ಬೆಂಗಳೂರಿನಿಂದ ಹುಬ್ಬಳ್ಳಿ ಮಾರ್ಗವಾಗಿ ಮುಂಬೈಗೆ ವಂದೇ ಭಾರತ್ ಸ್ಲೀಪರ್ ರೈಲು ಓಡಿಸಬೇಕೆಂಬ ಬೇಡಿಕೆ ಬೆನ್ನಲ್ಲೇ ಇದೀಗ ಕೇಂದ್ರ ರೈಲ್ವೆ ಸಚಿವರು ಬುಲೆಟ್ ಟ್ರೈನ್ ಕಾರಿಡಾರ್ ನಿರ್ಮಿಸುವ ಕುರಿತು ಪ್ರಸ್ತಾಪಿಸಿರುವುದು ಉತ್ತರ ಕರ್ನಾಟಕ ಭಾಗದ ಉದ್ಯಮಿಗಳು, ಸಾರ್ವಜನಿಕರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.
ಅಜೀಜಅಹ್ಮದ ಬಳಗಾನೂರ
ಹುಬ್ಬಳ್ಳಿ:ಬೆಂಗಳೂರಿನಿಂದ ಹುಬ್ಬಳ್ಳಿ ಮಾರ್ಗವಾಗಿ ಮುಂಬೈಗೆ ವಂದೇ ಭಾರತ್ ಸ್ಲೀಪರ್ ರೈಲು ಓಡಿಸಬೇಕೆಂಬ ಬೇಡಿಕೆ ಬೆನ್ನಲ್ಲೇ ಇದೀಗ ಕೇಂದ್ರ ರೈಲ್ವೆ ಸಚಿವರು ಬುಲೆಟ್ ಟ್ರೈನ್ ಕಾರಿಡಾರ್ ನಿರ್ಮಿಸುವ ಕುರಿತು ಪ್ರಸ್ತಾಪಿಸಿರುವುದು ಉತ್ತರ ಕರ್ನಾಟಕ ಭಾಗದ ಉದ್ಯಮಿಗಳು, ಸಾರ್ವಜನಿಕರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.
ಬೆಂಗಳೂರು-ಚೆನ್ನೈ, ಬೆಂಗಳೂರು-ಹೈದರಾಬಾದ್ ಬುಲೆಟ್ ಟ್ರೈನ್ ಕಾರಿಡಾರ್ ಕಾಮಗಾರಿ ಪ್ರಾರಂಭವಾಗಿದೆ. ದೇಶದಲ್ಲಿ ಮತ್ತಷ್ಟು ಬುಲೆಟ್ ಟ್ರೈನ್ ಕಾರಿಡಾರ್ ನಿರ್ಮಿಸಲು ಪ್ರಧಾನಿ ನರೇಂದ್ರ ಮೋದಿ ಅವರು ನಿರ್ಧರಿಸಿದ್ದು, ಮುಂಬರುವ ದಿನಗಳಲ್ಲಿ 3000 ಕಿಲೋ ಮೀಟರ್ ಉದ್ದದ ಹೈಸ್ಪೀಡ್ ರೈಲು ಯೋಜನೆಯಲ್ಲಿ ಬೆಂಗಳೂರು-ಹುಬ್ಬಳ್ಳಿ-ಮುಂಬೈ ಕಾರಿಡಾರ್ ಸೇರಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸುಳಿವು ನೀಡಿದ್ದಾರೆ. ಇದು ಈ ಭಾಗದ ಜನರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ.ಹೆಚ್ಚಿರುವ ಬೇಡಿಕೆ:
ನ.1ರಿಂದ ಆರಂಭವಾಗಿರುವ ಬೆಂಗಳೂರಿನಿಂದ ಕಲ್ಯಾಣ ಕರ್ನಾಟಕ ಮೂಲಕ ಪುಣೆ ತಲುಪುವ ವಂದೇ ಭಾರತ್ ಸ್ಲೀಪರ್ ರೈಲನ್ನು ವಾರದಲ್ಲಿ ಮೂರು ದಿನ ಹುಬ್ಬಳ್ಳಿ ಮಾರ್ಗವಾಗಿ ಓಡಿಸಬೇಕೆಂದು ಕೆಸಿಸಿಐ ಹಾಗೂ ವಿವಿಧ ಸಂಘ- ಸಂಸ್ಥೆಗಳು ಬೇಡಿಕೆ ಮುಂದಿಟ್ಟಿದ್ದವು. ಇದೀಗ ಕೇಂದ್ರ ಸಚಿವರು ದೇಶದ ಹೈಸ್ಪೀಡ್ ರೈಲು ಜಾಲವನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶ ಪ್ರಕಟಿಸಿದ್ದಾರೆ. ಈಗಾಗಲೇ ಸುಮಾರು 4 ಸಾವಿರ ಕಿ.ಮೀ. ಉದ್ದದ ಕಾರಿಡಾರ್ಗಳ ಯೋಜನೆ ಘೋಷಿಸಿರುವ ಕೇಂದ್ರ ಸರ್ಕಾರ, ಮುಂದಿನ ಹಂತದಲ್ಲಿ ಇನ್ನೂ 3 ಸಾವಿರ ಕಿ.ಮೀ. ಮಾರ್ಗ ಸೇರ್ಪಡೆಗೊಳಿಸುವ ಉದ್ದೇಶ ಹೊಂದಿದೆ. ಇದರಲ್ಲಿ ಬೆಂಗಳೂರು- ಹುಬ್ಬಳ್ಳಿ- ಪುಣೆ ಮಾರ್ಗವೂ ಸ್ಥಾನ ಪಡೆಯುವ ನಿರೀಕ್ಷೆಯಿದೆ.6 ಜಿಲ್ಲೆಗೆ ಸಂಪರ್ಕ:
ಸಂಭಾವ್ಯ ಮಾರ್ಗದ ಪ್ರಕಾರ ಬೆಂಗಳೂರು, ತುಮಕೂರು, ಚಿತ್ರದುರ್ಗ, ದಾವಣಗೆರೆ, ಹಾವೇರಿ ಮೂಲಕ ಹುಬ್ಬಳ್ಳಿ-ಧಾರವಾಡ ತಲುಪಿ, ಅಲ್ಲಿಂದ ಬೆಳಗಾವಿ ಮೂಲಕ ಮಹಾರಾಷ್ಟ್ರ ಪ್ರವೇಶಿಸುವ ಸಾಧ್ಯತೆಯಿದೆ. ನಂತರ ಕೊಲ್ಲಾಪುರ, ಸಾಂಗ್ಲಿ, ಸತಾರಾ ಮಾರ್ಗವಾಗಿ ಪುಣೆ ತಲುಪಬಹುದು. ಆದರೆ, ಇದು ಸಂಭಾವ್ಯ ಮಾರ್ಗದ ಅಂದಾಜಾಗಿದ್ದು, ಅಂತಿಮ ಮಾರ್ಗ ಮತ್ತು ನಿಲ್ದಾಣಗಳ ಬಗ್ಗೆ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.20 ಗಂಟೆಯ ಪ್ರಯಾಣಕ್ಕೆ ಬ್ರೇಕ್?
ಸದ್ಯ ಬೆಂಗಳೂರು-ಹುಬ್ಬಳ್ಳಿ ರೈಲು ಪ್ರಯಾಣಕ್ಕೆ ಸುಮಾರು 6ರಿಂದ 7 ಗಂಟೆ, ಬೆಂಗಳೂರು-ಪುಣೆ ನಡುವಿನ 950ರಿಂದ 1000 ಕಿಲೋ ಮೀಟರ್ ಪ್ರಯಾಣಕ್ಕೆ ರೈಲಿನ ಆಧಾರದ ಮೇಲೆ 16ರಿಂದ 20 ಗಂಟೆ ವರೆಗೆ ಸಮಯ ಹಿಡಿಯುತ್ತದೆ. ಬುಲೆಟ್ ರೈಲು ಗಂಟೆಗೆ ಸುಮಾರು 300 ಕಿಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುವುದರಿಂದ ಪ್ರಯಾಣದ ಅವಧಿ ಗಣನೀಯವಾಗಿ ಕಡಿಮೆಯಾಗುವ ನಿರೀಕ್ಷೆಯಿದೆ.ಕೈಗಾರಿಕೆ, ವ್ಯಾಪಾರಕ್ಕೆ ಹೊಸ ಬಲ:
ಹುಬ್ಬಳ್ಳಿ-ಧಾರವಾಡ ಉತ್ತರ ಕರ್ನಾಟಕದ ಪ್ರಮುಖ ವಾಣಿಜ್ಯ ಮತ್ತು ಕೈಗಾರಿಕಾ ಕೇಂದ್ರ. ಪುಣೆಯೊಂದಿಗೆ ಹೈಸ್ಪೀಡ್ ಸಂಪರ್ಕ ದೊರೆತರೆ ಉದ್ಯಮ, ವ್ಯಾಪಾರ, ಶಿಕ್ಷಣ, ಆರೋಗ್ಯ ಹಾಗೂ ಪ್ರವಾಸೋದ್ಯಮ ಕ್ಷೇತ್ರಗಳಿಗೆ ಅನುಕೂಲವಾಗಲಿದೆ. ಬೆಂಗಳೂರಿನ ಐಟಿ ಮತ್ತು ಕೈಗಾರಿಕಾ ವಲಯದೊಂದಿಗೂ ಉತ್ತರ ಕರ್ನಾಟಕದ ಸಂಪರ್ಕ ಮತ್ತಷ್ಟು ಬಲಗೊಳ್ಳಲಿದೆ.ಘೋಷಣೆಯಿಂದ ಅನುಷ್ಠಾನದತ್ತ ಚಿತ್ತ:
ಯೋಜನೆಗೆ ಅಧಿಕೃತ ಅನುಮೋದನೆ, ಡಿಪಿಆರ್, ಮಾರ್ಗ ಸಮೀಕ್ಷೆ, ಭೂಸ್ವಾಧೀನ ಮತ್ತು ಅನುದಾನ ಹಂಚಿಕೆಯಂತಹ ಹಂತಗಳು ಇನ್ನೂ ಬಾಕಿ ಇವೆ. ಮುಂದಿನ ಬಜೆಟ್ನಲ್ಲಿ ಯೋಜನೆಗೆ ಸಂಬಂಧಿಸಿದ ನಿರ್ಧಾರ ಹೊರಬೀಳುವ ನಿರೀಕ್ಷೆಯಿದೆ.ಒಟ್ಟಿನಲ್ಲಿ, ಬೆಂಗಳೂರು-ಹುಬ್ಬಳ್ಳಿ- ಪುಣೆ ಬುಲೆಟ್ ರೈಲು ಯೋಜನೆ ಸಾಕಾರಗೊಂಡರೆ ಉತ್ತರ ಕರ್ನಾಟಕದ ರೈಲ್ವೆ ಸಂಪರ್ಕಕ್ಕೆ ಹೊಸ ವೇಗ ದೊರೆಯಲಿದೆ. ರಾಜಧಾನಿ ಬೆಂಗಳೂರು ಮತ್ತು ಮಹಾರಾಷ್ಟ್ರದ ಪುಣೆಯ ನಡುವೆ ಹುಬ್ಬಳ್ಳಿಯನ್ನು ಪ್ರಮುಖ ಸಂಪರ್ಕ ಕೊಂಡಿಯಾಗಿಸುವ ಈ ಯೋಜನೆ, ಉತ್ತರ ಕರ್ನಾಟಕದ ಅಭಿವೃದ್ಧಿಯ ಹೊಸ ಹಳಿಯಾಗುವ ನಿರೀಕ್ಷೆ ಮೂಡಿಸಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದಲ್ಲಿ ರೈಲ್ವೆ ಕ್ಷೇತ್ರದ ಸಮಗ್ರ ಪರಿವರ್ತನೆಯಾಗುತ್ತಿದೆ. ವಂದೇ ಭಾರತ್ ರೈಲುಗಳ ವಿಸ್ತರಣೆಯೊಂದಿಗೆ ಕರ್ನಾಟಕದಲ್ಲಿ ಹೈಸ್ಪೀಡ್ ರೈಲು ಕಾರಿಡಾರ್ಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಮುಂದಾಗಿರುವುದು ದೇಶದ ಪ್ರಗತಿಗೆ ಹೊಸ ವೇಗ ನೀಡಲಿದೆ.ಪ್ರಹ್ಲಾದ ಜೋಶಿ, ಕೇಂದ್ರ ಸಚಿವರುಬೆಂಗಳೂರು-ಹುಬ್ಬಳ್ಳಿ-ಪುಣೆ ಬುಲೆಟ್ ರೈಲು ಕಾರಿಡಾರ್ ಪ್ರಸ್ತಾಪಿಸಿರುವುದು ಉತ್ತರ ಕರ್ನಾಟಕದ ಜನರ ಸಂತಸಕ್ಕೆ ಕಾರಣವಾಗಿದೆ. ಯೋಜನೆಯನ್ನು ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಿ ಈ ಭಾಗಕ್ಕೆ ವೇಗದ ರೈಲು ಸಂಪರ್ಕ ಕಲ್ಪಿಸಬೇಕು.
ಮಹೇಂದ್ರ ಸಿಂಘಿ, ವಲಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯರು