ಸಾರಾಂಶ
ನಿರಂತರ್ ಉದ್ಯಾವರ ಸಂಘಟನೆಯು ತನ್ನ 8ನೇ ವರ್ಷದ ಸಂಸ್ಥಾಪನಾ ಸಂಭ್ರಮದ ಪ್ರಯುಕ್ತ ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಸಹಯೋಗದೊಂದಿಗೆ ಉಡುಪಿ ಶೋಕ ಮಾತಾ ದೇವಾಲಯದ ಅವೇ ಮರಿಯ ಸಭಾಂಗಣದಲ್ಲಿ ನಿರಂತರ್ ಸಿನಿಮಾ ಉತ್ಸವ ನಡೆಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಸಿನಿಮಾಗಳ ಮೂಲಕ ಸೌಹಾರ್ದ ಸಮಾಜ ನಿರ್ಮಾಣ ಸಾಧ್ಯವಿದೆ ಎಂದು ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಡೆನಿಸ್ ಡೆಸಾ ಅಭಿಪ್ರಾಯಪಟ್ಟರು.ಅವರು ಶುಕ್ರವಾರ ನಿರಂತರ್ ಉದ್ಯಾವರ ಸಂಘಟನೆಯು ತನ್ನ 8ನೇ ವರ್ಷದ ಸಂಸ್ಥಾಪನಾ ಸಂಭ್ರಮದ ಪ್ರಯುಕ್ತ ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಸಹಯೋಗದೊಂದಿಗೆ ಉಡುಪಿ ಶೋಕ ಮಾತಾ ದೇವಾಲಯದ ಅವೇ ಮರಿಯ ಸಭಾಂಗಣದಲ್ಲಿ ಆ.8ರಿಂದ 10ರ ವರೆಗೆ ಮೂರು ದಿನಗಳ ನಿರಂತರ್ ಸಿನಿಮಾ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು.ಇಂದಿನ ಸಮಾಜದಲ್ಲಿ ಪರಸ್ಪರ ವಿಭಜಿಸುವ ವ್ಯವಸ್ಥೆಯಲ್ಲಿ ಪರಸ್ಪರ ಸೌಹಾರ್ದತೆಯನ್ನು ಬೆಸೆಯುವ ಕಾರ್ಯ ನಡೆಯಬೇಕಿದೆ. ಸಾಹಿತ್ಯ, ನಾಟಕ ಹಾಗೂ ಸಿನಿಮಾಗಳು ಈ ನಿಟ್ಟಿನಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ನಿರಂತರ್ ಉದ್ಯಾವರ ಸಂಘಟನೆ ಕಲೆ ಮತ್ತು ಸಾಹಿತ್ಯಕ್ಕೆ ನೀಡುತ್ತಿರುವ ಪ್ರೋತ್ಸಾಹ ಮುಂದುವರಿಯಲಿ ಎಂದು ಶುಭ ಹಾರೈಸಿದರು.ಪತ್ರಕರ್ತ ಮೈಕಲ್ ರೋಡ್ರಿಗಸ್ ಮಾತನಾಡಿ, ಸಿನಿಮಾಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಒಂದು ಉತ್ತಮ ಅವಕಾಶವಾಗಿದ್ದು, ಅಂತಹ ಸಿನೆಮಾಗಳಿಗೆ ಸಮಾಜದ ಪ್ರೋತ್ಸಾಹ ಕೂಡ ಅಗತ್ಯವಿದೆ ಎಂದರು.ನಿರಂತರ್ ಉದ್ಯಾವರ ಸಂಘಟನೆಯ ಅಧ್ಯಕ್ಷ ರೋಶನ್ ಕ್ರಾಸ್ಟೋ, ಕಾರ್ಯದರ್ಶಿ ಒಲಿವೀರಾ ಮಥಾಯಸ್, ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷೆ ಜೆಸಿಂತಾ ರಿಚರ್ಡ್ ಡಿಸೋಜಾ ಉಪಸ್ಥಿತರಿದ್ದರು. ಸ್ಥಾಪಕಾಧ್ಯಕ್ಷ ಸ್ಟೀವನ್ ಕುಲಾಸೊ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮೈಕಲ್ ಡಿಸೋಜಾ ವಂದಿಸಿದರು. ಉದ್ಘಾಟನಾ ಕಾರ್ಯಕ್ರಮದ ಬಳಿಕ ಮನ್ಸೊರೆ ನಿರ್ದೇಶನದ ಆಕ್ಟ್ 1978 ಸಿನೆಮಾ ಪ್ರದರ್ಶನಗೊಂಡಿತು. ಅ.9 ಮತ್ತು 10ರಂದು ಪ್ರಶಸ್ತಿ ವಿಜೇತ ಕನ್ನಡ ಸಿನಿಮಾಗಳಾದ 19.20.21 ಮತ್ತು ಫೋಟೋ ಚಲನಚಿತ್ರಗಳು ಪ್ರದರ್ಶನಗೊಂಡವು.