ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುದಸರಾ ಮಹೋತ್ಸವದ ಅಂಗವಾಗಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) ವತಿಯಿಂದ ಆಯೋಜಿಸಿದ್ದ ಡ್ರೋನ್ ಪ್ರದರ್ಶನ ಎರಡನೇ ದಿನವಾದ ಸೋಮವಾರವೂ ನೋಡುಗರನ್ನು ವಿಸ್ಮಯಗೊಳಿತು.ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವತಿಯಿಂದ ರಾಜ್ಯದಲ್ಲೇ ಹಾಗೂ ಮೈಸೂರು ದಸರೆಯಲ್ಲಿ ಮೊದಲ ಬಾರಿಗೆ ನಡೆದ ಅತಿದೊಡ್ಡ ಡ್ರೋನ್ ಪ್ರದರ್ಶನ ಸಾಂಸ್ಕೃತಿಕ ನಗರಿಯ ಜನರಿಗೆ ಮರೆಯಲಾಗದ ಅನುಭವ ನೀಡುವಲ್ಲಿ ಯಶಸ್ವಿಯಾಯಿತು.ನಗರದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ನಡೆದ ಡ್ರೋನ್ ಶೋನಲ್ಲಿ 1500 ಡ್ರೋನ್ ಗಳು ಆಕಾಶದಲ್ಲಿ ಚಿತ್ತಾರ ಮೂಡಿಸಿದವು. ರಾತ್ರಿ 7:45ಕ್ಕೆ ಆರಂಭಗೊಂಡ ಡ್ರೋನ್ ಪ್ರದರ್ಶನದಲ್ಲಿ ರಾಷ್ಟ್ರ ಧ್ವಜ, ಚಂದ್ರಯಾನ, ವಿಶ್ವಭೂಪಟ, ಸೈನಿಕ, ಕರ್ನಾಟಕ ಭೂಪಟ, ಅಂಬಾರಿ ಆನೆ, ಸುವರ್ಣ ಕರ್ನಾಟಕ ಸಂಭ್ರಮ, ಅರಳಿಮರ, ತಿಮಿಂಗಿಲ, ಚಾಮುಂಡೇಶ್ವರಿ ಸೇರಿದಂತೆ 15 ಹೆಚ್ಚು ವಿನ್ಯಾಸಗಳನ್ನು ರಚಿಸಲಾಯಿತು. ಸೋಮವಾರವೂ ಬನ್ನಿಮಂಟಪದ ಪಂಜಿನ ಕವಾಯತು ಮೈದಾನಕ್ಕೆ ಸಹಸ್ರಾರು ಜನ ಲಗ್ಗೆಯಿಟ್ಟಿದ್ದರು. ವಿಜಯ್ ಪ್ರಕಾಶ್ ಗಾಯನಎರಡನೇ ದಿನದ ಡ್ರೋನ್ ಪ್ರದರ್ಶನದಲ್ಲಿ ನಡೆದ ಸಂಗೀತ ರಸಸಂಜೆ ಕಾರ್ಯಕ್ರಮವು ನೆರೆದಿದ್ದ ಪ್ರೇಕ್ಷಕರ ಮನ ತಣಿಸಿತು. ಖ್ಯಾತ ಹಿನ್ನೆಲೆ ಗಾಯನ ವಿಜಯ್ ಪ್ರಕಾಶ್ ಅವರು ತಮ್ಮ ಕಂಚಿನ ಕಂಠದಿಂದ ಪ್ರೇಕ್ಷಕರಿಗೆ ಸಂಗೀತದ ಸುಧೆ ಹರಿಸಿದರು.ತಮ್ಮ ಗಾಯನದ ಹಿಟ್ ಗೀತೆಗಳಾದ ಖಾಲಿ ಕ್ವಾಟ್ರು ಬಾಟ್ಲಿ ಅಂಗೆ ಲೈಫು, ಕುಲದಲ್ಲಿ ಕೀಳಾವುದೋ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಸೇರಿದಂತೆ ಹಲವು ಗೀತೆಗಳನ್ನು ಹಾಡಿ ರಂಜಿಸಿದರು. ವಿಜಯ್ ಪ್ರಕಾಶ್ ಅವರು ದಿ. ಪುನೀತ್ ರಾಜಕುಮಾರ್ ಅವರ ಗೊಂಬೆ ಹೇಳುತೈತೆ ಹಾಡಿಗೆ ಇಡೀ ಮೈದಾನದಲ್ಲಿ ನೆರೆದಿದ್ದ ಜನಸ್ತೋಮವು ತಲೆದೂಗಿ, ಧ್ವನಿಗೂಡಿಸಿದರು.ಈ ಕಾರ್ಯಕ್ರಮದಲ್ ಶಾಸಕ ಡಿ. ರವಿಶಂಕರ್, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕಿ ಜಿ. ಶೀಲಾ, ತಾಂತ್ರಿಕ ವಿಭಾಗದ ನಿರ್ದೇಶಕ ಕೆ.ಎಂ. ಮುನಿಗೋಪಾಲ್ ರಾಜು ಮೊದಲಾದವರು ಇದ್ದರು.