ಕಾರ್ಗಿಲ್ ವಿಜಯೋತ್ಸವಕ್ಕೆ 25 ವರ್ಷ: ನಾಳೆ ಬುಲೆಟ್ ರ್ಯಾಲಿ

| Published : Jul 25 2024, 01:17 AM IST

ಕಾರ್ಗಿಲ್ ವಿಜಯೋತ್ಸವಕ್ಕೆ 25 ವರ್ಷ: ನಾಳೆ ಬುಲೆಟ್ ರ್ಯಾಲಿ
Share this Article
  • FB
  • TW
  • Linkdin
  • Email

ಸಾರಾಂಶ

ಕಾರ್ಗಿಲ್ ವಿಜಯೋತ್ಸವದ 25ನೇ ವರ್ಷಾಚರಣೆ ಅಂಗವಾಗಿ ಪ್ರೇರಣಾ ಯುವ ಸಂಸ್ಥೆಯಿಂದ ಜು.26ರಂದು ರಾಯಲ್‌ ರ್ಯಾಲಿ ಫಾರ್ ರಾಯಲ್ ವಿಕ್ಟರ್ ಘೋಷಣೆಯೊಂದಿಗೆ ನಗರದಲ್ಲಿ ರಾಯಲ್ ಎನ್‌ಫೀಲ್ಡ್‌ ಬೈಕ್‌ಗಳ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆ ಅಧ್ಯಕ್ಷ, ಮಾಜಿ ಮೇಯರ್ ಎಸ್.ಟಿ.ವೀರೇಶ ದಾವಣಗೆರೆಯಲ್ಲಿ ಹೇಳಿದ್ದಾರೆ.

- ರಾಯಲ್‌ ರ್ಯಾಲಿ ಫಾರ್ ರಾಯಲ್ ವಿಕ್ಟರಿ ಘೋಷಣೆಯಡಿ ಬೀದಿಗಿಳಿಯಲಿವೆ 150 ರಾಯಲ್ ಎನ್‌ಫೀಲ್ಡ್‌ ಬೈಕ್ಸ್‌: ವೀರೇಶ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಕಾರ್ಗಿಲ್ ವಿಜಯೋತ್ಸವದ 25ನೇ ವರ್ಷಾಚರಣೆ ಅಂಗವಾಗಿ ಪ್ರೇರಣಾ ಯುವ ಸಂಸ್ಥೆಯಿಂದ ಜು.26ರಂದು ರಾಯಲ್‌ ರ್ಯಾಲಿ ಫಾರ್ ರಾಯಲ್ ವಿಕ್ಟರ್ ಘೋಷಣೆಯೊಂದಿಗೆ ನಗರದಲ್ಲಿ ರಾಯಲ್ ಎನ್‌ಫೀಲ್ಡ್‌ ಬೈಕ್‌ಗಳ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆ ಅಧ್ಯಕ್ಷ, ಮಾಜಿ ಮೇಯರ್ ಎಸ್.ಟಿ.ವೀರೇಶ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 10 ಗಂಟೆಗೆ ಹೈಸ್ಕೂಲ್ ಮೈದಾನದಿಂದ ರ್ಯಾಲಿ ಆರಂಭವಾಗಲಿದೆ. ಸುಮಾರು 150 ಬುಲೆಟ್‌ಗಳೊಂದಿಗೆ ಚಾಲಕರು ಭಾಗವಹಿಸಲಿದ್ದಾರೆ. ಹೆಸರು ನೋಂದಣಿ ಮಾಡಿಸಿಕೊಂಡವರಿಗೆ ಸಂಸ್ಥೆಯಿಂದ ಕಾರ್ಗಿಲ್ ವಿಜಯೋತ್ಸವದ ಟಿ ಶರ್ಟ್ ನೀಡಲಾಗುವುದು ಎಂದರು.

ಹೈಸ್ಕೂಲ್ ಮೈದಾನದಿಂದ ಶ್ರೀ ಜಯದೇವ ವೃತ್ತ, ಕುವೆಂಪು ರಸ್ತೆ, ಹಳೇ ಪಿ.ಬಿ.ರಸ್ತೆ, ಈರುಳ್ಳಿ ಮಾರುಕಟ್ಟೆ, ಗಣೇಶ ಹೊಟೇಲ್, ಎಪಿಎಂಸಿ ಲಿಂಕ್ ರಸ್ತೆ, ಶ್ರೀ ವೆಂಕಟೇಶ್ವರ ವೃತ್ತ, ಅರಳೀ ಮರ ವೃತ್ತ, ವೆಂಕಾಭೋವಿ ಕಾಲನಿ, ಹಗೇದಿಬ್ಬ ವೃತ್ತ, ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನ, ಎಸ್‌ಕೆಪಿ ರಸ್ತೆ, ವೀರ ಮದಕರಿ ನಾಯಕ ವೃತ್ತದ, ವೀರ ರಾಣಿ ಕಿತ್ತೂರು ಚನ್ನಮ್ಮ ವೃತ್ತ, ಅಕ್ಕ ಮಹಾದೇವಿ ರಸ್ತೆ ವೃತ್ತದ ಮಾರ್ಗವಾಗಿ ರ್ಯಾಲಿ ಸಾಗಲಿದೆ ಎಂದು ಹೇಳಿದರು.

ವಿಜಯ ಹೋಟೆಲ್ ವೃತ್ತ, ಡಾ. ಎಂ.ಸಿ. ಮೋದಿ ವೃತ್ತ, ಬಾಪೂಜಿ ದಂತ ವೈದ್ಯಕೀಯ ಕಾಲೇಜು, ವಿದ್ಯಾನಗರ ಗಾಂಧಿವೃತ್ತ, ನೂತನ ಕಾಲೇಜು ರಸ್ತೆ, ಬಿಐಇಟಿ ರಸ್ತೆ, ಬಾಪೂಜಿ ಶಾಲೆ ವೃತ್ತ, ಸುಕ್ಷೇಮ ಆಸ್ಪತ್ರೆ, ಲಕ್ಷ್ಮಿ ಫ್ಲೋರ್ ಮಿಲ್ ವೃತ್ತ, ಶ್ರೀ ಶಾರದಾಂಬ ವೃತ್ತದ ಮಾರ್ಗವಾಗಿ ಮೇಜರ್ ಎಂ.ರವೀಂದ್ರನಾಥ ವೃತ್ತದಿಂದ ಸಾಗಿ, ಎಸ್.ನಿಜಲಿಂಗಪ್ಪ ಬಡಾವಣೆಯ ಸೈನಿಕರ ಸ್ಮಾರಕವಾದ ಅಮರ್ ಜವಾನ್ ಉದ್ಯಾನವನದ ಬಳಿ ಬುಲೆಟ್ ರ್ಯಾಲಿ ಮುಕ್ತಾಯವಾಗಲಿದೆ ಎಂದು ಮಾಹಿತಿ ನೀಡಿದರು.

ಕಾರ್ಗಿಲ್‌ ಮಾಜಿ ಯೋಧರಿಗೆ ಸನ್ಮಾನ:

ಸಂಜೆ 5.30ಕ್ಕೆ ಗುಂಡಿ ಮಹದೇವಪ್ಪ ಕಲ್ಯಾಣ ಮಂಟಪದ ವೇದಿಕೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಸಂಘ ಪರಿವಾರದ ದೇವಸ್ಥಾನ ಸಮರ್ಥನಾ ಸಮಿತಿ ಸಂಚಾಲಕ ಮುನಿಯಪ್ಪ ಭಾಗವಹಿಸುವರು. ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ, ಇಎನ್‌ಟಿ ತಜ್ಞ ಡಾ.ಶಿವಕುಮಾರ ಅಂದನೂರು, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಸತ್ಯಪ್ರಕಾಶ, ಪ್ಯಾರಾ ಮಿಲಿಟಿರಿ ಸೈನಿಕರ ಸಂಘದ ಮಂಜಾ ನಾಯ್ಕ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಕಾರ್ಗಿಲ್ ಯೋಧದಲ್ಲಿ ಹೋರಾಡಿದ ಜಿಲ್ಲೆ ಮಾಜಿ ಯೋಧರಿಗೆ ಗೌರವಿಸಲಾಗುವುದು ಎಂದರು.

ವಿಜಯೋತ್ಸವದ ಸವಿ ನೆನಪಿಗಾಗಿ ಸಸಿ ನೆಡುವುದು ಸೇರಿದಂತೆ ಸಮಾಜಮುಖಿ ಕಾರ್ಯ ಕೈಗೊಳ್ಳಲಾಗುವುದು. ವಿವಿಧ ಶಾಲೆಗಳಲ್ಲೂ ವಿಜಯೋತ್ಸವ ಆಚರಿಸಲಾಗುತ್ತಿದೆ. ನಗರ, ಜಿಲ್ಲೆಯ ಜನತೆ, ವಿದ್ಯಾರ್ಥಿಗಳು, ಯುವಜನರು ಬೈಕ್ ರ್ಯಾಲಿ ಹಾಗೂ 25ನೇ ವರ್ಷದ ಕಾರ್ಗಿಲ್‌ ವಿಜಯೋತ್ಸವ ಸಮಾರಂಭದಲ್ಲಿ ಭಾಗವಹಿಸಬೇಕು ಎಂದು ವೀರೇಶ ಹೇಳಿದರು.

ಪ್ರೇರಣಾ ಯುವ ಸಂಸ್ಥೆಯ ಪದಾಧಿಕಾರಿ, ಹಿರಿಯ ಹೋಟೆಲ್ ಉದ್ಯಮಿ ಮಹೇಶ ಶೆಟ್ಟಿ, ಮಾಜಿ ಸೈನಿಕರ ಸಂಘದ ಸತ್ಯಪ್ರಕಾಶ, ಪ್ರೇರಣಾ ಸಂಸ್ಥೆ ಉಪಾಧ್ಯಕ್ಷ ಗಣೇಶ ಕಿರಣ್, ಕಾರ್ಯದರ್ಶಿ ಅಶೋಕ ಇತರರು ಇದ್ದರು.

- - -

ಬಾಕ್ಸ್‌ ಶಾಲಾ, ಕಾಲೇಜುಗಳಲ್ಲಿ ವಿಜಯೋತ್ಸವಕ್ಕೆ ಮನವಿ

25 ವರ್ಷಗಳ ಹಿಂದೆ ಶತೃರಾಷ್ಟ್ರ ಪಾಕಿಸ್ತಾನದ ಯೋಧರು ಹಾಗೂ ಉಗ್ರರಿಂದ ಅತಿಕ್ರಮಣಕ್ಕೆ ಒಳಗಾಗಿದ್ದ ದೇಶದ ಕಾರ್ಗಿಲ್ ಪ್ರದೇಶದ ಪ್ರತಿಕೂಲ, ಕ್ಲಿಷ್ಟಕರ ವಾತಾವರಣದಲ್ಲಿ ಭಾರತೀಯ ಯೋಧರು ಸತತ 2 ತಿಂಗಳ ಕಾಲ ಹೋರಾಟ ನಡೆಸಿದರು. ಯುದ್ಧದಲ್ಲಿ ಕಾರ್ಗಿಲನ್ನು ಮರುವಶ ಮಾಡಿಕೊಳ್ಳುವ ಮೂಲಕ ಪಾಕ್ ಯೋಧರು, ಉಗ್ರರನ್ನು ಅಲ್ಲಿಂದ ಕಾಲ್ಕಿತ್ತುವಂತೆ ಮಾಡಿದ್ದ ಜು.26ರಂದು. ಈ ಹಿನ್ನೆಲೆ ಜಿಲ್ಲೆ ಹಾಗೂ ರಾಜ್ಯಾದ್ಯಂತ ಶಾಲಾ-ಕಾಲೇಜುಗಳಲ್ಲಿ ಕಾರ್ಗಿಲ್ ವಿಜಯೋತ್ಸವ ಕಡ್ಡಾಯ ಆಚರಣೆ ಆಗಬೇಕಿದೆ ಎಂದು ಎಸ್‌.ಟಿ. ವೀರೇಶ ಜಿಲ್ಲಾಡಳಿತ, ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಕಾರ್ಗಿಲ್‌ ಯುದ್ಧದಲ್ಲಿ ದಾವಣಗೆರೆ ಮೂಲಕ ವೀರಚಕ್ರ ಪುರಸ್ಕೃತ ಮೇಜರ್ ಎಂ.ರವೀಂದ್ರನಾಥ ನೇತೃತ್ವದ ಸೇನಾ ಪಡೆ ಪಾತ್ರವೂ ಅತ್ಯಂತ ಮಹತ್ವದ್ದಾಗಿದೆ. ಇಡೀ ಜಿಲ್ಲೆಯ ಜನತೆ ಮೇಜರ್ ರವೀಂದ್ರನಾಥ ಮತ್ತು ತಂಡದ ಹೋರಾಟದ ಕಿಚ್ಚನ್ನು ಮರೆಯುವುದಿಲ್ಲ. ನೂರಾರು ಹುತಾತ್ಮ ಯೋಧರ, ತ್ಯಾಗ ಬಲಿದಾನವನ್ನು ಈಗಿನ ಪೀಳಿಗೆಯ ಮಕ್ಕಳಿಗೆ ತಿಳಿಸುವ ಕೆಲಸವೂ ಆಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ಶಾಲಾ- ಕಾಲೇಜುಗಳಲ್ಲಿ ವಿಜಯೋತ್ಸವ ಆಚರಣೆಗೆ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.

- - - -24ಕೆಡಿವಿಜಿ3:

ಕಾರ್ಗಿಲ್ ವಿಜಯೋತ್ಸವ ಆಚರಣೆ ಕುರಿತು ದಾವಣಗೆರೆಯಲ್ಲಿ ಪ್ರೇರಣಾ ಯುವ ಸಂಸ್ಥೆ ಅಧ್ಯಕ್ಷ, ಮಾಜಿ ಮೇಯರ್ ಎಸ್.ಟಿ.ವೀರೇಶ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು.