ಕಾರ್‌ ಹಿಂಬಾಲಿಸಿ ಕಿರುಕುಳ ನೀಡಿದ ಪುಂಡರ ಸೆರೆ!

| Published : Apr 02 2024, 02:17 AM IST / Updated: Apr 02 2024, 07:10 AM IST

ಕಾರ್‌ ಹಿಂಬಾಲಿಸಿ ಕಿರುಕುಳ ನೀಡಿದ ಪುಂಡರ ಸೆರೆ!
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರುಕಾರ್‌ ಅನ್ನು ಹಿಂಬಾಲಿಸಿ ಮಹಿಳೆಗೆ ಕಿರುಕುಳ ನೀಡಿದ ಆರೋಪದಡಿ ಪದವಿ ವಿದ್ಯಾರ್ಥಿ ಸೇರಿ ಇಬ್ಬರನ್ನು ಮಡಿವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು : ಕಾರ್‌ ಅನ್ನು ಹಿಂಬಾಲಿಸಿ ಮಹಿಳೆಗೆ ಕಿರುಕುಳ ನೀಡಿದ ಆರೋಪದಡಿ ಪದವಿ ವಿದ್ಯಾರ್ಥಿ ಸೇರಿ ಇಬ್ಬರನ್ನು ಮಡಿವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಶೇಷಾದ್ರಿಪುರ ನಿವಾಸಿಗಳಾದ ಜಗನ್ನಾಥ್(28) ಮತ್ತು ತೇಜಸ್(21) ಬಂಧಿತರು. ಮತ್ತೊಬ್ಬ ಆರೋಪಿ ಕಣ್ಣನ್‌ ಎಂಬಾತ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ. ಭಾನುವಾರ ರಾತ್ರಿ ಆರೋಪಿಗಳು ಕಾರೊಂದನ್ನು ಹಿಂಬಾಲಿಸಿ ಮಹಿಳೆಗೆ ಕಿರುಕುಳ ನೀಡುವ ವಿಡಿಯೋವನ್ನು ಸನುಕ್‌ ಘೋಷ್‌ ಎಂಬುವವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡು ನಗರ ಪೊಲೀಸರಿಗೆ ಟ್ಯಾಗ್‌ ಮಾಡಿದ್ದರು. ಇದರ ಬೆನ್ನಲ್ಲೇ ಮಡಿವಾಳ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಅರೋಪಿಗಳನ್ನು ಬಂಧಿಸಿದ್ದಾರೆ.

ಸಹಾಯವಾಣಿಗೆ ದೂರು:

ಆರೋಪಿಗಳ ವರ್ತನೆಯಿಂದ ಗಾಬರಿಗೊಂಡ ಮಹಿಳೆ, ತನ್ನ ಮೊಬೈಲ್‌ನಲ್ಲಿ ಆರೋಪಿಗಳ ಪುಂಡಾಟವನ್ನು ಸೆರೆ ಹಿಡಿದಿದ್ದಾರೆ. ಬಳಿಕ ಆ ವಿಡಿಯೊವನ್ನು ಪರಿಚಿತ ಸನುಕ್‌ ಘೋಷ್‌ಗೆ ಕಳುಹಿಸಿದ್ದಾರೆ. ಅಂತೆಯೆ 112 ಪೊಲೀಸ್‌ ಸಹಾಯವಾಣಿಗೆ ಕರೆ ಮಾಡಿ ಆರೋಪಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಎಚ್ಚೆತ್ತ ಪೊಲೀಸರು ದ್ವಿಚಕ್ರ ವಾಹನದ ನೋಂದಣಿ ಸಂಖ್ಯೆ ಆಧರಿಸಿ ಇಬ್ಬರು ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.

ಇಂಡಿಕೇಟರ್‌ ಹಾಕದೆ ತಿರುವು:

ಆರೋಪಿ ಜಗನ್ನಾಥ್‌ ಕಾಲ್‌ ಸೆಂಟರ್‌ ಉದ್ಯೋಗಿಯಾಗಿದ್ದರೆ, ಆರೋಪಿ ತೇಜಸ್‌ ಶೇಷಾದ್ರಿಪುರದ ಖಾಸಗಿ ಕಾಲೇಜಿನಲ್ಲಿ ಬಿಕಾಂ ಪದವಿ ವ್ಯಾಸಂಗ ಮಾಡುತ್ತಿದ್ದಾನೆ. ಕಾರು ಚಾಲಕ ಇಂಡಿಕೇಟರ್‌ ಹಾಕದೆ ಎಡ ತಿರುವು ಪಡೆದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಮಾಡಿದರು. ಇದನ್ನು ಪ್ರಶ್ನಿಸಿದಕ್ಕೆ ಮಧ್ಯದ ಬೆರಳನ್ನು ತೋರಿಸಿ ನಿಂದಿಸಿದರು. ಹೀಗಾಗಿ ನಾವು ಕಾರನ್ನು ಹಿಂಬಾಲಿಸಿದ್ದಾಗಿ ಆರೋಪಿಗಳು ಹೇಳಿಕೆ ನೀಡಿದ್ದಾರೆ. ಈ ಸಂಬಂಧ ಮಡಿವಾಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮದ್ಯದ ಬೆರಳು ತೋರಿಸಿದ್ದಕ್ಕೆ ಫಾಲೋ?ಆರೋಪಿಗಳು ಮೂರು ದ್ವಿಚಕ್ರ ವಾಹನಗಳಲ್ಲಿ ಹೊಸೂರು ಬಳಿ ಇರುವ ಫಾಲ್ಸ್‌ಗೆ ಹೋಗಿ ಭಾನುವಾರ ರಾತ್ರಿ ನಗರಕ್ಕೆ ವಾಪಾಸಾಗುತ್ತಿದ್ದರು. ರಾತ್ರಿ 8 ಗಂಟೆ ಸುಮಾರಿಗೆ ಹೊಸೂರು ರಸ್ತೆಯ ಸೇಂಟ್‌ ಜಾನ್ಸ್‌ ಆಸ್ಪತ್ರೆ ಕಡೆಯಿಂದ ಮಹಿಳೆ ಮತ್ತು ಆಕೆಯ ಪತಿ ಕಾರಿನಲ್ಲಿ ಮಡಿವಾಳ ಕಡೆಗೆ ಬರುತ್ತಿದ್ದರು. ಈ ವೇಳೆ ಮಾರ್ಗ ಮಧ್ಯೆ ಕಾರು ಚಾಲಕ ಯಾವುದೇ ಸೂಚನೆ ನೀಡದೆ ಎಡ ತಿರುವು ಪಡೆದ ಪರಿಣಾಮ ಕಾರು, ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿದೆ. ಇದರಿಂದ ಕೋಪಗೊಂಡ ಆರೋಪಿಗಳು ಇಂಡಿಕೇಟರ್‌ ಹಾಕಿಕೊಂಡು ಎಡ ತಿರುವು ಪಡೆಯಬೇಕಲ್ಲವೇ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಕಾರು ಚಾಲಕ ಮಧ್ಯದ ಬೆರಳನ್ನು ಅಸಹ್ಯವಾಗಿ ತೋರಿಸಿ ಮುಂದಕ್ಕೆ ತೆರಳಿದ್ದಾನೆ ಎನ್ನಲಾಗಿದೆ.ಇದರಿಂದ ಕೋಪಗೊಂಡ ಆರೋಪಿಗಳು, ಆ ಕಾರನ್ನು ಹಿಂಬಾಲಿಸಿದ್ದಾರೆ. ಮಡಿವಾಳ ಕೇಳಸೇತುವೆ ಬಳಿ ಕಾರಿನ ಅಕ್ಕಪಕ್ಕ ಬಂದು ದ್ವಿಚಕ್ರ ವಾಹನ ನಿಲ್ಲಿಸಿ, ಕಾರಿನ ಬಾಗಿಲು ತೆರೆಯಲು ಪ್ರಯತ್ನಿಸಿದ್ದಾರೆ. ಅವಾಚ್ಯ ಶಬ್ಧಗಳಿಂದ ಕಾರಿನ ಚಾಲಕ ಹಾಗೂ ಆಕೆಯ ಪತ್ನಿಯನ್ನು ನಿಂದಿಸಿದ್ದಾರೆ.