ಈಡಿಗ ಸಮಾಜವು ಶೈಕ್ಷಣಿಕವಾಗಿ ಸಬಲವಾಗಬೇಕು. ಮಕ್ಕಳು ಉನ್ನತ ಶಿಕ್ಷಣ ಪಡೆಯಬೇಕು. ನಮ್ಮ ಸಮಾಜಕ್ಕೆಒಂದು ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡುವ ಇಂಗಿತ ವ್ಯಕ್ತಪಡಿಸಿದ ವಿಖ್ಯಾತಾನಂದ ಸ್ವಾಮೀಜಿ, ಹಿಂದುಳಿದ ಪ್ರದೇಶವಾದ ಯಾದಗಿರಿಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪಿಸುವ ಪ್ರಯತ್ನ ನಡೆದಿದೆ .
ಕನ್ನಡಪ್ರಭ ವಾರ್ತೆ ತುಮಕೂರು
ನಾರಾಯಣ ಗುರುಗಳ ಜಯಂತಿಯನ್ನು ಕೇವಲ ಪೂಜೆ, ಕಾರ್ಯಕ್ರಮದ ಮೂಲಕ ಆಚರಿಸಿದರೆ ಸಾಲದು, ಅವರ ಸಂದೇಶಗಳನ್ನು ಸ್ವಲ್ಪ ಮಟ್ಟಿಗಾದರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಗುರುಗಳ ತತ್ವ, ಆದರ್ಶದಡಿ ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಬೇಕು ಎಂದು ಸೋಲೂರು ಆರ್ಯ ಈಡಿಗರ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ವಿಖ್ಯಾತಾನಂದ ಸ್ವಾಮೀಜಿ ಹೇಳಿದರು.ಜಿಲ್ಲಾ ಆರ್ಯ ಈಡಿಗರ ಸಂಘದಿಂದ ನಗರದಲ್ಲಿ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತ್ಯುತ್ಸವ, ಸಂಘದ ಸರ್ವ ಸದಸ್ಯರ ಸಭೆ, ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾ ಪುರಸ್ಕಾರ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಆಗಿನ ಕಾಲದ ಮೌಢ್ಯತೆ, ಸಾಮಾಜಿಕ ವಿಕೃತಿ ವಿರುದ್ಧ ಮೌನಕ್ರಾಂತಿ ಆರಂಭಿಸಿದ ನಾರಾಯಣ ಗುರುಗಳು, ಶಾಲೆಗಳನ್ನು ತೆರೆದು ಶಿಕ್ಷಣದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು ಎಂದು ಹೇಳಿದರು.ಗುರುಗಳ ಸಂದೇಶಗಳನ್ನು ಎಲ್ಲರೂ ರೂಢಿಸಿಕೊಂಡು ಜೀವನ ಪರಿಪೂರ್ಣಗೊಳಿಸಿಕೊಂಡು ಆದರ್ಶ ವ್ಯಕ್ತಿಗಳಾಗಬೇಕು. ಸ್ವಯಂ ಸಂಸ್ಕೃತರಾದರೆ ಸಮಾಜದಲ್ಲಿ ಗೌರವ ಪಡೆಯಬಹುದು. ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ ಕಲಿಸದೇ ಹೋದರೆ ವಯಸ್ಸಾದ ಕಾಲಕ್ಕೆ ವೃದ್ಧಾಶ್ರಮ ಹುಡುಕುವ ಪರಿಸ್ಥಿತಿ ಬರುತ್ತದೆ ಎಂದರು.
ಈಡಿಗ ಸಮಾಜವು ಶೈಕ್ಷಣಿಕವಾಗಿ ಸಬಲವಾಗಬೇಕು. ಮಕ್ಕಳು ಉನ್ನತ ಶಿಕ್ಷಣ ಪಡೆಯಬೇಕು. ನಮ್ಮ ಸಮಾಜಕ್ಕೆಒಂದು ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡುವ ಇಂಗಿತ ವ್ಯಕ್ತಪಡಿಸಿದ ವಿಖ್ಯಾತಾನಂದ ಸ್ವಾಮೀಜಿ, ಹಿಂದುಳಿದ ಪ್ರದೇಶವಾದ ಯಾದಗಿರಿಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪಿಸುವ ಪ್ರಯತ್ನ ನಡೆದಿದೆ ಎಂದು ಹೇಳಿದರು.ವಿಶ್ವವಿದ್ಯಾಲಯದ ಕುಲಸಚಿವ ಮೋಹನ್ ಚಂದ್ರಗುತ್ತಿ ಮಾತನಾಡಿ, ಈಡಿಗ ಸಮಾಜದವರು ಮೂಲ ಉದ್ಯೋಗ ಕಳೆದುಕೊಂಡು ಹೊಸ ಉದ್ಯೋಗದ ಹುಡುಕಾಟದಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಇಂತಹ ಸವಾಲಿನ ಸಮಯದಲ್ಲಿ ಶಿಕ್ಷಣವೇ ಪರಿಹಾರವಾಗಿ ಕಾಣುತ್ತದೆ. ಸಮಾಜದ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕು. ಮಕ್ಕಳ ಶಿಕ್ಷಣಕ್ಕಾಗಿ ಸಮಾಜದ ಹಲವರು ಸಹಾಯ ಮಾಡುತ್ತಾರೆ. ಅಂತಹ ಅವಕಾಶಗಳನ್ನು ಬಳಸಿಕೊಂಡು ಮಕ್ಕಳು ಮುಂದೆ ಬರಬೇಕು ಎಂದು ಹೇಳಿದರು.
ಸಮಾಜಕ್ಕೆ ಕೊಡುಗೆ ನೀಡಿದ ಸಾಧಕರಿಗೆ ಜೆ.ಪಿ.ನಾರಾಯಣಸ್ವಾಮಿ ಅವರ ಹೆಸರಿನಲ್ಲಿ ‘ಸಮಾಜ ಸೇವಾ ಕಣ್ಮಣಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಜಿಲ್ಲೆಯ ಸಮಾಜದ ವಿದ್ಯಾರ್ಥಿಗಳಿಗೆ ಸಂಘದಿಂದ ಪುರಸ್ಕಾರ ವಿತರಿಸಿ ಪ್ರೋತ್ಸಾಹಿಸಲಾಯಿತು.ನಂತರ ಜಿಲ್ಲಾ ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಂ.ನಾಗರಾಜು ಅವರ ಅಧ್ಯಕ್ಷತೆಯಲ್ಲಿ ಸಂಘದ ಸರ್ವಸದಸ್ಯರ ಸಭೆ ನಡೆಯಿತು. ಸಂಘದ ಪೋಷಕರು, ಉದ್ಯಮಿ ಎಚ್.ಮಹದೇವ್, ಮುಖಂಡರಾದ ದೇವೇಂದ್ರಪ್ಪ, ಎಂ.ಕೆ.ವೆಂಟಸ್ವಾಮಿ, ಪ್ರದೇಶ ಆರ್ಯ ಈಡಿಗರ ಸಂಘದ ನಿರ್ದೇಶಕಿ ಭಾಗ್ಯವತಿ ಎಂ.ಕೆ. ವೆಂಕಟಸ್ವಾಮಿ, ಜಿಲ್ಲಾ ಸಂಘದ ಗೌರವಾಧ್ಯಕ್ಷ ಕೆ.ವಿ. ಅಜಯ್‌ಕುಮಾರ್, ಜಿಲ್ಲಾಧ್ಯಕ್ಷ ಎಂ.ನಾಗರಾಜು, ಉಪಾಧ್ಯಕ್ಷರಾದ ಆರ್.ನಾರಾಯಣಸ್ವಾಮಿ, ಎಂ.ಎನ್. ನರಸಿಂಹಮೂರ್ತಿ, ಪ್ರಧಾನ ಕಾರ್ಯದರ್ಶಿ ಜೆ.ಪಿ.ಶಿವಣ್ಣ ಮಲ್ಲಸಂದ್ರ, ಖಜಾಂಚಿ ಎಚ್.ಎಂ.ಕುಮಾರ್, ಜಂಟಿ ಕಾರ್ಯದರ್ಶಿಗಳಾದ ಸಿ.ನಾರಾಯಣ್, ಊರುಕೆರೆ ಪುರುಷೋತ್ತಮ್, ಸಂಘಟನಾ ಕಾರ್ಯದರ್ಶಿಗಳಾದ ರವೀಂದ್ರಕುಮಾರ್, ಎನ್. ಆಂಜನೇಯಲು, ಟಿ.ಎನ್, ದಾಕ್ಷಾಯಣಿ, ನಿರ್ದೇಶಕರಾದ ಗೌರಮ್ಮ ಶಾಂತಕುಮಾರ್, ಮೈಥಿಲಿ ಸುರೇಶ್, ಎನ್. ಮಂಜುನಾಥ್, ಎ.ಎನ್. ಮಂಜುನಾಥ್, ಬಿ.ಎಸ್. ನಾರಾಯಣಸ್ವಾಮಿ, ನಾರಾಯಣಗುರು ಟ್ರಸ್ಟ್ಅಧ್ಯಕ್ಷ ರಾಜನ್, ಕಾರ್ಯದರ್ಶಿ ರಾಜೇಶ್, ಮುಖಂಡರಾದ ಬಸವರಾಜು, ಚಂದ್ರಕಲಾ, ಮುರಳಿ ಕಂದೂರು ಸೇರಿ ತಾಲೂಕು ಅಧ್ಯಕ್ಷರು, ಪದಾಧಿಕಾರಿಗಳು ಸಮಾಜದ ಮುಖಂಡರು ಭಾಗವಹಿಸಿದ್ದರು.