ಸಾರಾಂಶ
ಹೂವಿನಹಡಗಲಿ ಪಟ್ಟಣದಲ್ಲಿ ಊರಮ್ಮ ದೇವಿ ಜಾತ್ರೆ ಅಂಗವಾಗಿ ಸಾರ್ವಜನಿಕ ಆಸ್ಪತ್ರೆ ಹಿಂಭಾಗದ ಜಮೀನುಯೊಂದರಲ್ಲಿ ಜೋಡೆತ್ತಿನ ಬಂಡಿ ಓಟದ ಸ್ಪರ್ಧೆ ನಡೆಯಿತು.
ಹೂವಿನಹಡಗಲಿ: ಪಟ್ಟಣದಲ್ಲಿ ಊರಮ್ಮ ದೇವಿ ಜಾತ್ರೆ ಅಂಗವಾಗಿ ಸಾರ್ವಜನಿಕ ಆಸ್ಪತ್ರೆ ಹಿಂಭಾಗದ ಜಮೀನುಯೊಂದರಲ್ಲಿ ಜೋಡೆತ್ತಿನ ಬಂಡಿ ಓಟದ ಸ್ಪರ್ಧೆಗೆ ಶಾಸಕ ಕೃಷ್ಣನಾಯ್ಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಹಬ್ಬ ಹರಿ ದಿನ ಜಾತ್ರೆಯಲ್ಲಿ ಎತ್ತಿನ ಬಂಡಿ ಓಡಿಸುವ ಸ್ಪರ್ಧೆ, ಬಯಲಾಟ ಪ್ರದರ್ಶನ, ನಾಟಕ ಹಾಗೂ ರಂಗಭೂಮಿ ಕ್ಷೇತ್ರಗಳಿಗೆ ಉತ್ತಮ ಅವಕಾಶ ಕಲ್ಪಿಸುವ ಮೂಲಕ ನಮ್ಮ ನಾಡಿನ ಕಲೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.ಎತ್ತಿನ ಬಂಡಿ ಓಡಿಸುವ ಸ್ಪರ್ಧೆಯ ನಿರ್ಣಾಯಕರು ಹಸಿರು ನಿಶಾನೆ ತೋರಿಸಿದಾಗ, ಚಕ್ಕಡಿಗೆ ಕಟ್ಟಿದ್ದ ಎತ್ತುಗಳು ಓಡಿಸತೊಡಗಿದರು. ಚಕ್ಕಡಿಯಲ್ಲಿರುವ ರೈತರು ಎತ್ತುಗಳನ್ನು ಬಾರುಕೋಲಿನಿಂದ ಹೊಡೆದು ಓಟದ ವೇಗ ಹೆಚ್ಚಿಸಿ ಗುರಿ ಮುಟ್ಟುವ ಪ್ರಯತ್ನ ಮಾಡಿದರು. ಈ ವೇಳೆ ಸೇರಿದ್ದ ಅಪಾರ ಜನರು ಸಿಳ್ಳೆ, ಕೇಕೆ ಹಾಕುತ್ತ ಹುರಿದುಂಬಿಸುತ್ತಿದ್ದರು. ಎತ್ತಿನ ಬಂಡಿಗಳ ಪೈಪೋಟಿ ನೆರೆದವರ ಮೈನವಿರೇಳಿಸಿತು.
ಹೂವಿನಹಡಗಲಿ, ಕೂಡ್ಲಿಗಿ, ಹರಿಹರ, ದಾವಣಗೆರೆ, ಹಿರೇಹಡಗಲಿ, ತಿಪ್ಪಾಪುರ, ಮುದೇನೂರು ಇತರೆ ಕಡೆಗಳಿಂದ 33 ಜೋಡಿ ಎತ್ತುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಮೂರು ಸುತ್ತುಗಳಲ್ಲಿ ಸ್ಪರ್ಧೆ ನಡೆಯಿತು. ಮೊದಲ ಸ್ಥಾನ ಪಡೆದ ಹೊಳಗುಂದಿಯ ಹನಸಿ ಸಿದ್ದಲಿಂಗಪ್ಪನವರ ಜೋಡೆತ್ತು 50 ಸಾವಿರ, ದ್ವಿತೀಯ ಸ್ಥಾನ ಗಳಿಸಿದ ಹರಿಹರ ತಾಲೂಕು ಗಂಗನರಸಿಯ ಗೋಣಿಬಸವೇಶ್ವರ ಜೋಡೆತ್ತು 30 ಸಾವಿರ, ತೃತೀಯ ಸ್ಥಾನ ಪಡೆದ ಹನಕನಹಳ್ಳಿಯ ಮೈಲಾರಲಿಂಗೇಶ್ವರ ಜೋಡೆತ್ತುಗಳಿಗೆ 20 ಸಾವಿರ ಬಹುಮಾನ ನೀಡಲಾಯಿತು.ಊರಮ್ಮ ದೇವಿ ಜಾತ್ರಾ ಸಮಿತಿ ಅಧ್ಯಕ್ಷ ಕೋಡಿಹಳ್ಳಿ ಮುದುಕಪ್ಪ, ಕಾಯಾಧ್ಯಕ್ಷ ಕೆ. ನಾಗಭೂಷಣ, ಪ್ರಧಾನ ಕಾರ್ಯದರ್ಶಿ ಯು. ಹನುಮಂತಪ್ಪ, ಮನ್ನೆ ಸತ್ಯನಾರಾಯಣ ರೆಡ್ಡಿ, ಬಸೆಟ್ಟಿ ಪ್ರಕಾಶ್, ಜಿ. ವೇಣುಗೋಪಾಲ ಶೆಟ್ಟಿ, ಆರ್. ಫಕ್ಕೀರಪ್ಪ, ಈಟಿ ಲಿಂಗರಾಜ, ಸಿರಾಜ್ ಬಾವಿಹಳ್ಳಿ, ಪುನೀತ್, ಬಿ.ಬಿ.ಅಸುಂಡಿ, ಜೆ. ಬಸವರಾಜ, ರಾಘವೇಂದ್ರ ಸೇರಿದಂತೆ ಇತರರಿದ್ದರು.