ಮನೆ ಕೆಲಸಕ್ಕೆಂದು ಬಂದು ವೈದ್ಯರ ಕುಟುಂಬದ ವಿಶ್ವಾಸ ಗಳಿಸಿ, ಮನೆಯಲ್ಲಿದ್ದ 800 ಗ್ರಾಂ ಗೂ ಅಧಿಕ ಚಿನ್ನಾಭರಣ ಹಾಗೂ ವಜ್ರದ ಆಭರಣಗಳನ್ನು ಕದ್ದಿದ್ದ ಮಹಿಳೆ ಮನೆಯವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ ಕೃತ್ಯ ಬಯಲಾಗಿರುವ ಘಟನೆ ತುಮಕೂರು ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ತುಮಕೂರು
ಮನೆ ಕೆಲಸಕ್ಕೆಂದು ಬಂದು ವೈದ್ಯರ ಕುಟುಂಬದ ವಿಶ್ವಾಸ ಗಳಿಸಿ, ಮನೆಯಲ್ಲಿದ್ದ 800 ಗ್ರಾಂ ಗೂ ಅಧಿಕ ಚಿನ್ನಾಭರಣ ಹಾಗೂ ವಜ್ರದ ಆಭರಣಗಳನ್ನು ಕದ್ದಿದ್ದ ಮಹಿಳೆ ಮನೆಯವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ ಕೃತ್ಯ ಬಯಲಾಗಿರುವ ಘಟನೆ ತುಮಕೂರು ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ನೇಹಾ (24) ಮತ್ತು ಸೌಮ್ಯ ಎಂಬ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಸಮಸ್ಯೆ ಹೇಳಿಕೊಂಡು ಬಂದಿದ್ದವಳಿಗೆ ಆಶ್ರಯ ನೀಡಿದ್ದೇ ಮುಳುವಾಗಿದೆ. ಜಯನಗರ ವಾಸಿಯಾದ ವೈದ್ಯ ದಂಪತಿ ಯಶವಂತ್ ಮತ್ತು ನಳಿನಿ ಅವರ ಮನೆಯಲ್ಲಿ ಸ್ನೇಹಾ ಎಂಬಾಕೆ ಕಳ್ಳತನ ಮಾಡಿದ್ದಾಳೆ. ಸುಮಾರು ಎರಡು ವರ್ಷಗಳ ಹಿಂದೆ ವೈಯಕ್ತಿಕ ಸಮಸ್ಯೆಯಿದೆ ಎಂದು ಬಂದಿದ್ದ ಸ್ನೇಹಾಗೆ ವೈದ್ಯ ದಂಪತಿ ಆಶ್ರಯ ನೀಡಿದ್ದರು. ಆಗ ಗರ್ಭಿಣಿಯಾಗಿದ್ದ ಆಕೆಗೆ ಹೆರಿಗೆ ಮಾಡಿಸಿ, ಮಗುವಿನೊಂದಿಗೆ ತಮ್ಮ ಮನೆಯಲ್ಲೇ ಉಳಿಯಲು ಅವಕಾಶ ಕಲ್ಪಿಸಿದ್ದರು. ಸ್ನೇಹಾಳೊಂದಿಗೆ ಬಂದಿದ್ದ ಆಕೆ ಅತ್ತೆ, ದೊಡ್ಡಮ್ಮ ಮತ್ತು ಪತಿ ರಾಕೇಶ್ ಗೂ ವೈದ್ಯ ದಂಪತಿ ಆಶ್ರಯ ನೀಡಿದ್ದರು. ಆದರೆ ವೈದ್ಯ ದಂಪತಿ ಮನೆ ವಿವಿಧ ಲಾಕರ್ ಗಳ ಕೀಗಳನ್ನು ಕದ್ದು ಅವುಗಳಲ್ಲಿದ್ದ ಚಿನ್ನಾಭರಣ ಕದಿಯುತ್ತಿದ್ದಳು. 6 ತಿಂಗಳಲ್ಲಿ 800 ಗ್ರಾಂ ಚಿನ್ನ ಮತ್ತು ವಜ್ರದ ಆಭರಣ ಕದ್ದಿದ್ದಾಳೆ ಎಂದು ಆರೋಪಿಸಲಾಗಿದೆ. ಕದ್ದ ಚಿನ್ನಾಭರಣ ಮಾರಾಟ ಮಾಡಿ ಕಾರು, ಬೈಕ್, ಆಟೋ ಸೇರಿದಂತೆ ಹಲವು ವಸ್ತುಗಳನ್ನು ಖರೀದಿಸಿದ್ದ ಆರೋಪಿತೆ, ಕಳ್ಳತನ ಬಯಲಾಗುವ ಭೀತಿಯಿಂದ ವೈದ್ಯರ ಕುಟುಂಬದ ಇಬ್ಬರನ್ನು ಕೊಲೆ ಮಾಡಿ, ಅದನ್ನು ಕಳ್ಳರ ಕೃತ್ಯ ಎಂದು ಬಿಂಬಿಸಲು ಸಂಚು ರೂಪಿಸಿದ್ದಳು ಎಂಬ ಆಘಾತಕಾರಿ ವಿಚಾರವೂ ಬೆಳಕಿಗೆ ಬಂದಿದೆ. ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆ ವೈದ್ಯ ದಂಪತಿ ಲಾಕರ್ ತೆರೆಯಲು ಮುಂದಾದಾಗ ಕೀ ಗಳು ಸಿಗಲಿಲ್ಲ ಎಂದು ಕೀ ತಯಾರಿಸುವ ವ್ಯಕ್ತಿಯನ್ನು ಕರೆಸಿ ಲಾಕರ್ ತೆರೆಸಿದ್ದಾರೆ. ಈವೇಳೆ ಕಳ್ಳತನ ಪ್ರಕರಣ ಬೆಳಕಿಗೆ ಬಂದಿತ್ತು. ಈ ಸಂಬಂಧ ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ತನಿಖೆ ಆರಂಭಿಸಿದಾಗ ಸ್ನೇಹಾಳ ಕೃತ್ಯ ಬಯಲಾಗಿದೆ. ಕದ್ದ ಆಭರಣಗಳನ್ನು ಸೌಮ್ಯ ಎಂಬಾಕೆ ಮೂಲಕ ಮಾರಾಟ ಮಾಡಲಾಗಿತ್ತು. ವೈದ್ಯ ದಂಪತಿ ಹೇಳಿರುವ ಪ್ರಕಾರ ಕಳ್ಳತನ ವಿಚಾರ ಮುಂದೊಂದು ದಿನ ಬಯಲಾಗಬಹುದು ಎಂಬ ಆತಂಕದಲ್ಲಿ ಸ್ನೇಹ ವೈದ್ಯರ ತಾಯಿ ಮತ್ತು ಮಗುವಿಗೆ ವಿಷವಿಟ್ಟು ಕೊಲೆ ಮಾಡಿ ಮನೆಗೆ ಬಂದ ಅಪರಿಚಿತ ಕಳ್ಳರೇ ಈ ಕೃತ್ಯ ಎಸಗಿದ್ದಾರೆ ಎಂದು ಬಿಂಬಿಸುವ ಯೋಜನೆ ರೂಪಿಸಿದ್ದಳು. ಆದರೆ ಪೊಲೀಸರ ಕಾರ್ಯಾಚರಣೆಯಿಂದಾಗಿ ಭಯಾನಕ ಕೃತ್ಯವೊಂದು ಕೂದಲೆಳೆಯಲ್ಲಿ ತಪ್ಪಿದೆ. ಕಳವು ಮಾಡಿದ ಹಣದಲ್ಲಿ ಖರೀದಿಸಿದ್ದ ಕಾರು, ಎರಡು ಬೈಕ್, ಒಂದು ಆಟೋ, ಹಾಗೂ 220 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ತುಮಕೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.