ಸರಳ ಜೀವನಕ್ಕೆ ಶರಣರ ಸಂದೇಶ ದಿವ್ಯೌಷಧ: ವಿದ್ಯಾವತಿ ಬಲ್ಲೂರ

| Published : Aug 05 2025, 11:45 PM IST

ಸಾರಾಂಶ

ವಿಶ್ವದಲ್ಲಿ ಅನೇಕ ಕ್ರಾಂತಿಗಳು ಆಗಿವೆ. ಆದರೆ 12ನೇ ಶತಮಾನದಲ್ಲಿ ಆಗಿರುವ ಕ್ರಾಂತಿ ಹೆಣ್ಣು-ಮಣ್ಣು-ಹೊನ್ನಿಗಾಗಿ ಅಲ್ಲ, ಬಸವಣ್ಣನವರು ಉಡಲು, ಉಣ್ಣಲು, ನಡೆ ನುಡಿ ಕಲಿಸಿದ ಶರಣ ಧರ್ಮವಾಗಿದೆ ಎಂದು ಸಾಹಿತಿ ವಿದ್ಯಾವತಿ ಬಲ್ಲೂರ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೀದರ್

ವಿಶ್ವದಲ್ಲಿ ಅನೇಕ ಕ್ರಾಂತಿಗಳು ಆಗಿವೆ. ಆದರೆ 12ನೇ ಶತಮಾನದಲ್ಲಿ ಆಗಿರುವ ಕ್ರಾಂತಿ ಹೆಣ್ಣು-ಮಣ್ಣು-ಹೊನ್ನಿಗಾಗಿ ಅಲ್ಲ, ಬಸವಣ್ಣನವರು ಉಡಲು, ಉಣ್ಣಲು, ನಡೆ ನುಡಿ ಕಲಿಸಿದ ಶರಣ ಧರ್ಮವಾಗಿದೆ ಎಂದು ಸಾಹಿತಿ ವಿದ್ಯಾವತಿ ಬಲ್ಲೂರ ತಿಳಿಸಿದರು.

ಇಲ್ಲಿನ ಮಾಧವನಗರ ಮುಕ್ತಿಧಾಮದಲ್ಲಿ ಕರ್ನಾಟಕ ವಚನ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದಿಂದ ಮಾಸಿಕ ಶರಣ ಚಿಂತನಗೋಷ್ಠಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಅಂತರಂಗ-ಬಹಿರಂಗ ಶುದ್ಧಿಗಾಗಿ ಬಸವಣ್ಣನವರು ಕೊಟ್ಟಂತಹ ಸಪ್ತಸೂತ್ರವಾದ ‘ಕಳ ಬೇಡ ಕೊಲ ಬೇಡ’ ವಚನವು ಜನಪರ ಜೀವಪರ ಮಾನವೀಯ ಮೌಲ್ಯದ ಸಿದ್ಧಾಂತವಾಗಿದೆ ಮತ್ತು ಸಕಲ ಜೀವರಾಶಿಗಳಿಗೆ ಕಲ್ಯಾಣ ಬಯಸುವುದಾಗಿದೆ ಎಂದರು.

ಪ್ರಾಣಿ, ಪಕ್ಷಿಗಳ ಮೇಲೆ ದಯಾಪರತೆ ಅಹಿಂಸಾತ್ಮಕ ಮೌಲ್ಯಗಳನ್ನು ಹೊಂದಿರಬೇಕು. ಒಬ್ಬರ ಮನಸ್ಸು ನೋವಾಗದಂತೆ ಸಂತಸದಿಂದಿದ್ದು, ಎಲ್ಲರ ಮನಸ್ಸು ಹೂವಿನಂತೆ ಅರಳಬೇಕು. ಬಸವತತ್ವದ ಸತ್ಯ ಶುದ್ಧ ಕಾಯಕ ಮತ್ತು ದಾಸೋಹ ಸಿದ್ಧಾಂತವು ಉದಾತ್ತತೆಯ ಬದುಕು ಸಾಗಿಸಿಕೊಂಡು ಮುನ್ನಡೆಯಬೇಕೆಂದು ಕರೆ ನೀಡಿದರು.

ಸಾಹಿತಿಗಳಾದ ಪಾರ್ವತಿ ಸೋನಾರೆ ಸರಳ ಜೀವನಕ್ಕೆ ಶರಣರ ಸಂದೇಶಗಳು ಎನ್ನುವ ವಿಷಯ ಕುರಿತು ಅನುಭಾವ ಮಂಡಿಸಿ ವ್ಯಕ್ತಿಯಲ್ಲಿ ಅಪಾರ ಸಂಪತ್ತು ಆಸ್ತಿ ಇದ್ದರು, ಕಿಂಕರತೆಯಿಂದ ಅಹಂಭಾವಿರಲಾರದೆ ಸದಾ ಅಂಗದ ಮೇಲೆ ಲಿಂಗ ಧರಿಸಿಕೊಂಡು ಶಿವಯೋಗ ಸಾಧನೆ ಆಗಬೇಕು.

ಬಸವಾದಿ ಶರಣರ ಸಂಸ್ಕಾರ ಮತ್ತು ಸಂಸ್ಕೃತಿ ಮಕ್ಕಳ ಮನಸ್ಸಿನಲ್ಲಿ ಬಿತ್ತಬೇಕಾಗುತ್ತದೆ. ಅದೇ ರೀತಿಯಾಗಿ ಮಕ್ಕಳು ತಂದೆ, ತಾಯಿ ಗುರು-ಹಿರಿಯರನ್ನು ಗೌರವದಿಂದ ಕಾಣಬೇಕು. ಶರಣರ ಸಂದೇಶಗಳು ಸಮಾಜದ ಜನರಲ್ಲಿ ಸರಳ ಜೀವನ ನಡೆದಾಗ ಮಾತ್ರ ಬದುಕು ಸುಂದರವಾಗುತ್ತದೆ.

ನಿವೃತ್ತ ಪ್ರಾಚಾರ್ಯ ಬಿ.ವ್ಹಿ.ಪಸರಗೆ ಮಾತನಾಡಿದರು.

ಕರ್ನಾಟಕ ವಚನ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಸುನೀತಾ ದಾಡಗೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಪರಿಷತ್ತು ಮನೆಮನೆಗೆ ಶರಣ ಚಿಂತನಗೋಷ್ಠಿಯನ್ನು ಮುಟ್ಟಿಸು ವಂತಹ ಕಾರ್ಯವು ಮಾಸಿಕವಾಗಿ ನಡೆಸಲು ನಾವು ನಿರ್ಧರಿಸಿದ್ದೇವೆ ಎಂದರು.

ಪರಿಷತ್ತಿನ ಕೋಶಾಧ್ಯಕ್ಷರಾದ ಉಮಾಕಾಂತ ಮೀಸೆ ಪ್ರಾಸ್ತಾವಿಕ ಮಾತನಾಡಿ, ಶಾಲಾಕಾಲೇಜು ಮಟ್ಟದಲ್ಲಿ ಶರಣರ ವಿಚಾರಗಳು ವಿದ್ಯಾರ್ಥಿಗಳಿಗೆ ಮುಟ್ಟಿಸುವುದರಿಂದ ಅವರ ವ್ಯಕ್ತಿಯ ವ್ಯಕ್ತಿತ್ವ ವಿಕಸನವಾಗಲು ಸಾಧ್ಯವಿದೆ ಎಂದರು.

ಪ್ರವಚನಕಾರರಾದ ವಿದ್ಯಾವತಿ ಹಿರೇಮಠ, ಅಶೋಕ ಬೂದಿಹಾಳ, ಪ್ರತಿಭಾ ಮೆಂಚ, ಡಾ.ರಘುಶಂಖ ಭಾತಂಬ್ರಾ ಇದ್ದರು.