ಮುಂಡಳ್ಳಿಯಲ್ಲಿ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ
ಕನ್ನಡಪ್ರಭ ವಾರ್ತೆ ಭಟ್ಕಳಜ್ಞಾನಕ್ಕೆ ಭಾರತ ಹೆಸರುವಾಸಿಯಾಗಿದೆ. ಭಾರತವನ್ನು ತಾಯಿ ಹೆಸರಿಂದ ಕರೆಯಲಾಗುತ್ತದೆ. ಇಲ್ಲಿ ತಂದೆಗಿಂತ ತಾಯಿಗೆ ಹೆಚ್ಚಿನ ಮೌಲ್ಯನೀಡಲಾಗುತ್ತದೆ. ಪ್ರತಿ ಮನೆಯಲ್ಲಿ ಮಾತೆಯರು ಜಾಗ್ರತರಾಗಬೇಕು. ಆಗ ಮಾತ್ರ ಸದೃಡ ಭಾರತವನ್ನು ನಾವು ಕಾಣಬಹುದು ಎಂದು ಮಂಗಳೂರಿನ ಗುರುಪುರದ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.
ಮುಂಡಳ್ಳಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅಷ್ಟಬಂಧ ಬ್ರಹ್ಮ ಕಲಶೋತ್ಸವದ ಎರಡನೇ ದಿನ ಸಭಾ ಕಾರ್ಯಕ್ರಮ ಸಾನಿಧ್ಯ ವಹಿಸಿ ಮಾತನಾಡಿದರು. ಭಾರತ ಹಿಂದೆಂದೂ ಕಾಣದ ರೀತಿಯಲ್ಲಿ ಅಭೂತಪೂರ್ವವಾಗಿ ಬದಲಾವಣೆ ಕಾಣುತ್ತಿದೆ. ಭಾರತದ ಮುಂದೆ ಜಗತ್ತು ತಲೆಬಾಗಿದೆ. ಭಾರತದ ಮಾರ್ಗದರ್ಶನ ಎಲ್ಲಾ ದೇಶಗಳಿಗೂ ಅಗತ್ಯವಾಗಿದೆ. ಹಿಂದೂ ಸಮಾಜದ ಜಾಗೃತ ಸ್ಥಿತಿ ಯಿಂದ ಇದು ಸಾಧ್ಯವಾಗಿದೆ. ಮುಂಡಳ್ಳಿ ದುರ್ಗಾಪರಮೇಶ್ವರಿ ದೇವಿಯ ಬ್ರಹ್ಮಕಲಶೋತ್ಸವ ಸಂಭ್ರಮವನ್ನು ಬಹಳ ಅದ್ಧೂರಿಯಿಂದ ಮಾಡಲಾಗುತ್ತಿದೆ. ಇದಕ್ಕೆಲ್ಲವೂ ಆ ತಾಯಿಯ ಪ್ರೇರಣೆ, ಕೃಪೆಯೇ ಕಾರಣ ಎಂದರು.ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಎಸ್.ಬಿ. ಬೊಮ್ಮಾಯಿ ಮಾತನಾಡಿ, ಮುಂಡಳ್ಳಿಯಲ್ಲಿ ಸಮಸ್ತ ಹಿಂದೂಗಳ ಒಗ್ಗಟ್ಟಿನಿಂದ ಇಂತಹ ಒಂದು ಕಾರ್ಯಕ್ರಮ ಆಯೋಜನೆ ಸಾಧ್ಯವಾಗಿದೆ. ದೇವರ ವಿಚಾರಕ್ಕೆ ಬಂದಾಗ ಮುಂಡಳ್ಳಿಯ ಒಗ್ಗಟ್ಟು ಸಹಕಾರ ಸದಾ ಇರುತ್ತದೆ ಎನ್ನುವುದು ಮತ್ತೆ ಸಾಬೀತಾಗಿದೆ. ಎಲ್ಲ ಸಹಕಾರದಿಂದ ಬ್ರಹ್ಮಕಲಶೋತ್ಸವವನ್ನು ವಿಜೃಂಭಣೆಯಿಂದ ನಡೆಸಲಾಗುತ್ತಿದೆ ಎಂದರು.
ವೇದಿಕೆಯಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ. ನಾಗರಾಜ್ ಭಟ್ಟ, ಕುದುರೆಬೀರಪ್ಪ ದೇವಸ್ಥಾನದ ಅಧ್ಯಕ್ಷ ಶಂಕರ ನಾಯ್ಕ, ಅಬ್ಬಿಮಹಾರಾಜ ದೇವಸ್ಥಾನ ಅಧ್ಯಕ್ಷ ಗಣೇಶ ಗುಡಿಮನೆ, ನಾಗಶ್ರೀ ದೇವಸ್ಥಾನ ಅಧ್ಯಕ್ಷ ಪರಮೇಶ್ವರ ಮೊಗೇರ, ಗಣೇಶೋತ್ಸವ ಸಮಿತಿಯ ಅಧ್ಯಕ್ಷ ನಾಗಪಯ್ಯ ಆಚಾರ್ಯ, ಶಾರದೋತ್ಸವ ಸಮಿತಿ ಅಧ್ಯಕ್ಷ ಗೋಪಾಲ ನಾಯ್ಕ ಮುಂತಾದವರಿದ್ದರು. ರೇಷ್ಮಾ ಉಮೇಶ ನಿರ್ವಹಿಸಿದರು. ಯಮುನಾ ದಿನೇಶ ಪ್ರಾರ್ಥಿಸಿದರು. ಬ್ರಹ್ಮಕಲಶೋತ್ಸವದ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದು ಪ್ರಸಾದ ಭೋಜನ ಸ್ವೀಕರಿಸಿದರು.