ಸಾರಾಂಶ
ಹುಬ್ಬಳ್ಳಿ: ಸಮಾಜದಲ್ಲಿನ ದೋಷಗಳನ್ನು ನಿವಾರಿಸುವ ಮೂಲಕ ನಿರೋಗಿ, ಸಶಕ್ತ ಸಮಾಜ ನಿರ್ಮಾಣ ಮಾಡುವುದು ಆರ್‌ಎಸ್‌ಎಸ್‌ನ ಮುಖ್ಯ ಧ್ಯೇಯ ಎಂದು ಆರ್‌ಎಸ್‌ಎಸ್‌ನ ಅಖಿಲ ಭಾರತ ವ್ಯವಸ್ಥಾ ಪ್ರಮುಖ ಮಂಗೇಶ ಭೇಂಡೆ ಹೇಳಿದರು.
ಅವರು ಇಲ್ಲಿನ ಕುಸುಗಲ್ಲ ರಸ್ತೆಯಲ್ಲಿರುವ ಶ್ರೀನಿವಾಸ ಗಾರ್ಡನ್‌ನಲ್ಲಿ ಬುಧವಾರ ಸೇವಾ ಭಾರತಿ ಟ್ರಸ್ಟ್‌ನ ರಜತ ಸಂಭ್ರಮದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಸಮಾಜದಲ್ಲಿರುವ ದೋಷಗಳನ್ನು ಹೊರಹಾಕುವುದನ್ನೇ ನಾವು ಸೇವೆ ಎನ್ನುತ್ತೇವೆ. ಈ ಸೇವೆ ಎನ್ನುವುದು ಹಿಂದೂ ಸಮಾಜಕ್ಕೆ ಹಾಗೂ ಆರ್‌ಎಸ್‌ಎಸ್‌ಗೆ ರಕ್ತಗತವಾಗಿ ಬಂದಿರುವಂತಹದ್ದು. 50ರ ದಶಕದಲ್ಲಿ ಅಧಿಕೃತವಾಗಿ ಆರಂಭವಾದ ನಮ್ಮ ಸೇವಾಕಾರ್ಯದ ಮೊದಲೇ ಆರ್‌ಎಸ್‌ಎಸ್ ಸಾವಿರಾರು ಕಾರ್ಯಕರ್ತರು ವಿವಿಧ ರೂಪದ ಸೇವಾಕಾರ್ಯದಲ್ಲಿ ತೊಡಗಿಕೊಂಡಿದ್ದರು ಎಂದರು.
ಈಗಾಗಲೇ ಸಂಘದ ಅಡಿ 1.40 ಲಕ್ಷ ಸದಸ್ಯರು ಸೇವಾ ಚಟುವಟಿಕೆ ನಡೆಸುತ್ತಿದ್ದಾರೆ. ಈ ಸೇವಾ ಕಾರ್ಯ ಎನ್ನುವುದು ಆಕಾಶಕ್ಕೂ ಮಿಗಿಲು, ಭೂಮಿಗಿಂತಲೂ ಆಳವಾಗಿದ್ದು, ಇದಕ್ಕೆ ಮಿತಿಯಿಲ್ಲ. ಈ ಸೇವಾ ಕಾರ್ಯದಲ್ಲಿ ಸಮಾಜ ಪರಿವರ್ತನೆಗೊಳಿಸುವ ಶಕ್ತಿ ಅಡಕವಾಗಿದೆ. ಇಂದಿಗೂ ಅನೇಕರು ಶಿಕ್ಷಣ, ಸ್ವಾಸ್ಥ್ಯ, ಸಂಸ್ಕಾರ ವಂಚಿತರಾಗಿದ್ದಾರೆ. ಯಾರ ಹತ್ತಿರ ಶಿಕ್ಷಣ, ಸ್ವಾಸ್ಥ್ಯ, ಸಂಸ್ಕಾರದ ಅರಿವು ಇದೆಯೋ ಅಂತಹವರು ಸೂಕ್ತ ಮಾರ್ಗದರ್ಶನ, ತರಬೇತಿ ನೀಡುವ ಕಾರ್ಯ ಮಾಡಬೇಕಿದೆ ಎಂದರು.ಸಮಾಜಮುಖಿ ಕಾರ್ಯಗಳು ಜನರ ನಡುವೆ ಹೋಗಿ ಸಮಾಜದ ಅಂತಃಕರಣದಲ್ಲಿ ಸೇವಾ ಮನೋಭಾವ ಜಾಗೃತಿಗೊಳಿಸುವುದಕ್ಕಾಗಿ ಸೇವಾ ಭಾರತಿ ಟ್ರಸ್ಟ್‌ನ ರಜತಮಹೋತ್ಸವ ಹಮ್ಮಿಕೊಳ್ಳಲಾಗಿದೆ. ಸೇವೆ ಎನ್ನುವುದು ಒಂದು ಆಂದೋಲನವಾಗಬೇಕು. ನಮ್ಮೊಂದಿಗೆ ಹತ್ತಾರು, ನೂರಾರು, ಸಾವಿರಾರು ಜನರನ್ನು ಜೋಡಿಸಿಕೊಂಡು ಮುಂದೆ ನುಗ್ಗಿದಾಗ ನಾವು ಕೈಗೊಳ್ಳುವ ಸೇವಾಕಾರ್ಯ ಯಶಸ್ವಿಗೊಳಿಸಲು ಸಾಧ್ಯ. ಸೇವಾಕಾರ್ಯದಲ್ಲಿನ ಫಲಾನುಭವಿಗಳೂ ಸೇವಾ ಕಾರ್ಯಕರ್ತರಾಗುವಂತೆ ಸಿದ್ಧಪಡಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಬಸವರಾಜ ದೇಶಮುಖ, ಸೇವಾಭಾರತಿ ಟ್ರಸ್ಟ್‌ನ ಅಡಿ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಾಮಾಜಿಕ ನ್ಯಾಯ ಕಲ್ಪಿಸಿಕೊಡಲು ಶ್ರಮಿಸಿದೆ. ಟ್ರಸ್ಟ್‌ನ ರಜತಮಹೋತ್ಸವದ ನಿಮಿತ್ತ ಕಲಬುರ್ಗಿಯಲ್ಲಿ ಬಾಲವಿಕಾಸ ಸಂಗಮದ ಅಡಿ ಬಸ್ತಿ (ಸ್ಲಂ)ಯಲ್ಲಿರುವ 1200ಕ್ಕೂ ಅಧಿಕ ಮಕ್ಕಳಿಗೆ ಉಚಿತ ಶಿಕ್ಷಣ, ಬೆಳಗಾವಿಯಲ್ಲಿ ಸ್ತ್ರೀಶಕ್ತಿ ಸಂಗಮದ ಅಡಿ ಸಾವಿರಾರು ಮಹಿಳೆಯರಿಗೆ ಸ್ವಯಂ ಉದ್ಯೋಗದ ಕಲ್ಪನೆ, ಬಾಗಲಕೋಟೆಯಲ್ಲಿ ಕಿಶೋರಿ ಸಂಗಮದ ಅಡಿ ಪ್ರೌಢಾವಸ್ಥೆಯ ಹೆಣ್ಣು ಮಕ್ಕಳು ಸಮಾಜದಲ್ಲಿ ಹೇಗಿರಬೇಕು ಎಂಬುದರ ಕುರಿತು ತರಬೇತಿ ನೀಡಲಾಗಿದೆ. ಇದೇ ರೀತಿ ಹಲವು ಸೇವಾಕಾರ್ಯ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.ಈ ವೇಳೆ ಸಂಸದ ಜಗದೀಶ ಶೆಟ್ಟರ, ರಾಷ್ಟ್ರೀಯ ಸೇವಾ ಭಾರತಿಯ ಅಧ್ಯಕ್ಷ ಸುನೀಲ ಸಪ್ರೆ, ಕಾರ್ಯದರ್ಶಿ ಡಾ. ರಘು ಅಕಮಂಚಿ, ಡಾ. ಎಚ್.ಡಿ. ಪಾಟೀಲ, ಮಾಜಿ ಶಾಸಕ ಡಾ. ವೀರಣ್ಣ ಚರಂತಿಮಠ, ಬಸವರಾಜ ಡಂಬಳ, ನರಸಿಂಹ ಕುಲಕರ್ಣಿ, ಸುಭಾಷಸಿಂಗ್ ಜಮಾದಾರ ಸೇರಿದಂತೆ ಹಲವರಿದ್ದರು. ಸೇವಾ ಭಾರತಿಯ ಅಧ್ಯಕ್ಷ ಪೂರ್ಣಚಂದ್ರರಾವ ಘಂಟಸಾಲ ವಂದಿಸಿದರು.