ಮುಂಗಾರು ಮಳೆ ಕೈಕೊಟ್ಟ ಪರಿಣಾಮ ದವಸ-ಧಾನ್ಯಗಳ ಬೆಲೆ ಗಗನಕ್ಕೇರಿದೆ. ಇದೀಗ ಬಿಳಿಜೋಳದ ದರ ಭಾರೀ ಏರಿಕೆ ಕಂಡಿದ್ದು ರೈತರು ಸಂತಸಗೊಂಡಿದ್ದರೆ, ಗ್ರಾಹಕರ ಜೇಬು ಸುಡುತ್ತಿದೆ.

ಕ್ವಿಂಟಲ್‌ ₹ 4000 ವರೆಗೆ ಹೆಚ್ಚಳ, ಬೇಡಿಕೆಗೆ ತಕ್ಕಂತೆ ದಾಸ್ತಾನು ಕೊರತೆ

ಎಸ್.ಜಿ. ತೆಗ್ಗಿನಮನಿ

ಕನ್ನಡಪ್ರಭ ವಾರ್ತೆ ನರಗುಂದ

ಮುಂಗಾರು ಮಳೆ ಕೈಕೊಟ್ಟ ಪರಿಣಾಮ ದವಸ-ಧಾನ್ಯಗಳ ಬೆಲೆ ಗಗನಕ್ಕೇರಿದೆ. ಇದೀಗ ಬಿಳಿಜೋಳದ ದರ ಭಾರೀ ಏರಿಕೆ ಕಂಡಿದ್ದು ರೈತರು ಸಂತಸಗೊಂಡಿದ್ದರೆ, ಗ್ರಾಹಕರ ಜೇಬು ಸುಡುತ್ತಿದೆ.

ಕಳೆದ ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ್ದ ಬಿಳಿಜೋಳವನ್ನು ದಾಸ್ತಾನು ಇಟ್ಟುಕೊಂಡಿದ್ದ ರೈತರಿಗೆ ಇದೀಗ ಬಂಪರ್‌ ಬೆಲೆ ಬಂದಿದೆ. ಹೀಗಾಗಿ ಮುಂಗಾರು ಹಂಗಾಮಿನಲ್ಲಿ ಮಳೆ ಇಲ್ಲದೆ ಬೆಳೆ ಕಳೆದುಕೊಂಡಿದ್ದ ರೈತರಿಗೆ ಮಾರುಕಟ್ಟೆಯಲ್ಲಿ ಬಿಳಿಜೋಳಕ್ಕೆ ಉತ್ತಮ ಬೆಲೆ ದೊರೆಯುತ್ತಿರುವುದು ನೆಮ್ಮದಿ ತರಿಸಿದೆ.

₹ 6000 ಬೆಲೆ:

ಪ್ರತಿ ವರ್ಷ ಕ್ವಿಂಟಲ್‌ಗೆ ₹ 2000ರಿಂದ ₹ 2500ರ ವರೆಗೆ ಮಾರಾಟವಾಗುತ್ತಿದ್ದ ಬಿಳಿಜೋಳ ಈ ಬಾರಿ ₹ 6000ರಿಂದ ₹ 6500ರ ವರೆಗೂ ಮಾರಾಟವಾಗುತ್ತಿದೆ. ಹೀಗಾಗಿ ಬಿಳಿಜೋಳಕ್ಕೆ ಬಂಗಾರದ ಬೆಲೆ ಬಂದಿದೆ.

ದರ ಏರಿಕೆ ಯಾಕೆ?

ಈ ವರ್ಷ ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದ ಬಿತ್ತಿದ್ದ ಹೈಬ್ರಿಡ್‌ ಜೋಳವೂ ಇಳುವರಿ ಬಂದಿಲ್ಲ. ಬಿಳಿಜೋಳ ಬೆಳೆಯುವ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಾದ ಗದಗ, ಧಾರವಾಡ, ಕೊಪ್ಪಳ, ಹಾವೇರಿ, ಬಾಗಲಕೋಟೆ, ವಿಜಾಪುರ, ಕಲಬುರ್ಗಿ, ರಾಯಚೂರು ಸೇರಿದಂತೆ ಇನ್ನೂ ಕೆಲವು ಜಿಲ್ಲೆಗಳಲ್ಲಿ ಹಿಂಗಾರು ಹಂಗಾಮಿನಲ್ಲಿ ಮಳೆಯಿಲ್ಲದೆ ಹೆಚ್ಚು ಜೋಳ ಬಿತ್ತನೆಯಾಗಿಲ್ಲ, ಸ್ವಲ್ಪ ಜಿಲ್ಲೆಯಲ್ಲಿ ಅಲ್ಪ ಮಳೆಗೆ ರೈತರು ಬಿತ್ತನೆ ಮಾಡಿದರು ಕೂಡ ಈ ಬೆಳೆ ಬರುವುದು ಕಷ್ಟವಾಗಿದೆ. ಹೀಗಾಗಿ ಕಳೆದ ವರ್ಷ ಬೆಳೆದ ಬಿಳಿಜೋಳವನ್ನೇ ಇದೀಗ ಮಾರುಕಟ್ಟೆಗೆ ರೈತರು ತರುತ್ತಿದ್ದಾರೆ. ಹೀಗಾಗಿ ಗ್ರಾಹಕರು ಮುಂದೇ ಬಿಳಿಜೋಳದ ದರ ಮತ್ತಷ್ಟು ಏರಿಕೆಯಾಗಬಹುದು ಎಂಬ ಆತಂಕದಿಂದ ಖರೀದಿಗೆ ಮುಗಿಬಿದ್ದಿದ್ದಾರೆ. ಹೀಗಾಗಿ ಬೇಡಿಕೆ ಹೆಚ್ಚಿದ ಪರಿಣಾಮ ದರವೂ ಹೆಚ್ಚಳವಾಗಿದೆ ಎನ್ನುತ್ತಾರೆ ವ್ಯಾಪಾರಸ್ಥರು.

ರೊಟ್ಟಿ ದರವು ಹೆಚ್ಚಳ:

ಮಾರುಕಟ್ಟೆಯಲ್ಲಿ ಬಿಳಿಜೋಳದ ದರ ಏರುತ್ತಿದ್ದಂತೆ ಇತ್ತ ಹೊಟೇಲ್‌ಗಳಲ್ಲಿ ರೊಟ್ಟಿ ದರವೂ ಏರಿಕೆಯಾಗಿದೆ. ಒಂದು ರೊಟ್ಟಿಗೆ ಈ ವರೆಗೆ ₹7ರಿಂದ ₹ 8ರ ವರೆಗೆ ಮಾರಾಟ ಮಾಡಿದರೆ ಕಳೆದ ಒಂದು ತಿಂಗಳಿಂದ ₹ 10 ವರೆಗೆ ಹೆಚ್ಚಳವಾಗಿದೆ. ಕ್ವಿಂಟಲ್‌ ಮೂರರಿಂದ ನಾಲ್ಕು ಸಾವಿರ ವರೆಗೆ ದರ ಹೆಚ್ಚಳವಾಗಿದೆ. ಜತೆಗೆ ಕಾರ್ಮಿಕರ ಕೂಲಿ ಸೇರಿದರೆ ಮತ್ತಷ್ಟು ಹೊರೆಯಾಗಲಿದೆ ಹೀಗಾಗಿ ಅನಿವಾರ್ಯವಾಗಿ ಬೆಲೆ ಹೆಚ್ಚಳ ಮಾಡಿದ್ದೇವೆ ಎನ್ನುತ್ತಾರೆ ಹೊಟೇಲ್‌ ಮಾಲೀಕರು.

ಇಷ್ಟು ವರ್ಷ ಕಡಿಮೆ ಬೆಲೆಗೆ ಮಾರಾಟವಾಗುತ್ತಿದ್ದು ಬಿಳಿಜೋಳಕ್ಕೆ ಬಂಪರ್‌ ಬೆಲೆ ಬಂದಿದೆ. ಆದರೆ, ಬೇಡಿಕೆಗೆ ತಕ್ಕಂತೆ ದಾಸ್ತಾನು ಇಲ್ಲ. ನಮ್ಮಲ್ಲಿ ಅಳಿದುಳಿದ ಜೋಳವನ್ನೇ ಮಾರಾಟ ಮಾಡುತ್ತಿದ್ದೇವೆ. ಕ್ವಿಂಟಲ್‌ ₹ 6000ರಿಂದ ₹ 6500 ಸಿಗುತ್ತಿರುವುದು ಸಂತಸ ತಂದಿದೆ ಎನ್ನುತ್ತಾರೆ ರೈತ ಅಣ್ಣಪ್ಪ ಮಾನೆ

ಬಿಳಿಜೋಳಕ್ಕೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದ ಹಿನ್ನೆಲೆಯಲ್ಲಿ ಬೆಲೆ ಏರಿಕೆಯಾಗಿದೆ. ಆದರೆ, ಗ್ರಾಹಕರಿಗೆ ಬೇಕಾಗುವಷ್ಟು ಬಿಳಿಜೋಳ ಮಾರುಕಟ್ಟೆಗೆ ಬರುತ್ತಿಲ್ಲ. ಏಪ್ರಿಲ್‌ ತಿಂಗಳಿಂದ ಈ ವರೆಗೆ ಎಪಿಎಂಸಿಗೆ 3150 ಕ್ವಿಂಟಲ್‌ ಮಾತ್ರ ಆವಕವಾಗಿದೆ ಎನ್ನುತ್ತಾರೆ ನರಗುಂದ ಎಪಿಎಂಸಿ ಕಾರ್ಯದರ್ಶಿ ರಾಘವೇಂದ್ರ ಸಜ್ಜನ.