ಪ್ರತಿಯೊಂದು ವಸ್ತುವಿನ ಬೆಲೆ ನಿರ್ಧಾರದಲ್ಲಿ ಸಾರಿಗೆ ವೆಚ್ಚ ಪ್ರಮುಖ ಪಾತ್ರ ವಹಿಸುತ್ತದೆ. ಸಾರಿಗೆ ವೆಚ್ಚ ಹೆಚ್ಚಾದರೆ ಸಹಜವಾಗಿಯೇ ದಿನಬಳಕೆಯ ವಸ್ತುಗಳ ಬೆಲೆಯೂ ಹೆಚ್ಚಾಗುತ್ತದೆ. ಡೀಸೆಲ್ ಬೆಲೆ ಏರಿಕೆಯ ಪರಿಣಾಮ ಹಾಲಿನ ದರ ಸೇರಿದಂತೆ ಇತರ ವಸ್ತುಗಳ ಬೆಲೆಗಳ ಮೇಲೂ ಬೀಳುತ್ತದೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹೇಳಿದರು.

ಕುಷ್ಟಗಿ: ಕೇಂದ್ರ ಸರ್ಕಾರದ ಡೀಸೆಲ್, ಪೆಟ್ರೋಲ್ ಬೆಲೆ ಹಾಗೂ ಜಿಎಸ್‌ಟಿ ಏರಿಕೆಯಿಂದ ಸಾರಿಗೆ ವೆಚ್ಚ ಹೆಚ್ಚಾಗಿ ಜನಸಾಮಾನ್ಯರ ಮೇಲೆ ಬೆಲೆ ಏರಿಕೆಯ ಹೊರೆ ಬೀಳುತ್ತಿದೆ. ಈ ಹಿಂದೆ 15 ದಿನಕ್ಕೊಮ್ಮೆ ಇಂಧನ ಬೆಲೆ ಏರಿಕೆಯಾಗುತ್ತಿದ್ದಾಗ ಮೌನವಾಗಿದ್ದ ಬಿಜೆಪಿ ನಾಯಕರು ಈಗ ರಾಜ್ಯ ಸರ್ಕಾರವನ್ನು ಟೀಕಿಸುತ್ತಿರುವುದೇಕೆ? ಕೇಂದ್ರ ಸರ್ಕಾರವನ್ನು ಪ್ರಶ್ನಿಸುವ ನೈತಿಕತೆ ಬಿಜೆಪಿಗಿದೆಯೇ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಪ್ರಶ್ನಿಸಿದರು.

ಕುಷ್ಟಗಿಯಲ್ಲಿ ಪ್ರಜಾಸೇವಾ ಆಂದೋಲನದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಕ್ತಿ ಯೋಜನೆಯಡಿ ರಾಜ್ಯದ ಮೂರು-ನಾಲ್ಕು ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿರುವುದನ್ನು ವಿಫಲ ಯೋಜನೆ ಎಂದು ಟೀಕಿಸುವ ಬಿಜೆಪಿಯವರೇ ರಾಜಕೀಯವಾಗಿ ವಿಫಲರಾಗಿದ್ದಾರೆ. ರಾಜ್ಯದ ಪ್ರತಿಯೊಬ್ಬ ಮಹಿಳೆಯೂ ಉಚಿತವಾಗಿ ಓಡಾಡುವುದನ್ನು ಫೇಲ್ಯೂರ್ ಎನ್ನುವುದಾದರೆ ಇದಕ್ಕಿಂತ ವಿಫಲ ಪ್ರತಿಪಕ್ಷ ಮತ್ತೊಂದಿರಲು ಸಾಧ್ಯವೇ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

ಡೀಸೆಲ್ ಕೊರತೆ ಕುರಿತು ಪ್ರತಿಕ್ರಿಯಿಸಿದ ಸಚಿವರು, ಯಂತ್ರೋಪಕರಣಗಳಲ್ಲಿನ ತೊಂದರೆಯಿಂದ ಈ ಸಮಸ್ಯೆ ಉಂಟಾಗಿದ್ದು, ಅದಕ್ಕೆ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡಲಾಗುತ್ತಿದೆ. ಇಂತಹ ಸಣ್ಣಪುಟ್ಟ ತಾಂತ್ರಿಕ ಸಮಸ್ಯೆಗಳು ಎದುರಾಗುವುದು ಸಹಜ ಎಂದರು.

ಬೆಲೆ ಏರಿಕೆಗೆ ಕೇಂದ್ರವೇ ಹೊಣೆ: ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಚಿವ ತಂಗಡಗಿ, ಹಿಂದೆ 15 ದಿನಕ್ಕೊಮ್ಮೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತಿದ್ದಾಗ ಬಿಜೆಪಿ ನಾಯಕರು ಕಣ್ಣು ಮುಚ್ಚಿಕೊಂಡು ಕುಳಿತಿದ್ದರೇ? ಅಥವಾ ಮನೆಯಲ್ಲಿ ಮಲಗಿದ್ದರೇ? ಆಗ ಜನಸಾಮಾನ್ಯರ ಹೊರೆ ಕಾಣಿಸಲಿಲ್ಲವೇ? ಯುಪಿಎ ಸರ್ಕಾರದ ಅವಧಿಗೆ ಹೋಲಿಸಿದರೆ ಇಂದಿನ ಡೀಸೆಲ್, ಪೆಟ್ರೋಲ್ ಬೆಲೆ ಎರಡು ಪಟ್ಟು ಹೆಚ್ಚಾಗಿದೆ. ಅಡುಗೆ ಅನಿಲ ಸಿಲಿಂಡರ್ ಬೆಲೆಯೂ ಎಷ್ಟಾಗಿದೆ ಎಂಬುದನ್ನು ಬಿಜೆಪಿ ನಾಯಕರು ಗಮನಿಸಬೇಕು ಎಂದು ಕುಟುಕಿದರು.

ಪ್ರತಿಯೊಂದು ವಸ್ತುವಿನ ಬೆಲೆ ನಿರ್ಧಾರದಲ್ಲಿ ಸಾರಿಗೆ ವೆಚ್ಚ ಪ್ರಮುಖ ಪಾತ್ರ ವಹಿಸುತ್ತದೆ. ಸಾರಿಗೆ ವೆಚ್ಚ ಹೆಚ್ಚಾದರೆ ಸಹಜವಾಗಿಯೇ ದಿನಬಳಕೆಯ ವಸ್ತುಗಳ ಬೆಲೆಯೂ ಹೆಚ್ಚಾಗುತ್ತದೆ. ಡೀಸೆಲ್ ಬೆಲೆ ಏರಿಕೆಯ ಪರಿಣಾಮ ಹಾಲಿನ ದರ ಸೇರಿದಂತೆ ಇತರ ವಸ್ತುಗಳ ಬೆಲೆಗಳ ಮೇಲೂ ಬೀಳುತ್ತದೆ. ಇದನ್ನು ಅರ್ಥಮಾಡಿಕೊಳ್ಳದೆ ರಾಜ್ಯ ಸರ್ಕಾರವನ್ನು ಟೀಕಿಸುವುದು ಸರಿಯಲ್ಲ ಎಂದರು.

ಜಿಎಸ್‌ಟಿ ಇಳಿಸಿ, ಇಂಧನ ಬೆಲೆ ಕಡಿಮೆ ಮಾಡಿ: ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಹಾಗೂ ಜಿಎಸ್‌ಟಿ ದರಗಳನ್ನು ಕಡಿಮೆ ಮಾಡಿದರೆ ಬೆಲೆ ಏರಿಕೆಯ ಒತ್ತಡ ತಾನಾಗಿಯೇ ತಗ್ಗಲಿದೆ. ಕೇಂದ್ರ ಸರ್ಕಾರವೇ ಬೆಲೆ ಏರಿಸಿ, ಅದರ ಪರಿಣಾಮವನ್ನು ರಾಜ್ಯ ಸರ್ಕಾರದ ಮೇಲೆ ಹಾಕುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಬಿಜೆಪಿಯವರಿಗೆ ನಿಜವಾಗಿಯೂ ಜನರ ಬಗ್ಗೆ ಕಾಳಜಿ ಮತ್ತು ನೈತಿಕತೆ ಇದ್ದರೆ ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಪೆಟ್ರೋಲ್, ಡೀಸೆಲ್ ಬೆಲೆ ಹಾಗೂ ಜಿಎಸ್‌ಟಿ ದರ ಕಡಿಮೆ ಮಾಡುವಂತೆ ಒತ್ತಾಯಿಸಲಿ. ಜನಸಾಮಾನ್ಯರ ಮೇಲಿನ ಹೊರೆ ಇಳಿಸಲು ಕೇಂದ್ರ ಸರ್ಕಾರ ಮೊದಲು ಕ್ರಮ ಕೈಗೊಳ್ಳಲಿ ಎಂದು ಸವಾಲು ಹಾಕಿದರು.

ರೈತರಿಗೆ ತಲಾ ₹5 ಸಾವಿರ ಪರಿಹಾರ: ರೈತರ ಪರಿಹಾರದ ಕುರಿತು ಮಾತನಾಡಿದ ಸಚಿವರು, ರಾಜ್ಯ ಸರ್ಕಾರ ರೈತರಿಗೆ ಒಟ್ಟು ₹5,000 ಪರಿಹಾರ ನೀಡಲು ನಿರ್ಧರಿಸಿದೆ. ಈಗಾಗಲೇ ಪ್ರತಿ ರೈತರಿಗೆ ₹2,500 ಡಿಬಿಟಿ ಮೂಲಕ ಪಾವತಿಸಲಾಗಿದೆ. ಉಳಿದ ₹2,500 ನೀಡುವ ಬದ್ಧತೆಯೂ ಸರ್ಕಾರಕ್ಕಿದೆ ಎಂದರು.

ಕೇಂದ್ರ ಸರ್ಕಾರವೂ ರೈತರಿಗೆ ಎಷ್ಟು ಪರಿಹಾರ ನೀಡಲಿದೆ ಎಂಬುದನ್ನು ಸ್ಪಷ್ಟವಾಗಿ ಘೋಷಿಸಲಿ. ರಾಜ್ಯ ಸರ್ಕಾರ ಈಗಾಗಲೇ ಕೇಂದ್ರಕ್ಕೆ ಮನವಿ ಸಲ್ಲಿಸಿದೆ. ನಾವು ರೈತರ ಪರವಾಗಿದ್ದೇವೆ, ರೈತರೊಂದಿಗಿದ್ದೇವೆ. ಕೇಂದ್ರ ಸರ್ಕಾರವೂ ತನ್ನ ಪಾಲಿನ ನೆರವನ್ನು ಘೋಷಿಸಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ಎಸ್‌ಐಆರ್‌ ಕುರಿತು ಪ್ರತಿಕ್ರಿಯಿಸಿದ ಅವರು, ಎಸ್‌ಐಆರ್‌ ಪ್ರಕ್ರಿಯೆಗೆ ನಮ್ಮ ವಿರೋಧವನ್ನು ಇಂದಿಗೂ ಮುಂದುವರಿಸಿದ್ದೇವೆ ಎಂದರು.