ಸಾರಾಂಶ
ಗದಗ: ಮಹಾಯೋಗಿ ವೇಮನ ಮತ್ತು ಶಿವಶರಣೆ ಹೇಮರಡ್ಡಿ ಮಲ್ಲಮ್ಮ ತತ್ವ ಸಿದ್ಧಾಂತ ಜೀವನದಲ್ಲಿ ಅಳವಡಿಸಿಕೊಂಡು ಜಾಗೃತ ಸಮಾಜ ನಿರ್ಮಾಣವಾಗಬೇಕು ಎಂದು ಸಚಿವ ಎಚ್.ಕೆ.ಪಾಟೀಲ ಹೇಳಿದರು.
ಅವರು ಭಾನುವಾರ ಸಂಜೆ ಗದಗ ನಗರದ ಶಿವಾನಂದ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಗದಗ ಜಿಲ್ಲಾ ರೆಡ್ಡಿ ಸಮಾಜ ಸಂಘಗಳ ಸಹಯೋಗದಲ್ಲಿ ಜರುಗಿದ ಮಹಾಯೋಗಿ ವೇಮನರ 613 ನೇ ಜಯಂತಿ ಉದ್ಘಾಟಿಸಿ ಮಾತನಾಡಿದರು.ವೇಮನರ ಜಯಂತಿಯನ್ನು ಕರ್ನಾಟಕ ತುಂಬೆಲ್ಲ ಆಚರಣೆ ಮಾಡಬೇಕು ಎಂದು ವಿಶೇಷ ಪ್ರೇರಣೆ ನೀಡಿದವರಲ್ಲಿ ಗದಗ ಜಿಲ್ಲೆಯವರ ಪಾತ್ರ ಅಪಾರವಿದೆ, ವೇಮನ ಸಾಹಿತ್ಯ ಹಾಗು ಅವರ ಇತಿಹಾಸ ದಕ್ಷಿಣ ಕರ್ನಾಟಕದ ಭಾಗದವರಿಗೆ ಪರಿಚಯವೇ ಇಲ್ಲದಂತ ಸಂದರ್ಭದಲ್ಲಿ ಸಹಕಾರಿ ಭೀಷ್ಮ ಕೆ.ಎಚ್. ಪಾಟೀಲ ಹಾಗು ಹಲವಾರು ಅನೇಕ ಹಿರಿಯರು ಇತಿಹಾಸ ಹೆಕ್ಕಿ ತೆಗೆದು ವೇಮನ ಇತಿಹಾಸ ಸಾಹಿತ್ಯ ಪರಿಚಯಿಸಿ ಜ.19 ನ್ನು ವೇಮನ ಜಯಂತಿ ಆಚರಣೆ ಮಾಡಿ ಕರ್ನಾಟಕ ತುಂಬಾ ಅವರ ಸಿದ್ಧಾಂತ ತಲುಪಿಸಬೇಕು ಎಂದು ನಿರ್ಣಯ ಮಾಡಿದ್ದರು.
ರೆಡ್ಡಿ ಸಮಾಜದವರು ಎಲ್ಲ ಪಕ್ಷಗಳಲ್ಲಿದ್ದು, ಜಾತಿ ಆಧಾರದ ಮೇಲೆ ರಾಜಕೀಯ ಮಾಡದೇ ಯೋಗ್ಯತೆ ಸೇವೆ ಸಾಮರ್ಥ್ಯ ತಕ್ಕಂತೆ ಗೌರವ ಪಡೆದು ಎಲ್ಲ ಸಮಾಜದವರನ್ನು ಅಪ್ಪುಕೊಳ್ಳುವ ಮನಸ್ಥಿತಿ ಹೊಂದಿ, ಶೋಷಣೆ ವಿರುದ್ಧ ನ್ಯಾಯಕ್ಕಾಗಿ ಹೋರಾಟ ಮಾಡುವ ಮನಸ್ಸನ್ನು ಹೊಂದಿದವರಾಗಿದ್ದಾರೆ.ವೇಮನರು ಕೃಷಿಕರ ಮತ್ತು ಗೇಣುದಾರರ ಪರವಾಗಿ ಹೋರಾಟ ಮಾಡಿದ್ದಾರೆ ಎಂದರು.ವಿಪ ಶಾಸಕ ಎಸ್.ವಿ. ಸಂಕನೂರ ಮಾತನಾಡಿ, ಸಮಾಜ ಮನುಕುಲದ ಉದ್ಧಾರಕ್ಕಾಗಿ ಜೀವನ ತ್ಯಾಗ ಮಾಡಿದ್ದಕ್ಕಾಗಿ ಮಹಾಯೋಗಿ ವೇಮನರ ಜಯಂತಿ ಆಚರಣೆ ಮಾಡಲಾಗುತ್ತಿದೆ. ವೇಮನರು 15ನೇ ಶತಮಾನದಲ್ಲಿ ಕವಿತೆ ರಚಿಸಿದರು. ಅವುಗಳಲ್ಲಿ ಅಪಾರ ಪ್ರಮಾಣದಲ್ಲಿ ನಶಿಸಿ ಹೋಗಿವೆ. ಒಬ್ಬ ಬ್ರಿಟೀಷ್ ಅಧಿಕಾರಿ ತಾಳೆಗರಿಯಲ್ಲಿ ಬರೆದ ಕವಿತೆಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದರು ಎಂದರು.
ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರಿಗೆ ಸತ್ಕರಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ, ರೋಣ ಶಾಸಕ ಜಿ.ಎಸ್. ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ಮಾಜಿ ಸಚಿವ ಬಿ.ಆರ್. ಯಾವಗಲ್ಲ, ಕೆ.ವಿ. ಹಂಚಿನಾಳ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಎಸ್ಪಿ ಬಿ.ಎಸ್. ನೇಮಗೌಡ, ಎಡಿಸಿ ಅನ್ನಪೂರ್ಣ ಎಂ, ಎಸಿ ಗಂಗಪ್ಪ ಮುಂತಾದವರು ಹಾಜರಿದ್ದರು. ಶಿವನಗೌಡರ ಸ್ವಾಗತಿಸಿದರು, ಬಾಹುಬಲಿ ಜೈನ್ ನಿರೂಪಿಸಿದರು.