ಬಲಿಷ್ಠ ಯುವಶಕ್ತಿಯಿಂದ ಬಲಿಷ್ಠ ದೇಶ ನಿರ್ಮಾಣ

| Published : Dec 09 2024, 12:49 AM IST

ಸಾರಾಂಶ

ಒಂದು ದೇಶ ಬಲಿಷ್ಠವಾಗಿ ಹೊರಹೊಮ್ಮಬೇಕಾದರೆ ಆ ದೇಶದಲ್ಲಿನ ಯುವ ಶಕ್ತಿ ಬಲಿಷ್ಠವಾಗಿರಬೇಕಾಗುತ್ತದೆ. ಯುವಕರೇ ದೇಶದ ನಿಜವಾದ ಆಸ್ತಿಯಾಗಿದ್ದಾರೆ. ಈ ನಿಟ್ಟಿನಲ್ಲಿ ಯುವ ಪೀಳಿಗೆ ದುಶ್ಟಟಗಳಿಗೆ ಬಲಿಯಾಗದೇ ಉತ್ತಮ ಶಿಕ್ಷಣ ಪಡೆದು ದೇಶದ ಆಸ್ತಿಯಾಗಬೇಕು ಎಂದು ಸ್ಥಳೀಯ ಜೆ.ಎಂ.ಎಫ್.ಸಿ. ನ್ಯಾಯಾಲಯದ ಸರ್ಕಾರಿ ಸಹಾಯಕ ಅಭಿಯೋಜಕ ಭರತ್ ಭೀಮಯ್ಯ ಹೇಳಿದರು.

ಕನ್ನಡ ಪ್ರಭ ವಾರ್ತೆ ಹೊನ್ನಾಳಿ

ಒಂದು ದೇಶ ಬಲಿಷ್ಠವಾಗಿ ಹೊರಹೊಮ್ಮಬೇಕಾದರೆ ಆ ದೇಶದಲ್ಲಿನ ಯುವ ಶಕ್ತಿ ಬಲಿಷ್ಠವಾಗಿರಬೇಕಾಗುತ್ತದೆ. ಯುವಕರೇ ದೇಶದ ನಿಜವಾದ ಆಸ್ತಿಯಾಗಿದ್ದಾರೆ. ಈ ನಿಟ್ಟಿನಲ್ಲಿ ಯುವ ಪೀಳಿಗೆ ದುಶ್ಟಟಗಳಿಗೆ ಬಲಿಯಾಗದೇ ಉತ್ತಮ ಶಿಕ್ಷಣ ಪಡೆದು ದೇಶದ ಆಸ್ತಿಯಾಗಬೇಕು ಎಂದು ಸ್ಥಳೀಯ ಜೆ.ಎಂ.ಎಫ್.ಸಿ. ನ್ಯಾಯಾಲಯದ ಸರ್ಕಾರಿ ಸಹಾಯಕ ಅಭಿಯೋಜಕ ಭರತ್ ಭೀಮಯ್ಯ ಹೇಳಿದರು.

ಪಟ್ಟಣದ ಶ್ರೀ ಮೃತ್ಯುಂಜಯ ಶಿವಾಚಾರ್ಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿಶ್ವ ಏಡ್ಸ್ ವಿರೋಧಿ ದಿನ ಹಾಗೂ ಅಂತರಾಷ್ಟ್ರೀಯ ವಿಕಲಚೇತನರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಯುವಶಕ್ತಿ ಬಾಹ್ಯ ಆಕರ್ಷಣೆಗಳಿಗೆ ಬಲಿಯಾಗಿ ಏಡ್ಸ್ ನಂತಹ ಹಲವಾರು ಮಾರಕ ಸಾಂಕ್ರಮಿಕ ರೋಗಗಳಿಗೆ ತುತ್ತಾಗುತ್ತಿರುವುದು ಅತ್ಯಂತ ಕಳವಳಕಾರಿ ವಿಷಯವಾಗಿದೆ. ಯುವಕರು ಸರಿಯಾದ ಜೀವನಕ್ರಮ ರೂಢಿಸಿಕೊಳ್ಳಬೇಕು. ಇಲ್ಲದಿದ್ದರೆ ಭಯಾನಕ ರೋಗಗಳಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ ಎಂದು ಹೇಳಿದರು.

ಇದೇ ರೀತಿ ವಿಕಲಚೇತನರ ಬಗ್ಗೆ ಕೂಡ ಯುವಕರು ಹಾಗೂ ಸಮಾಜ ಸಹಾನುಭೂತಿಯೊಂದಿಗೆ ವರ್ತಿಸಬೇಕು. ವಿಕಲಚೇತನರಿಗೆ ಯಾರಾದರೂ ತೊಂದರೆ ಕೊಟ್ಟರೆ ಅಂತಹವರಿಗೆ ಶಿಕ್ಷೆಯಾಗುವ ಅವಕಾಶ ಕಾನೂನಿನಲ್ಲಿದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸರ್ಕಾರಿ ಆಸ್ಪತ್ರೆಯ ಫಿಜಿಷಿಯನ್ ಡಾ. ರಾಜ್ ಕುಮಾರ್ ಮಾತನಾಡಿ, ಏಡ್ಸ್ ನಂತಹ ಮಾರಕರೋಗದ ಹೇಗೆ ಹರಡುತ್ತದೆ, ಅದರ ನಿಯಂತ್ರಣ ಕ್ರಮಗಳು ಹಾಗೂ ತೆಗೆದುಕೊಳ್ಳಬೇಕಾದ ಎಚ್ಚರಿಕೆ ಕ್ರಮಗಳ ಬಗ್ಗೆ ಸವಿವರವಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು.

ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಜಗದೀಶ್ ಅವರು ಜಿಲ್ಲೆಯಲ್ಲಿನ ಏಡ್ಸ್ ರೋಗಿಗಳ ನೈಜ್ಯ ಸ್ಥಿತಿಗತಿಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿ ಇಂತಹ ರೋಗಗಳ ಬಗ್ಗೆ ಎಚ್ಚರವಹಿಸಬೇಕು ಎಂದು ಹೇಳುವ ಮೂಲಕ ಏಡ್ಸ್ ಸೇರಿದಂತೆ ಅನೇಕ ಮಾರಕ ರೋಗಗಳ ಕುರಿತು ಜಾಗೃತಿ ಮೂಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಪ್ರವೀಣ್ ದೊಡ್ಡ ಗೌಡ್ರು ಅವರು ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿ, ಯುವಶಕ್ತಿಯೇ ದೇಶದ ಶಕ್ತಿಯಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಕಾಲಹರಣ ಮಾಡದೇ ಜವಾಬ್ದಾರಿಯಿಂದ ಶಿಕ್ಷಣವನ್ನು ಪಡೆದರು ಭವಿಷ್ಯದಲ್ಲಿ ವಿದ್ಯಾರ್ಥಿಗಳು ಉತ್ತಮ ಜೀವನ ನಡೆಸುವ ಜೊತೆಗೆ ತಮ್ಮ ಪೋಷಕರು, ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಬಹುದು ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ತಾಲೂಕು ವಕೀಲರ ಸಂಘದ ಅಧ್ಯಕ್ಷ ಜಯಪ್ಪ, ಕಾರ್ಯದರ್ಶಿ ಪುರುಷೋತ್ತಮ ಹೊನ್ನಾಳಿ ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಚಂದ್ರಪ್ಪ, ಆರೋಗ್ಯ ಇಲಾಖೆಯ ಗೀತಾ, ಭಾಗಮ್ಮ, ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಹಾಗೂ ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ನಾಗೇಶ್ ರೆಡ್ ರಿಬ್ಬನ್ ಕ್ಲಬ್ ಸಂಚಾಲಕ ಡಾ.ವಿ. ಬಸವರಾಜಪ್ಪ, ಮುಂತಾದವರು ಇದ್ದರು.

ಚಂದನ ಸಂಗಡಿಗರು ಪ್ರಾರ್ಥನೆ ಸಲ್ಲಿಸಿದರು. ಉಪನ್ಯಾಸ ನಾಗೇಶ್ ಅವರು ಸ್ವಾಗತಿಸಿದರು .ವಿದ್ಯಾರ್ಥಿನಿ ಅಂಜಲಿ ಕಾರ್ಯಕ್ರಮ ನಿರೂಪಿಸಿದರು. ಎನ್.ಜಿ.ಓ. ಘಟಕದ ಪದಾಧಿಕಾರಿಗಳು, ಕಾಲೇಜಿನ ಸಿಬ್ಬಂದಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.