ಕೊಪ್ಪಳದ ಶ್ರೀಗವಿಮಠ ಆವರಣದಲ್ಲಿ ಶನಿವಾರ ‘ಶಾಲಾ ಮಕ್ಕಳ ಮನೆಗೊಂದು ಗ್ರಂಥಾಲಯ ಅನುಷ್ಠಾನ’ ಸಮಾರಂಭವನ್ನು ಶ್ರೀ ಗವಿಮಠ ಸಂಸ್ಥಾನದ ಕಡಲಬಾಳು ಶಾಖಾ ಮಠದ ಶ್ರೀ ಮರಿಶಾಂತವೀರ ಮಹಾಸ್ವಾಮಿಗಳು ಉದ್ಘಾಟಿಸಿದರು.

ಕೊಪ್ಪಳ: ದೊಡ್ಡವರು ಊರಿಗೊಂದು ಗುಡಿ ಕಟ್ಟಿದರೆ, ಶಾಲಾ ಮಕ್ಕಳು ‘ಮನೆಗೊಂದು ಗ್ರಂಥಾಲಯ’ ನಿರ್ಮಿಸುವ ಮೂಲಕ ತಮ್ಮ ಮನೆಯೊಳಗೇ ಜ್ಞಾನದ ಗುಡಿ ಕಟ್ಟಿದ್ದಾರೆ ಎಂದು ಶ್ರೀ ಗವಿಮಠ ಸಂಸ್ಥಾನದ ಕಡಲಬಾಳು ಶಾಖಾ ಮಠದ ಶ್ರೀ ಮರಿಶಾಂತವೀರ ಮಹಾಸ್ವಾಮಿಗಳು ಹೇಳಿದರು.

ಕೊಪ್ಪಳದ ಶ್ರೀಗವಿಮಠ ಆವರಣದಲ್ಲಿ ಶನಿವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ, ಗದಗ ಜಿಲ್ಲಾ ಜಾಗ್ರತ ಸಮಿತಿ, ಶಾಲಾ ಶಿಕ್ಷಣ ಇಲಾಖೆ ಗದಗ, ಕೊಪ್ಪಳ ಗವಿಮಠ ಹಾಗೂ ಮುಂಡರಗಿ ತಾಲೂಕಿನ ಹೆಸರೂರು ಸರ್ಕಾರಿ ಪ್ರೌಢಶಾಲೆ ಸಂಯುಕ್ತ ಆಶ್ರಯದಲ್ಲಿ ನಡೆದ ‘ಶಾಲಾ ಮಕ್ಕಳ ಮನೆಗೊಂದು ಗ್ರಂಥಾಲಯ ಅನುಷ್ಠಾನ’ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಪುಸ್ತಕ ದೇವಾಲಯವಿದ್ದಂತೆ. ಪುಸ್ತಕ ಓದುವುದರಿಂದ ಮನಸ್ಸಿನ ಗೊಂದಲ ದೂರವಾಗಿ ಜ್ಞಾನ ಮತ್ತು ವಿವೇಚನೆ ಬೆಳೆಯುತ್ತದೆ. ರಾಗ, ದ್ವೇಷ, ದುಃಖ, ಕಾಮ, ಕ್ರೋಧ ಮೊದಲಾದ ಭಾವನೆಗಳನ್ನು ನಿಯಂತ್ರಿಸುವ ಶಕ್ತಿ ಜ್ಞಾನಕ್ಕಿದೆ. ಅಂತಹ ಜ್ಞಾನವನ್ನು ಪುಸ್ತಕಗಳ ಓದಿನಿಂದ ಪಡೆಯಬಹುದು ಎಂದರು.

ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಬೇಕಾದರೆ ಪಾಲಕರು ಮೊದಲು ಪುಸ್ತಕ ಓದುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು. ತಂದೆ-ತಾಯಿ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಮಯ ಕಳೆಯುವ ಬದಲು ಉತ್ತಮ ಪುಸ್ತಕಗಳನ್ನು ಓದಿದರೆ ಮಕ್ಕಳೂ ಓದುವ ಅಭ್ಯಾಸ ರೂಢಿಸಿಕೊಳ್ಳುತ್ತಾರೆ ಎಂದರು.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ. ಮಾನಸ ಮಾತನಾಡಿ, ರಾಜ್ಯಾದ್ಯಂತ ಸುಮಾರು ಒಂದು ಲಕ್ಷ ಮನೆಗಳಲ್ಲಿ ಗ್ರಂಥಾಲಯ ಸ್ಥಾಪಿಸುವ ಗುರಿ ಹೊಂದಲಾಗಿದೆ. ಬಾಲ್ಯದಲ್ಲಿಯೇ ಮಕ್ಕಳಲ್ಲಿ ಪುಸ್ತಕ ಪ್ರೀತಿ ಬೆಳೆಸಬೇಕು. ‘ಮೊಬೈಲ್ ಬಿಡಿ’ ಎಂದು ಬಲವಂತ ಮಾಡುವ ಬದಲು ಮಕ್ಕಳ ಕೈಗೆ ಪುಸ್ತಕ ನೀಡಿ ಓದುವ ಹವ್ಯಾಸ ಬೆಳೆಸಬೇಕು ಎಂದರು.

ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಡಾ. ಜೀವನಸಾಬ ಬಿನ್ನಾಳ, ಎ.ಎಸ್. ಮಕಾನದಾರ, ಸಾವಿತ್ರಿ ಮುಜುಮದಾರ್, ಜಿ.ಎಸ್. ಗೋನಾಳ್ ಮಾತನಾಡಿದರು. ಹೆಸರೂರು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ತಮ್ಮ ಪಾಕೆಟ್ ಮನಿ ಹಾಗೂ ದುಡಿಮೆಯ ಹಣದಿಂದ ಪುಸ್ತಕ ಖರೀದಿಸಿ ಮನೆಗಳಲ್ಲಿ ಗ್ರಂಥಾಲಯ ನಿರ್ಮಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಯಿತು.

ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳು ಪುಸ್ತಕಗಳ ಕಟ್ಟನ್ನು ಹಿಡಿದು ಶ್ರೀಗವಿಮಠ ಆವರಣದಲ್ಲಿ ಸಂಚರಿಸಿ, ಶ್ರೀ ಮರಿಶಾಂತವೀರ ಮಹಾಸ್ವಾಮಿಗಳ ಆಶೀರ್ವಾದ ಪಡೆದರು. ವಿದ್ಯಾರ್ಥಿಗಳಿಗೆ ಅಭಿನಂದನಾ ಪ್ರಮಾಣಪತ್ರ ವಿತರಿಸಲಾಯಿತು.