ಸಾರಾಂಶ
ಬಿವಿವಿ ಸಂಘದ ಆಯುರ್ವೇದಿಕ್ ಕಾಲೇಜಿನ ಪ್ರಾಚಾರ್ಯರಾದ ಡಾ. ಮಹಾಂತೇಶ ಸಾಲಿಮಠ ಮಾತನಾಡಿ ಎನ್ನೆಸ್ಸೆಸ್‌ನಿಂದ ಆರೋಗ್ಯಯುತ ಸಮಾಜ ನಿರ್ಮಾಣ ಸಾಧ್ಯ ಎಂದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಗಳಿಂದ ಸದೃಢ, ಆರೋಗ್ಯಯುತ ಸಮಾಜ ನಿರ್ಮಾಣ ಸಾಧ್ಯ. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಜೊತೆಗೆ ಸ್ವಚ್ಛತೆಯ ಅರಿವು, ಅಗ್ನಿಶಾಮಕದಳದ ಪ್ರಾತ್ಯಕ್ಷಿಕೆ, ಮತದಾನದ ಜಾಗೃತಿ, ಸಾಹಿತ್ಯ, ಸೃಜನಶೀಲತೆ ಮತ್ತು ಉಚಿತ ಆರೋಗ್ಯ ತಪಾಸಣೆ ಹೀಗೆ ಹಲವು ಕಾರ್ಯಕ್ರಮಗಳನ್ನು ಶಿಬಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಇಂತಹ ಶಿಬಿರಗಳಲ್ಲಿ ಭಾಗವಹಿಸುವುದೇ ಪುಣ್ಯದ ಕಾರ್ಯ ಎಂದು ಬಿವಿವಿ ಸಂಘದ ಆಯುರ್ವೇದಿಕ್ ಕಾಲೇಜಿನ ಪ್ರಾಚಾರ್ಯ ಡಾ. ಮಹಾಂತೇಶ ಸಾಲಿಮಠ ಹೇಳಿದರು.ಬಿವಿವಿ ಸಂಘದ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಸ್ವತಂತ್ರ ಪದವಿ ಪೂರ್ವ ಕಾಲೇಜು ವತಿಯಿಂದ ಒಂದು ಮತ್ತು ಎರಡನೇ ಘಟಕಗಳ ಅಡಿಯಲ್ಲಿ ದತ್ತು ಗ್ರಾಮ ಮುಚಖಂಡಿಯಲ್ಲಿ ವಿಶೇಷ ಶಿಬಿರಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪದವಿ ಕಾಲೇಜಿನ ಪ್ರಾಚಾರ್ಯ ಪ್ರೊ.ಟಿ.ಬಿ. ಕೋರಿಶೆಟ್ಟಿ ಎನ್.ಎಸ್.ಎಸ್ ಧ್ಯೇಯೋದ್ದೇಶಗಳು, ಅದು ಸಾಗಿ ಬಂದ ದಾರಿ, ಎನ್.ಎಸ್.ಎಸ್ ಗೀತೆ ಮತ್ತು ಲಾಂಛನಗಳನ್ನು ಪರಿಚಯ ಮಾಡಿಕೊಟ್ಟರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ರಾದ ಪ್ರೊ.ಎಸ್.ಎಚ್. ವಟವಟಿ ಮಾತನಾಡಿ, ಎನ್.ಎಸ್.ಎಸ್ ಕಾರ್ಯಗಳು ಹಾಗೂ ಶಿಬಿರಗಳು ನಿಯಮಾನುಸಾರ ನಡೆದರೆ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಸನಗೊಂಡು ಸುಂದರ ಸಮಾಜ ನಿರ್ಮಾಣ ಸಾಧ್ಯವಾಗಲಿದೆ. ಕಾಟಾಚಾರಕ್ಕೆ ಶಿಬಿರಗಳನ್ನು ಆಯೋಜಿಸದೆ ಈ ಎರಡು ಘಟಕಗಳು ಆಯೋಜಿಸಿದಂತೆ ಎನ್.ಎಸ್.ಎಸ್ ಶಿಬಿರಗಳು ನಡೆಸಬೇಕು. ಶಿಬಿರಾರ್ಥಿಗಳು ಇದರ ಸದುಪಯೋಗ ಪಡೆದು ಸಮಾಜಕ್ಕೆ ಮಾದರಿಯಾಗಬೇಕೆಂದು ತಿಳಿಸಿದರು
ಎನ್.ಎಸ್.ಎಸ್ ಜಿಲ್ಲಾ ನೋಡಲ್ ಅಧಿಕಾರಿ ಡಾ.ಮಾರುತಿ ಪಾಟೋಳಿ ಪ್ರಸ್ತಾವಿಕವಾಗಿ ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿವೃತ್ತ ಉಪನಿರ್ದೇಶಕ ಪಿ.ಎನ್ ಪಾಟೀಲ ಉಪಸ್ಥಿತರಿದ್ದರು.ಕೀರ್ತಿ ಪಾಟೀಲ ಹಾಗೂ ಸಂಗಡಿಗರು ಎನ್.ಎಸ್.ಎಸ್ ಗೀತೆ ಹಾಡಿದರು. ಕಾರ್ಯಕ್ರಮ ಅಧಿಕಾರಿಗಳಾದ ಎಂ.ಎಚ್. ಕಟಗೇರಿ ಸ್ವಾಗತಿಸಿದರು ಎಸ್.ಎಸ್. ಅಥಣಿ ವಂದಿಸಿದರು.