ಪ್ರಸ್ತುತದಲ್ಲಿ ಕಲಾಸಂಘಟನೆ ಕಟ್ಟುವುದು ತ್ರಾಸಿನ ಕಾಯಕ

| Published : Nov 14 2024, 12:56 AM IST

ಸಾರಾಂಶ

ಗುಣಮಟ್ಟದ ಕಲಾ ಸಂಘಟನೆಯನ್ನು ಸಕ್ರೀಯವಾಗಿ ನಿರಂತರ ಮಾಡುವುದು ಸುಲಭದ ಮಾತಲ್ಲ. ಅದು ಪ್ರವಾಹದ ಎದುರು ಈಜಿದಂತೆ ಎಂದು ನಗರಸಭೆ ಸದಸ್ಯ ಕೆ.ಆರ್. ಗಣೇಶ್ ಪ್ರಸಾದ್ ಹೇಳಿದರು.

ಕನ್ನಡಪ್ರಭ ವಾರ್ತೆ ಸಾಗರಗುಣಮಟ್ಟದ ಕಲಾ ಸಂಘಟನೆಯನ್ನು ಸಕ್ರೀಯವಾಗಿ ನಿರಂತರ ಮಾಡುವುದು ಸುಲಭದ ಮಾತಲ್ಲ. ಅದು ಪ್ರವಾಹದ ಎದುರು ಈಜಿದಂತೆ ಎಂದು ನಗರಸಭೆ ಸದಸ್ಯ ಕೆ.ಆರ್. ಗಣೇಶ್ ಪ್ರಸಾದ್ ಹೇಳಿದರು.ಪಟ್ಟಣದ ನೃತ್ಯ ಭಾಸ್ಕರ ಸಭಾಂಗಣದಲ್ಲಿ ಶ್ರೀರಾಜರಾಜೇಶ್ವರಿ ಕೃಪಾಪೋಷಿತ ವಂಶವಾಹಿನಿ ಯಕ್ಷಮೇಳ ಗುಂಡೂಮನೆಯವರಿಂದ ಆಯೋಜನೆಗೊಂಡಿದ್ದ 4 ತಿಂಗಳ ಮಹಿಮೆ ಶೀರ್ಷಿಕೆಯ ಪಾಕ್ಷಿಕ ತಾಳಮದ್ದಲೆ ಸಮಾರೋಪ ಮತ್ತು ಕಲಾಭಿವಂದನೆ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಮಾತನಾಡಿದರು.ಪ್ರವಾಹದ ಜತೆಗೆ ತೇಲಿ ಹೋಗುವುದಕ್ಕೆ ಪ್ರಯಾಸಪಡಬೇಕಿಲ್ಲ. ಆದರೆ ಅದರ ವಿರುದ್ಧ ಈಜಿ ಯಶಸ್ಸು ಕಂಡರೆ ಮಾತ್ರ ಸಾಧನೆ. ಹಾಗೆಯೇ ಟೀಕೆ, ಟಿಪ್ಪಣಿ ಎಲ್ಲವನ್ನೂ ಮೀರಿ ಸಂಘಟನೆಗೆ ಮಾತ್ರ ಆದ್ಯತೆ ನೀಡಿ, ಉತ್ತಮ ಕಾರ್ಯಕ್ರಮಗಳನ್ನು ಸಮಾಜಕ್ಕೆ ಕೊಡುತ್ತಿರುವ ವಂಶವಾಹಿನಿ ತಂಡ ನಿರಂತರ 25 ಕಾರ್ಯಕ್ರಮ ನೀಡಿ ಹೊಸ ದಾಖಲೆ ಬರೆದಿದೆ ಎಂದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಡಾ. ಎಸ್.ಎಸ್. ಮೋಹನ್ ಮಾತನಾಡಿ, ಪ್ರಚಲಿತವಲ್ಲದ ಪೌರಾಣಿಕ ಕತೆಯೊಳಗಿರುವ ಸಣ್ಣಸಣ್ಣ ವಿಷಯಗಳನ್ನು ಪ್ರಸಂಗವಾಗಿಸಿ ನಿಶ್ಚಿತ ಸಮಯ ಮಿತಿಯೊಳಗೆ ಪ್ರೇಕ್ಷಕರಿಗೆ ಉಣಬಡಿಸಿರುವ ವಂಶವಾಹಿನಿಯ ತಾಳಮದ್ದಲೆ ರಂಗಕ್ಕೊಂದು ಅನುಕರಣೀಯ ಮಾದರಿ. ಈ ಮಾದರಿಯನ್ನು ಇಟ್ಟುಕೊಂಡರೆ ಯಕ್ಷಗಾನದ ಬೆಳವಣಿಗೆಗೂ ಪೂರಕ ಎಂದರು.ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಾಲತೇಶಪ್ಪ ಮಾತನಾಡಿ, ಸಂಘಟನೆಯ ಹಿಂದಿನ ಪರಿಶ್ರಮ ತಿಳಿದವರಿಗೆ ಮಾತ್ರ ಗೊತ್ತು. ಅಂತೆಯೇ ಕಡಿಮೆ ಅವಧಿಯಲ್ಲಿ 25 ಕಾರ್ಯಕ್ರಮ ಯಶಸ್ವಿಗೊಳಿಸುವುದು ದೊಡ್ಡ ಸಾಧನೆ ಎಂದರು.ನಗರಸಭೆ ಸದಸ್ಯ ಟಿ.ಡಿ. ಮೇಘರಾಜ್ ಮಾತನಾಡಿದರು. ಇದೇ ವೇಳೆ ಗಣ್ಯರು ವಂಶವಾಹಿನಿಯ ಇಡೀ ತಂಡವನ್ನು ಸನ್ಮಾನಿಸಿದರು. ವಂಶವಾಹಿನಿ ಗೌರವಾಧ್ಯಕ್ಷ ಸುಬ್ರಾಯ ಹೆಗಡೆ ಗುಂಡೂಮನೆ ಅಧ್ಯಕ್ಷತೆ ವಹಿಸಿದ್ದರು. ನಂತರ ರಮೇಶ್ ಹೆಗಡೆ ಗುಂಡೂಮನೆ ರಚಿತ ಗೋಮಹಿಮೆ ಪ್ರಸಂಗದ ತಾಳಮದ್ದಲೆ ನಡೆಯಿತು. ಹಿಮ್ಮೇಳದಲ್ಲಿ ಸೂರ್ಯನಾರಾಯಣ, ಸೃಜನ್ ಗಣೇಶ್ ಹೆಗಡೆ, ಮಂಜುನಾಥ್ ಗುಡ್ಡೆದಿಂಬ, ಶ್ರೀವತ್ಸ ಹಾಗೂ ಮುಮ್ಮೇಳದಲ್ಲಿ ಅರುಣ್ ಬೆಂಕಟವಳ್ಳಿ, ರವಿಶಂಕರ ಭಟ್, ಅಶೋಕ ಕುಮಾರ್ ಹೆಗಡೆ, ಪ್ರತೀಕ್ ಬೆಂಕಟವಳ್ಳಿ ಇದ್ದರು.