ಹೊಸದುರ್ಗ ಪಟ್ಟಣದಲ್ಲಿ ಅಕ್ಕ ಕೆಫೆಯನ್ನು ಜಿಪಂ ಸಿಇಒ ಡಾ.ಆಕಾಶ್ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾದಾಗ ಮಾತ್ರ ಸಮೃದ್ಧ ಸಮಾಜ ನಿರ್ಮಾಣ ಸಾಧ್ಯ ಎಂದು ಗ್ಯಾರಂಟಿ ಸಮಿತಿ ಅಧ್ಯಕ್ಷ ಮಹಮದ್ ಇಸ್ಮಾಯಿಲ್ ಹೇಳಿದರು. ಪಟ್ಟಣದ ಸಾಮರ್ಥ್ಯಸೌಧದ ಸಮೀಪದಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ನಿರ್ಮಿಸಿರುವ ಅಕ್ಕ ಕೆಫೆ ಕ್ಯಾಂಟಿನ್ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಬೇಕು ಎನ್ನುವ ಉದ್ದೇಶದಿಂದ ರಾಜ್ಯಸರ್ಕಾರ

ಈ ಯೋಜನೆಯನ್ನು ಜಾರಿಗೆ ತಂದಿದೆ. ತಾಲೂಕಿನ ಚಿಕ್ಕತೆಕಲವಟ್ಟಿ ಗ್ರಾಮದ ವೇದಾವತಿ ಸ್ವಸಹಾಯ ಸಂಘವು ಅಕ್ಕ ಕೆಫೆಯನ್ನು ನಿರ್ವಹಣೆ ಮಾಡಲಿದೆ. ಗುಣಮಟ್ಟದ ಆಹಾರ ಜೊತೆಗೆ ಕೈಗೆಟುಕುವ ದರದಲ್ಲಿ ಉಪಹಾರ ನೀಡಲಿದ್ದಾರೆ. ಪ್ರಸ್ತುತ ಜಾರಿಯಲ್ಲಿರುವ ಗ್ಯಾರಂಟಿ ಯೋಜನೆಗಳನ್ನು ಮಹಿಳಾ ಕೇಂದ್ರೀತವಾಗಿ ಜಾರಿಗೆ ತಂದು ಅನುಷ್ಠಾನಗೊಳಿಸಲಾಗಿದೆ. ಇದರಿಂದಾಗಿ ಮಹಿಳೆಯರ ಆರ್ಥಿಕ ಶಕ್ತಿ ಹೆಚ್ಚಾಗಿದೆ ಎಂದರು.

ಜಿಪಂ ಸಿಇಒ ಡಾ.ಆಕಾಶ್ ಮಾತನಾಡಿ, ಸಂಜೀವಿನಿ-ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ನಿರ್ಮಾಣವಾಗುತ್ತಿರುವ ಅಕ್ಕ ಕೆಫೆ, ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರ ಆತ್ಮವಿಶ್ವಾಸ ಹೆಚ್ಚಿಸಲು ಮತ್ತು ಅವರಿಗೆ ಸುಸ್ಥಿರ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಸ್ಥಳೀಯ ಗ್ರಾಮೀಣ ಮಹಿಳೆಯರೇ ಮುನ್ನಡೆಸಲಿರುವ ಈ ಉಪಹಾರ ಕೇಂದ್ರದಲ್ಲಿ ಸಾರ್ವಜನಿಕರಿಗೆ ಶುಚಿ-ರುಚಿಯಾದ ಹಾಗೂ ಸಾಂಪ್ರದಾಯಿಕ ಆಹಾರ ಪದಾರ್ಥಗಳು ಅತ್ಯಂತ ಕೈಗೆಟುಕುವ ದರದಲ್ಲಿ ಸಿಗಲಿವೆ ಎಂದರು.

ಈ ವೇಳೆ ಜಿಪಂ ಯೋಜನಾ ನಿರ್ದೇಶಕಿ ಜಯಲಕ್ಷ್ಮೀ, ಮುಖ್ಯ ಯೋಜನಾಧಿಕಾರಿ ಗಾಯತ್ರಿ, ತಾಪಂ ಇಒ ಸುನಿಲ್ ಕುಮಾರ್, ಸಂಜೀವಿನಿ ಜಿಲ್ಲಾ ಮತ್ತು ತಾಲೂಕು ಅಭಿಯಾನ ನಿರ್ವಾಣ ಘಟಕಗಳ ಸಿಬ್ಬಂದಿಗಳು, ಸ್ಪ ಸಹಾಯ ಸಂಘಗಳ ಒಕ್ಕೂಟದ ಮಹಿಳೆಯರು ಇದ್ದರು.