7ರಿಂದ ಬಂಟ್ಸ್‌ ಹಾಸ್ಟೆಲ್‌ ಗಣೇಶೋತ್ಸವ ಸಂಭ್ರಮ

| Published : Sep 06 2024, 01:01 AM IST

ಸಾರಾಂಶ

ಓಂಕಾರ ನಗರದಿಂದ ಬಂಟ್ಸ್‌ ಹಾಸ್ಟೆಲ್‌, ಪಿ.ಪಿಎಸ್‌ ವೃತ್ತ, ನ್ಯೂಚಿತ್ರಾ ಟಾಕಿಸ್‌, ರಥಬೀದಿ, ವೆಂಕಟರಮಣ ದೇವಸ್ಥಾನ ರಸ್ತೆಯಲ್ಲಿ ಸಾಗಿ ಶ್ರೀ ಮಹಾಮ್ಮಾಯಿ ದೇವಸ್ಥಾನದ ಕೆರೆಯಲ್ಲಿ ಗಣಪತಿ ಮೂರ್ತಿಯ ವಿಸರ್ಜನೆ ನಡೆಯಲಿದೆ. ಶೋಭಾಯಾತ್ರೆಯಲ್ಲಿ ಜಿಲ್ಲೆಯ ವಿವಿಧ ಭಜನಾ ತಂಡಗಳು ಭಾಗವಹಿಸಲಿವೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಬಂಟರ ಯಾನೆ ನಾಡವರ ಮಾತೃ ಸಂಘ, ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಬಂಟರ ಸಂಘಗಳು, ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ 18ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ, ತೆನೆಹಬ್ಬ, ಅಷ್ಟೋತ್ತರ ನಾರಿಕೇಳ ಮಹಾಗಣಯಾಗ ಸೆ.7ರಿಂದ 9ರವರೆಗೆ ಮಂಗಳೂರಿನ ಬಂಟ್ಸ್‌ಹಾಸ್ಟೆಲ್‌ನ ಓಂಕಾರ ನಗರದಲ್ಲಿ ನಡೆಯಲಿದೆ ಎಂದು ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನದ ಟ್ರಿಸ್ಟಿ ಡಾ. ಆಶಾಜ್ಯೋತಿ ರೈ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.6ರಂದು ಸಂಜೆ 5 ಗಂಟೆಗೆ ಶರವು ದೇವಸ್ಥಾನ ಬಳಿಯ ರಾಧಾಕೃಷ್ಣ ದೇವಸ್ಥಾನದಿಂದ ಶ್ರೀ ಸಿದ್ಧಿವಿನಾಯಕ ದೇವರ ವಿಗ್ರಹವನ್ನು ಓಂಕಾರ ನಗರಕ್ಕೆ ತರಲಾಗುವುದು. 3 ದಿನಗಳ ಕಾಲ ವೈದಿಕ ಕಾರ್ಯಕ್ರಮಗಳೊಂದಿಗೆ ವಿವಿಧ ಪೂಜೆಗಳು ನಡೆಯಲಿವೆ ಗಣೇಶೋತ್ಸವ ವೇದಿಕೆಯಲ್ಲಿ ವಿವಿಧ ಭಜನಾ ತಂಡಗಳಿಂದ ಭಜನಾ ಸೇವೆ ನಡೆಯಲಿದೆ ಎಂದು ಹೇಳಿದರು.

ಸೆ.7ರಂದು ಬೆಳಗ್ಗೆ 8 ಗಂಟೆಗೆ ಧ್ವಜಾರೋಹಣ, ಗಣೇಶೋತ್ಸವ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ತೆನೆ ವಿತರಣೆ ಕಾರ್ಯಕ್ರಮ ನಡೆಯಲಿದೆ. ಸಂಜೆ 5ರಿಂದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ನಡೆಯಲಿದೆ. 8ರಿಂದ ಆಳ್ವಾಸ್‌ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸೆ.8ರಂದು ಸಂಜೆ 5ರಿಂದ ಧಾರ್ಮಿಕ ಸಭೆ ನಡೆಯಲಿದೆ. ಸಮಾಜದ ವಿವಿಧ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದ ಸಾಧಕರನ್ನು ಸನ್ಮಾನಿಸಲಾಗುವುದು. 8ರಿಂದ ಉಜಿರೆ ಎಸ್‌.ಡಿ.ಎಂ ಕಾಲೇಜಿನ ವಿದ್ಯಾರ್ಥಿಗಳಿಂದ ಕಲಾವೈಭವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ವಿವರ ನೀಡಿದರು.

ಸೆ.9ರಂದು ಬೆಳಗ್ಗೆ ಗಂಟೆ 8ರಿಂದ ಲೋಕ ಕಲ್ಯಾಣಾರ್ಥವಾಗಿ ಅಷ್ಟೋತ್ತರ ಸಹಸ್ರ ನಾರಿಕೇಳ ಮಹಾಗಣಯಾಗ ಆರಂಭಗೊಂಡು, 11.30ಕ್ಕೆ ಪೂರ್ಣಾಹುತಿಯಾಗಲಿದೆ. ಮಧ್ಯಾಹ್ನ 3.30ಕ್ಕೆ ಗಣಪತಿ ವಿಜರ್ಸನಾ ಶೋಭಾಯಾತ್ರೆಗೆ ಚಾಲನೆ ದೊರೆಯಲಿದೆ. ಓಂಕಾರ ನಗರದಿಂದ ಬಂಟ್ಸ್‌ ಹಾಸ್ಟೆಲ್‌, ಪಿ.ಪಿಎಸ್‌ ವೃತ್ತ, ನ್ಯೂಚಿತ್ರಾ ಟಾಕಿಸ್‌, ರಥಬೀದಿ, ವೆಂಕಟರಮಣ ದೇವಸ್ಥಾನ ರಸ್ತೆಯಲ್ಲಿ ಸಾಗಿ ಶ್ರೀ ಮಹಾಮ್ಮಾಯಿ ದೇವಸ್ಥಾನದ ಕೆರೆಯಲ್ಲಿ ಗಣಪತಿ ಮೂರ್ತಿಯ ವಿಸರ್ಜನೆ ನಡೆಯಲಿದೆ. ಶೋಭಾಯಾತ್ರೆಯಲ್ಲಿ ಜಿಲ್ಲೆಯ ವಿವಿಧ ಭಜನಾ ತಂಡಗಳು ಭಾಗವಹಿಸಲಿವೆ ಎಂದರು.

ಗಣೇಶೋತ್ಸವ ಸಮಿತಿ ಸಂಚಾಲಕ ದಿವಾಕರ ಸಾಮಾನಿ ಚೇಳಾೖರ್‌ ಗುತ್ತು, ಬಂಟರ ಯಾನೆ ನಾಡವರ ಮಾತೃಸಂಘ ಮಂಗಳೂರು ತಾಲೂಕು ಸಮಿತಿ ಸಂಚಾಲ ವಸಂತ ಶೆಟ್ಟಿ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಸಂಚಾಲಕ ಮನೀಶ್‌ ರೈ, ಅಶ್ವಥಾಮ ಹೆಗ್ಡೆ, ಸಂತೋಷ್‌ ಕುಮಾರ್‌ ಶೆಡ್ಡೆ ಇದ್ದರು.