ಡಾ.ಅಂಬೇಡ್ಕರ್ ತತ್ವಗಳಿಂದ ಸಮಸಮಾಜ ನಿರ್ಮಾಣ

| Published : Apr 15 2025, 12:58 AM IST

ಸಾರಾಂಶ

ಅಂಬೇಡ್ಕರ್ ಕನಸು ಎಲ್ಲರಿಗೂ ಸಮಾನ ಹಕ್ಕುಗಳು ದೊರಕುವ ಸಮಾಜ ನಿರ್ಮಾಣವಾಗಬೇಕು ಎಂಬುದಾಗಿತ್ತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಡಾ.ಅಂಬೇಡ್ಕರ್ ಬಾಲ್ಯದಲ್ಲಿಯೇ ಜಾತಿವ್ಯವಸ್ಥೆ ನೋವು ಅನುಭವಿಸಿ, ಅದನ್ನು ಮೆಟ್ಟಿ ನಿಂತು ಉನ್ನತ ಶಿಕ್ಷಣ ಪಡೆದಿದ್ದು ನಿಜಕ್ಕೂ ಸ್ಫೂರ್ತಿದಾಯಕ. ತಮ್ಮ ಈ ಅನುಭವದ ಆಧಾರದಲ್ಲಿ ಎಲ್ಲರೂ ಸಮಾನತೆಯಿಂದ ಬದುಕಬೇಕೆಂಬ ಧ್ಯೇಯದೊಂದಿಗೆ ಭಾರತೀಯ ಸಂವಿಧಾನ ರಚನೆಯಲ್ಲಿ ಅನೇಕ ಸುಧಾರಣೆ ತಂದರು. ಅವರು ಸಮಾನತೆ, ನ್ಯಾಯ ಮತ್ತು ಸ್ವಾತಂತ್ರ್ಯಕ್ಕೆ ಬಲ ನೀಡುವ ಅಂಶಗಳನ್ನು ಸಂವಿಧಾನದಲ್ಲಿ ಸೇರಿಸಿದ್ದು, ಈ ತತ್ವಗಳೇ ಸಮಸಮಾಜದ ನಿರ್ಮಾಣಕ್ಕೆ ದಾರಿ ಎಂದು ಲೋಕಸಭಾ ಸದಸ್ಯ ಪಿ.ಸಿ.ಗದ್ದಿಗೌಡರ ಹೇಳಿದರು.

ನವನಗರದ ಅಂಬೇಡ್ಕರ್ ಭವನದಲ್ಲಿ, ಜಿಲ್ಲಾಡಳಿತ, ಜಿಪಂ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ನಡೆದ ಡಾ.ಅಂಬೇಡ್ಕರ್ 134ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಂಬೇಡ್ಕರ್ ಕನಸು ಎಲ್ಲರಿಗೂ ಸಮಾನ ಹಕ್ಕುಗಳು ದೊರಕುವ ಸಮಾಜ ನಿರ್ಮಾಣವಾಗಬೇಕು ಎಂಬುದಾಗಿತ್ತು. ಮಹಿಳೆಯರಿಗೂ ಸಮಾನ ಗೌರವ, ಶಿಕ್ಷಣ ಹಾಗೂ ಅವಕಾಶಗಳು ಸಿಗಬೇಕು ಎಂಬ ಅವರ ದೃಷ್ಟಿಕೋನವನ್ನು ಈಗಿನ ಸರ್ಕಾರ ಹಂತ ಹಂತವಾಗಿ ಸಾಕಾರಗೊಳಿಸುತ್ತಿದೆ. ಮಹಿಳೆಯರು ಈಗ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ವಿಯಾಗಿ ಪಾಲ್ಗೊಳ್ಳುತ್ತಿದ್ದಾರೆ, ಇದು ಅಂಬೇಡ್ಕರ್ ಬಹುದೊಡ್ಡ ಕೊಡುಗೆ ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಪ ಸದಸ್ಯ ಪಿ.ಎಚ್.ಪೂಜಾರ್ ಮಾತನಾಡಿ, ಅಂಬೇಡ್ಕರ್ ತಾವು ಅನುಭವಿಸಿದ ಅಸಮಾನತೆ ನಿಭಾಯಿಸಿ, ಎಲ್ಲರ ಸಮಾನತೆಗಾಗಿ ತಮ್ಮ ಜೀವನ ಅರ್ಪಿಸಿದ ಮಹಾನ್ ವ್ಯಕ್ತಿ. ಅವರ ಓದಿಗೆ ಯಾವುದೇ ಜಾತಿ ಧರ್ಮದ ಮಿತಿಯಿರಲಿಲ್ಲ. ಕುರಾನ್, ಬೈಬಲ್, ಗೀತೆ ಎಲ್ಲವನ್ನು ಅಧ್ಯಯನ ಮಾಡಿದ ಅವರ ಪುಸ್ತಕ ಓದುವ ಅಭ್ಯಾಸ ಎಷ್ಟರ ಮಟ್ಟಿಗೆ ಇತ್ತು ಎಂದರೆ, ತಮ್ಮ ಮನೆಯಲ್ಲಿಯೇ 50,000ಕ್ಕೂ ಅಧಿಕ ಗ್ರಂಥಗಳ ಹೊಂದಿದ ಗ್ರಂಥಾಲಯವಿತ್ತು ಎಂದು ಹೇಳಿದರು.

ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ, ಹಂಪಿ ಕನ್ನಡ ವಿಶ್ವವಿದ್ಯಾಲಯ ಚರಿತ್ರೆ ವಿಭಾಗದ ಹಿರಿಯ ಪ್ರಾಧ್ಯಾಪಕ ಪ್ರೊ.ಚಿನ್ನಸ್ವಾಮಿ ಸೋಸಲೆ ಮಾತನಾಡಿ, ಇಂದಿನ ಜನರು ಅಂಬೇಡ್ಕರ್‌ ವಾದಿಗಳೆಂದು ಹೇಳಿಕೊಳ್ಳುವುದಕ್ಕಿಂತ ಅವರ ತತ್ವ ಪಾಲಿಸುವುದು ಮುಖ್ಯ. ಮೀಸಲಾತಿಯ ಹಕ್ಕು ಮತ್ತು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವ ಅವಕಾಶ ಸಿಕ್ಕಿರುವುದಕ್ಕೆ ಅಂಬೇಡ್ಕರ್ ಕಾರಣ ಎಂದರು.

ಹೊಳೆನರಸೀಪುರ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜ ವಿಜ್ಞಾನ ವಿಭಾಗದ ಮುಖ್ಯಸ್ಥರು ಮತ್ತು ಸಾಹಿತಿಗಳಾದ ಪ್ರೊ. ಎನ್.ಆರ್.ಶಿವರಾಂ ಮಾತನಾಡಿ, ಅಂಬೇಡ್ಕರ್ ಅಸ್ಪೃಶ್ಯತೆ, ಜಾತಿ ತಾರತಮ್ಯ ಮುಂತಾದ ಭೇದಭಾವಗಳನ್ನು ದೂರಮಾಡಿ ಸಮಾಜವನ್ನು ಆರೋಗ್ಯವಂತಗೊಳಿಸಲು ವೈದ್ಯನಂತೆ ಕಾರ್ಯನಿರ್ವಹಿಸಿದರು. ಅವರು ಟೀಕೆ ಟಿಪ್ಪಣಿಗಳಿಲ್ಲದ, ಶುದ್ಧ ಪ್ರಾಮಾಣಿಕ ನಾಯಕರಾಗಿದ್ದರೆಂದರು.

ಈ ವೇಳೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಎಸ್ಎಸ್ಎಲ್‌ಸಿ ಮತ್ತು ಪಿಯುಸಿ ಮಟ್ಟದಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಮತ್ತು ಉತ್ತಮ ಫಲಿತಾಂಶ ಸಾಧನೆಯ ವಿದ್ಯಾರ್ಥಿ ನಿಲಯದ ಅಧಿಕಾರಿಗಳಿಗೂ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್ ಕುರೇರ, ಅಪರ ಜಿಲ್ಲಾಧಿಕಾರಿ ಅಶೋಕ್ ತೇಲಿ, ನಗರಸಭೆ ಅಧ್ಯಕ್ಷೆ ಕವಿತಾ ಲೆಂಕನ್ನವರ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಸದಾಶಿವ್ ಬಡಿಗೇರ್ ಹಾಗೂ ಗಣ್ಯರು ಉಪಸ್ಥಿತರಿದ್ದರು.

ಭವ್ಯ ಮೆರವಣಿಗೆ ಚಾಲನೆ

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನವನಗರದ ಸೆಕ್ಟರ್ ನಂಬರ್ 45ರಲ್ಲಿನ ಸಮುದಾಯ ಭವನದಿಂದ ಡಾ.ಅಂಬೇಡ್ಕರ್ ಭವನದ ವರೆಗೆ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಅಂಬೇಡ್ಕರ್ ಭಾವಚಿತ್ರ ಭವ್ಯ ಮೆರವಣಿಗೆ ನಡೆಯಿತು. ಜಿಲ್ಲಾಡಳಿತ ಭವನ ಆವರಣದಲ್ಲಿರುವ ಡಾ.ಅಂಬೇಡ್ಕರ್‌ ಬೃಹತ್ ಪ್ರತಿಮೆಗೆ ಸಂಸದರು ಸೇರಿ ಗಣ್ಯರು ಮಾಲಾರ್ಪಣೆ ಮಾಡಿದರು.