ಕುಂದವಾಡದ ಪುಂಡ ಶ್ವಾನಗಳು ಪಾಲಿಕೆ ಬಲೆಗೆ

| Published : Aug 05 2025, 11:45 PM IST

ಸಾರಾಂಶ

ದಾವಣಗೆರೆ ನಗರದ ಹೊರವಲಯದ ಹಳೇ ಕುಂದುವಾಡ ಗ್ರಾಮದಲ್ಲಿ ಪುಂಡ ಬೀದಿನಾಯಿಗಳು ಅನೇಕ ಮಕ್ಕಳು, ಹಿರಿಯರ ಮೇಲೆ ದಾಳಿ ಮಾಡಿ, ಕಚ್ಚಿ ಗಾಯಗೊಳಿಸಿದ್ದವು. ಈ ಹಿನ್ನೆಲೆ ಎಚ್ಚೆತ್ತ ಪಾಲಿಕೆ ಮಂಗಳವಾರದಿಂದ ಪುಂಡ ಶ್ವಾನಗಳನ್ನು ಹಿಡಿಯುವ ಕಾರ್ಯಾಚರಣೆ ಕೈಗೊಂಡಿದೆ.

- ಅಧಿಕಾರಿಗಳ ನೇತೃತ್ವ । 10ಕ್ಕೂ ಹೆಚ್ಚು ಬೀದಿನಾಯಿಗಳ ಹಿಡಿದ ತಂಡ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ನಗರದ ಹೊರವಲಯದ ಹಳೇ ಕುಂದುವಾಡ ಗ್ರಾಮದಲ್ಲಿ ಪುಂಡ ಬೀದಿನಾಯಿಗಳು ಅನೇಕ ಮಕ್ಕಳು, ಹಿರಿಯರ ಮೇಲೆ ದಾಳಿ ಮಾಡಿ, ಕಚ್ಚಿ ಗಾಯಗೊಳಿಸಿದ್ದವು. ಈ ಹಿನ್ನೆಲೆ ಎಚ್ಚೆತ್ತ ಪಾಲಿಕೆ ಮಂಗಳವಾರದಿಂದ ಪುಂಡ ಶ್ವಾನಗಳನ್ನು ಹಿಡಿಯುವ ಕಾರ್ಯಾಚರಣೆ ಕೈಗೊಂಡಿದೆ.

ಹಳೇ ಕುಂದುವಾಡ, ಬೆಂಚಿಕಟ್ಟೆಯಲ್ಲಿ ಆರೇಳು ಮಕ್ಕಳು, ನಾಲ್ಕೈದು ಜನರ ಮೇಲೆ ನಾಯಿಗಳು ದಾಳಿ ಮಾಡಿ, ಕಚ್ಚಿ ಗಾಯಗೊಳಿದ್ದವು. ನಾಯಿ ಕಡಿತಕ್ಕೊಳಗಾದ ಭಾವನಾ (11), ಆಶಾ (8), ಕರಿಬಸಮ್ಮ (45), ಅನಿಲಕುಮಾರ (36) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಗಿದೆ.

ಹಳೇ ಕುಂದುವಾಡ ಗ್ರಾಮಸ್ಥರ ತೀವ್ರ ಒತ್ತಡದ ಮೇರೆಗೆ ಮಂಗಳವಾರ ಪಾಲಿಕೆ ಅಧಿಕಾರಿಗಳು ಶ್ವಾನ ಹಿಡಿಯುವ ತಂಡದ ಸಮೇತ ಗ್ರಾಮಕ್ಕೆ ಭೇಟಿ ನೀಡಿದರು. ಜನರಿಗೆ ಉಪಟಳ ನೀಡುತ್ತಿದ್ದ 10ಕ್ಕೂ ಹೆಚ್ಚು ಬೀದಿನಾಯಿಗಳನ್ನು ಹಿಡಿದಿದ್ದಾರೆ. ಇವುಗಳಲ್ಲಿ ಹುಚ್ಚು ನಾಯಿಗಳೂ ಸೇರಿವೆ.

ದಾಳಿಕೋರ ನಾಯಿಗಳು:

ದಾರಿಹೋಕರು, ವಾಹನ ಸವಾರರು, ಮಕ್ಕಳು, ಹಿರಿಯರು, ವೃದ್ಧರು, ವಿಕಲಚೇತನರೆನ್ನದೇ ನಾಯಿಗಳು ದಾಳಿಯಿಟ್ಟು ಗಾಯಗೊಳಿಸಿದ್ದವು. ಶಾಲಾ ಮಕ್ಕಳ ಕೈ-ಕಾಲು, ತಲೆಗಳಿಗೆ ಕಚ್ಚಿ, ಓಡಿ ಹೋಗುತ್ತಿದ್ದವು. ಬೀದಿನಾಯಿಗಳನ್ನು ಹಿಡಿಯುವಂತೆ ಗ್ರಾಮಸ್ಥರು ಪಾಲಿಕೆ ಅಧಿಕಾರಿಗಳಿಗೆ ಕರೆ ಮಾಡಿದರೂ, ನಾವು ಹುಚ್ಚು ನಾಯಿಗಳನ್ನು ಹಿಡಿಯುವುದಿಲ್ಲ ಎಂಬ ಉಡಾಫೆ ಮಾತು ಬಂದಿದ್ದರಿಂದ ತೀವ್ರ ಆಕ್ರೋಶವೂ ವ್ಯಕ್ತವಾಗಿತ್ತು. ಇಂತಹ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ನಾಯಿಗಳನ್ನೇನೋ ಹಿಡಿದು, ಅವುಗಳಿಗೆ ರೇಬಿಸ್ ಚುಚ್ಚುಮದ್ದು ನೀಡಿ, ಅವನ್ನು ಹಿಡಿದಿದ್ದಲ್ಲೇ ಬಿಟ್ಟು, ಕೈ ತೊಳೆದುಕೊಂಡರೆ ಅಂತಹ ನಾಯಿಗಳು ಮತ್ತೆ ದಾಳಿ ಮಾಡುವುದಿಲ್ಲವೇ, ಕಚ್ಚುವುದಿಲ್ಲವೇ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.

- - -

-5ಕೆಡಿವಿಜಿ26, 27, 28.ಜೆಪಿಜಿ: ದಾವಣಗೆರೆ ಹೊರವಲಯದ ಹಳೇ ಕುಂದುವಾಡದಲ್ಲಿ ನಾಯಿ ಕಡಿತಕ್ಕೆ ಒಳಗಾದ ಮಕ್ಕಳು. -5ಕೆಡಿವಿಜಿ29, 30.ಜೆಪಿಜಿ: ದಾವಣಗೆರೆ ಹೊರವಲಯದ ಹಳೇ ಕುಂದುವಾಡದಲ್ಲಿ ಬೀದಿನಾಯಿ ಹಿಡಿಯುವ ಕಾರ್ಯಾಚರಣೆ.