ತ್ವರಿತ ನ್ಯಾಯದಾನದಿಂದ ವಿಶ್ವಾಸವೃದ್ಧಿ

| Published : Nov 05 2023, 01:15 AM IST

ಸಾರಾಂಶ

ತ್ವರಿತ ನ್ಯಾಯದಾನದಿಂದ ವಿಶ್ವಾಸ ವೃದ್ಧಿಯಾಗುತ್ತದೆ. ಕಕ್ಷಿದಾರರಿಗೆ ನ್ಯಾಯ ಸಿಕ್ಕ ನೆಮ್ಮದಿ ಇರುತ್ತದೆ ಎಂದು ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಪ್ರಸನ್ನ ವರಾಳೆ ಹೇಳಿದರು.

ಕೊಪ್ಪಳ: ತ್ವರಿತ ನ್ಯಾಯದಾನದಿಂದ ವಿಶ್ವಾಸ ವೃದ್ಧಿಯಾಗುತ್ತದೆ. ಕಕ್ಷಿದಾರರಿಗೆ ನ್ಯಾಯ ಸಿಕ್ಕ ನೆಮ್ಮದಿ ಇರುತ್ತದೆ ಎಂದು ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಪ್ರಸನ್ನ ವರಾಳೆ ಹೇಳಿದರು.

ನಗರದ ಕುಷ್ಟಗಿ ರಸ್ತೆಯಲ್ಲಿ ಜಿಲ್ಲಾ ನ್ಯಾಯಾಲಯಗಳ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ನ್ಯಾಯಾಲಯದಲ್ಲಿನ ವ್ಯಾಜ್ಯಗಳು ತೀವ್ರಗತಿಯಲ್ಲಿ ಬಗೆಹರಿದು ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಸಾರ್ವಜನಿಕರಲ್ಲಿ ವಿಶ್ವಾಸವನ್ನು ಬಲಗೊಳಿಸಲು ಹೈಕೋರ್ಟ್ ಬದ್ಧವಾಗಿದೆ. ಈ ದಿಶೆಯಲ್ಲಿ ನಾವು ಕಾರ್ಯಪ್ರವೃತ್ತರಾಗಿದ್ದೇವೆ ಎಂದು ತಿಳಿಸಿದರು.

ನ್ಯಾಯ ನಿರ್ಣಯದಲ್ಲಿ ಆಗುವ ವಿಳಂಬ ತಪ್ಪಬೇಕು ಎನ್ನುವ ಸಚಿವರು, ಸಂಸದರ ಸಲಹೆಗಳನ್ನು ತಾವು ಪರಿಗಣನೆಗೆ ತೆಗೆದುಕೊಳ್ಳುವುದಾಗಿ ತಿಳಿಸಿದ ನ್ಯಾಯಮೂರ್ತಿ, ಯಾವುದೇ ನ್ಯಾಯಾಲಯಗಳಲ್ಲಿ ಅನಗತ್ಯ ವ್ಯಾಜ್ಯಗಳು ಬಾಕಿ ಉಳಿಯಬಾರದು. ಅವು ತ್ವರಿತಗತಿಯಲ್ಲಿ ವಿಲೇಯಾಗಲು ಅವಶ್ಯವಿರುವ ಮಾನವ ಸಂಪನ್ಮೂಲ ಮತ್ತು ಮೂಲಭೂತ ಸೌಕರ್ಯ ಕಲ್ಪಿಸಲಾಗುತ್ತದೆ. ಜಿಲ್ಲೆಯ ನೂತನ ನ್ಯಾಯಾಲಯ ಸಂಕೀರ್ಣ ನಿರ್ಮಾಣ ನಮ್ಮ ಕಾರ್ಯಸಾಧನೆಯಾಗಿದೆ ಎಂದರು.

ಜಿಲ್ಲೆ ಐತಿಹಾಸಿಕ, ಪಾರಂಪರಿಕ ಗತವೈಭವ ಹೊಂದಿದೆ. ಅದನ್ನು ಅಭಿವೃದ್ಧಿಪಡಿಸಿ, ಪ್ರವಾಸೋದ್ಯಮ ವೃದ್ಧಿಗೊಳಿಸಲು ಸರ್ಕಾರ ಮುಂದಾಗಿರುವುದು ಸಂತೋಷದಾಯಕ ಎಂದರು.

ಕೊಪ್ಪಳ ಅಶೋಕ ಶೀಲಾಶಾಸನ, ಕದಂಬರು, ಚಾಲುಕ್ಯರು ಸೇರಿದಂತೆ ಇಲ್ಲಿ ಆಳ್ವಿಕೆ ಮಾಡಿದ ಮನೆತನಗಳ ಕುರಿತು ಪ್ರಸ್ತಾಪ ಮಾಡಿದ ಅವರು, ಇದೊಂದು ಕವಿರಾಜ ಮಾರ್ಗದಲ್ಲಿಯೂ ಪ್ರಸ್ತಾಪವಾಗಿರುವ ಹೆಮ್ಮೆ ಇದೆ ಎಂದರು. ಜೈನಕಾಶಿಯೂ ಆಗಿತ್ತು ಎಂದರು.

ಅಧ್ಯಕ್ಷತೆ ವಹಿಸಿದ್ದ ನ್ಯಾ.ಶ್ರೀಶಾನಂದ ಮಾತನಾಡಿ, ಸ್ವಾತಂತ್ರ್ಯ ಹೋರಾಟದಲ್ಲಿ ವಕೀಲರ ಪಾತ್ರ ಪ್ರಮುಖವಾಗಿತ್ತು. ಅಂತಹ ಹೋರಾಟ ಪರಂಪರೆಯು ವಕೀಲರ ಸಮೂಹದ್ದಾಗಿದೆ. ಜಿಲ್ಲಾ ರಚನಾ ಹೋರಾಟ ಸೇರಿದಂತೆ ಅನೇಕ ಕಾರ್ಯಸಾಧನೆಯಲ್ಲಿ ಜಿಲ್ಲೆಯ ವಕೀಲರ ಪಾತ್ರ ಹಿರಿದಾಗಿದೆ ಎಂದರು.

ಕೊಪ್ಪಳ ಅಂದ್ರೆ ಹೋರಾಟ, ಹೋರಾಟ ಅಂದ್ರೆ ಕೊಪ್ಪಳ ಎನ್ನುವುದು ಈ ಜಿಲ್ಲೆಯ ವಿಶೇಷತೆಯಾಗಿದೆ. ಜಿಲ್ಲೆಯಲ್ಲಿ ಹೊಸ ನ್ಯಾಯಾಲಯ ಸಂಕೀರ್ಣಕ್ಕೆ ಭೂಮಿಪೂಜೆ ನಡೆಸಿರುವುದು ದಿಟ್ಟ ಹೆಜ್ಜೆಯಾಗಿದೆ. ನ್ಯಾಯಾಲಯದ ನೀಲನಕ್ಷೆ ಈಗಾಗಲೇ ಸಿದ್ಧವಾಗಿದೆ. ಮೊದಲನೇ ಹಂತದ ಅನುದಾನ ಬಿಡುಗಡೆಗೆ ಕೋರಿದ ಕಡತ ಸಿದ್ಧವಾಗಿದೆ. ಕಾಲಮಿತಿಯೊಳಗೆ ಈ ಕಟ್ಟಡ ನಿರ್ಮಾಣವಾಗಿ ಜಿಲ್ಲೆ ಇತರರಿಗೆ ಮಾದರಿಯಾಗಲಿ ಎಂದರು.

ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ನ್ಯಾಯಾಂಗ ವ್ಯವಸ್ಥೆಯಲ್ಲಿನ ವಿಳಂಬವು ಆರೋಗ್ಯಯುತ ಸಮಾಜಕ್ಕೆ ಕಂಟಕವಾಗಿದೆ. ಶೀಘ್ರ ನ್ಯಾಯದಾನ ಸಿಗಬೇಕು ಎನ್ನುವುದಕ್ಕೆ ಬೇಕಾಗುವ ಮೂಲಭೂತ ಸೌಕರ್ಯ ಒದಗಿಸಲು ರಾಜ್ಯ ಸರ್ಕಾರ ಸನ್ನದ್ಧವಾಗಿದೆ. ಬೇರೆ ಬೇರೆ ಹಂತದ ನ್ಯಾಯಾಲಯಗಳಿಂದ ಸರ್ಕಾರಕ್ಕೆ ಬಂದಿರುವ ಎಲ್ಲ ಪ್ರಸ್ತಾವನೆಗಳಿಗೆ ಸ್ಪಂದಿಸಿ ರಾಜ್ಯ ಸರ್ಕಾರವು ಹೊಸ ಮೈಲುಗಲ್ಲು ಸಾಧಿಸುತ್ತಿದೆ. ಕಟ್ಟಡ, ತಂತ್ರಜ್ಞಾನ ಸೌಕರ್ಯಗಳೆಲ್ಲವೂ ತಾಲೂಕು ಕೋರ್ಟ್‌ವರೆಗೆ ಬಂದು ತಲುಪಿದಾಗ ಬದಲಾವಣೆ ಕಾಣಲು ಸಾಧ್ಯ ಎಂದರು.

ಸಂಸದ ಕರಡಿ ಸಂಗಣ್ಣ ಮಾತನಾಡಿ, ನೂತನ ನ್ಯಾಯಾಲಯ ಸಂಕೀರ್ಣಕ್ಕೆ ಭೂಮಿಪೂಜೆ ನಡೆದಿರುವುದು ಸಂಭ್ರಮದ ದಿನ. ಈ ಯೋಜನೆ ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ಬಹಳ ದಿನಗಳಾದರೂ ಇದೀಗ ಹೊಸ ಕಟ್ಟಡಕ್ಕೆ ಅಡಿಗಲ್ಲು ನೆರವೇರಿರುವುದು ನಮ್ಮ ಸೌಭಾಗ್ಯ ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ, ಜಿಲ್ಲಾ ಪ್ರಧಾನ-ಸತ್ರ ನ್ಯಾಯಾಧೀಶ ಚಂದ್ರಶೇಖರ ಸಿ. ಸ್ವಾಗತಿಸಿದರು. ಜಿಲ್ಲಾ ಬಾರ್ ಅಸೋಸಿಯೇಶನ್ ಅಧ್ಯಕ್ಷ ಎ.ವಿ. ಕಣವಿ ವಂದಿಸಿದರು. ಸಮಾರಂಭದಲ್ಲಿ ಉಚ್ಚ ನ್ಯಾಯಾಲಯದ ರಿಜಿಸ್ಟರ್ ಜನರಲ್ ಕೆ.ಎಸ್. ಭರತಕುಮಾರ, ವಿಪ ಸದಸ್ಯೆ ಹೇಮಲತಾ ನಾಯಕ, ವಕೀಲರ ಪರಿಷತ್ ಸದಸ್ಯ ಆಸಿಫ್ ಅಲಿ, ಹಿರಿಯ ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದೇವೇಂದ್ರ ಪಂಡಿತ, ಹಿರಿಯ ಸಿವಿಲ್ ನ್ಯಾಯಾಧೀಶೆ ಭವಾನಿ ಎಲ್.ಜೆ., ಸರಸ್ವತಿದೇವಿ, ವಿಜಯಕುಮಾರ ಕನ್ನೂರ, ರಮೇಶ ಗಾಣಿಗೇರ, ನ್ಯಾಯಾಧೀಶರಾದ ಹರೀಶಕುಮಾರ ಎಂ., ಎಸ್ ಸತೀಶ, ಸದಾನಂದ ನಾಯಕ, ಡಾ.ಶ್ರೀದೇವಿ ದರಬಾರೆ, ಗೌರಮ್ಮ ಪಾಟೀಲ, ಲೋಕೋಪಯೋಗಿ ಇಲಾಖೆಯ ಅಭಿಯಂತರ ಹೇಮಂತರಾಜ್, ವಕೀಲರಾದ ಹನುಮಂತರಾವ್ ಎಂ.ಎ. ನಿರೂಪಿಸಿದರು. ಶಕುಂತಲಾ ಬಿನ್ನಾಳ ಸಂಗಡಿಗರು ಪ್ರಾರ್ಥಿಸಿದರು.