಮಾಣವಾಗಿದೆ,

ಇದರಿಂದ ದ್ವೇಷ, ಅಸೂಯೆ ಹೆಚ್ಚಾಗಿ ನೈತಿಕತೆಯನ್ನು ಕಳೆದುಕೊಳ್ಳುತ್ತಿದ್ದೇವೆ, ಮನಸ್ಸು ದುರ್ಬಲಗೊಂಡು ಆತ್ಮಹತ್ಯೆಯತ್ತ ಸಾಗುತ್ತಿದೆ, ಇವುಗಳೆಲ್ಲವೂ ಕಡಿಮೆಯಾಗಬೇಕಾದರೆ, ರಾಜಯೋಗ, ಧ್ಯಾನ, ಆಧ್ಯಾತ್ಮಕತೆಯತ್ತ ಮನಸ್ಸನ್ನು ಕೇಂದ್ರೀಕರಿಸಬೇಕಾಗಿದೆ ಎಂದರು.

ನ್ಯಾಯಾಧೀಶರು, ವಕೀಲರು, ಆಡಳಿತಗಾರರಿಗೆ ಒತ್ತಡ ಹೆಚ್ಚು, ದಿನಂಪ್ರತಿ ನೂರಾರು ಸಮಸ್ಯೆಗಳಿಗೆ ಪರಿಹಾರ ಸೂಚಿಸಬೇಕಿದೆ, ನಿಮ್ಮಿಂದ ಸಮಾಜ ಒಳ್ಳೆಯದನ್ನು ಬಯಸುತ್ತಿದೆ, ಆದ್ದರಿಂದ ಸಕಾರಾತ್ಮಕ ಚಿಂತನೆಗೆ ಹೆಚ್ಚಿನ ಆದ್ಯತೆ ನೀಡಿ ಎಂದರು.

ಕಾರ್ಯಾಗಾರವನ್ನು ಉದ್ಘಾಟಿಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಎಸ್. ಭಾರತಿ ಮಾತನಾಡಿ, ಮನುಷ್ಯ ತನ್ನಲ್ಲಿರುವ ನಕಾರಾತ್ಮಕ ಅಂಶಗಳನ್ನು ಹೊರ ಹಾಕಿ ಉತ್ತಮ ಜೀವನ ನಡೆಸಲು ಸಕಾರಾತ್ಮಕ ಚಿಂತನೆಗಳನ್ನು ಅಳವಡಿಸಿಕೊಳ್ಳುವುದು ಅಗತ್ಯ ಎಂದರು.

ಸಕರಾತ್ಮಕ ಚಿಂತನೆಗಳಿಂದ ಜೀವನದಲ್ಲಿ ಹೊಸತನ ಬರುತ್ತದೆ. ನಕರಾತ್ಮಕತೆಯಿಂದ ಜೀವನದಲ್ಲಿ ಯಶಸ್ಸು ಗಳಿಸಲು ಆಗುವುದಿಲ್ಲ. ಆ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಸಕರಾತ್ಮಕ ಚಿಂತನೆಗಳ ಅಳವಡಿಕೆಗೆ ಸೂಕ್ತ ದಾರಿ ತೋರಿಸಲಿವೆ. ಇಂತಹ ಕಾರ್ಯಕ್ರಮಗಳನ್ನು ಪ್ರತಿಯೊಬ್ಬರೂ ಸದುಪಯೋಗಪಡಿಸಿಕೊಳ್ಳಿ ಎಂದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದು ಶೇಖರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮನುಷ್ಯನಲ್ಲಿ ಕೆಟ್ಟ ಮನಸ್ಸು, ಒಳ್ಳೆಯ ಮನಸ್ಸು ಇರುತ್ತದೆ. ಅಡ್ಡ ದಾರಿ ಹಿಡಿಯಲು ನಕರಾತ್ಮಕ ಅಂಶಗಳು ಕಾರಣವಾಗುತ್ತವೆ. ಮಾನಸಿಕ, ದೈಹಿಕ ಬೆಳವಣಿಗೆಗೆ ಸಕರಾತ್ಮಕ ಅಂಶಗಳು ಮುಖ್ಯ. ಪ್ರತಿಯೊಬ್ಬರೂ ನಕರಾತ್ಮಕ ಅಂಶಗಳಿಂದ ದೂರ ಇರುವ ಮೂಲಕ ಒಳ್ಳೆಯ ಚಿಂತನೆಗಳ ಕಡೆ ಗಮನಹರಿಸಬೇಕು ಎಂದರು.

ಸಕಾರಾತ್ಮಕ ಸುದ್ದಿಗಳಿಗೆ ಆದ್ಯತೆ ನೀಡಿ:ಪ್ರಸ್ತುತ ಸನ್ನಿವೇಶದಲ್ಲಿ ಸಕಾರಾತ್ಮಕ ಸುದ್ದಿಗಳಿಗಿಂತ ನಕಾರಾತ್ಮಕ ಸುದ್ದಿಗಳಿಗೆ ಹೆಚ್ಚಿನ ಪ್ರಚಾರ ಸಿಗುತ್ತಿದ್ದು, ಇದರಿಂದ ಒಳ್ಳೆಯ ಸಮಾಜ ಕಾಣಲು ಸಾಧ್ಯವಿಲ್ಲ, ಆದ್ದರಿಂದ ಸಕಾರಾತ್ಮಕ ಸುದ್ದಿಗಳಿಗೆ ಹೆಚ್ಚಿನ ಒತ್ತು ನೀಡಿ ಎಂದು ಶಿರಸಿಯ ರಾಜಯೋಗ ಶಿಕ್ಷಣ ಕೇಂದ್ರದ ಹಿರಿಯ ರಾಜಯೋಗಿ ಶಿಕ್ಷಕಿ ಬ್ರಹ್ಮಾಕುಮಾರಿ ವೀಣಾಜಿ ಹೇಳಿದರು. ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಪತ್ರಕರ್ತರು ಹಾಗೂ ಪತ್ರಿಕಾ ಪ್ರತಿನಿಧಿಗಳಿಗೆ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಾಗಾಲೋಟದಿಂದ ಬದಲಾಗುತ್ತಿರುವ ಸಮಾಜದಲ್ಲಿ ಪರಿಪಕ್ವತೆ ಕಡಿಮೆಯಾಗುತ್ತಿದೆ, ಸಕಾರತ್ಮಕತೆಯನ್ನು ಸ್ವೀಕರಿಸುವುದಕ್ಕಿಂತ ನಕಾರತ್ಮಕತೆಯನ್ನು ಸ್ವೀಕರಿಸುವುದು ಹೆಚ್ಚಾಗಿದೆ, ನೀರು, ಹಣ, ರಕ್ತ ಸದಾ ಚಲನೆಯಲ್ಲಿರಬೇಕು, ಇವು ನಿಂತರೆ ಏನೂ ಮಾಡಲು ಸಾಧ್ಯವಿಲ್ಲ ಎಂದರು. ಸಮಾಜವು ಸಕಾರತ್ಮಕತೆಯತ್ತ ಬದಲಾವಣೆಯಾಗಬೇಕಾದರೆ ಒಳ್ಳೆಯ ಸುದ್ದಿಗಳು ಹೆಚ್ಚು ಪ್ರಚಾರವಾಗಬೇಕು, ಭೂಮಿ ಎಷ್ಟೇ ರಾಸಾಯನಿಕ, ಕೊಳೆತ ವಸ್ತುಗಳನ್ನು ಹಾಕಿದರೂ, ಒಳ್ಳೆಯ ಫಲವನ್ನು ನೀಡಿದಂತೆ ಸಮಾಜಕ್ಕೆ ಒಳ್ಳೆಯ ಚಿಂತನೆಗಳನ್ನು ನೀಡಬೇಕಾದ ಅನಿವಾರ್ಯತೆ ಇದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ. ಶ್ರೀಧರ್, ನ್ಯಾಯಾಧೀಶರಾದ ಬಿ.ಎಸ್. ಹೊನ್ನಸ್ವಾಮಿ, ಚಂಪಕಾ, ವೆಂಕಟೇಶ್, ಎನ್.ನಿವೇದಿತಾ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಬಿ.ಕೆ.ದಾನೇಶ್ವರಿ, ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಕೆ. ವಿರೂಪಾಕ್ಷಸ್ವಾಮಿ, ಜಂಟಿ ಕಾರ್ಯದರ್ಶಿ ಮಲ್ಲು ಇತರರು ಇದ್ದರು.