ಆಕ್ರಂದನ ನಡುವೆ ತಾಯಿ, ಮೂವರು ಮಕ್ಕಳ ಅಂತ್ಯಕ್ರಿಯೆ

| Published : Nov 14 2023, 01:16 AM IST / Updated: Nov 14 2023, 01:17 AM IST

ಸಾರಾಂಶ

ವಿದೇಶದಲ್ಲಿದ್ದ ಮನೆಯ ಯಜಮಾನ ನೂರ್ ಮುಹಮ್ಮದ್ ಸೋಮವಾರ ಬೆಳಗ್ಗೆ ಮನೆಗೆ ಆಗಮಿಸಿದ್ದರು. ಬೆಂಗಳೂರಿನಲ್ಲಿದ್ದ ಅವರ ಹಿರಿಯ ಮಗ ಭಾನುವಾರ ರಾತ್ರಿಯೇ ಆಗಮಿಸಿದ್ದರು. ತೀವ್ರ ಅಘಾತಕ್ಕೊಳಗಾದ ತಂದೆ, ಮಗ ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತು.

ಕನ್ನಡಪ್ರಭ ವಾರ್ತೆ ಉಡುಪಿ

ಜಿಲ್ಲೆಯನ್ನು ಬೆಚ್ಚಿ ಬೀಳಿಸಿದ, ಇಲ್ಲಿನ ನೇಜಾರು ಗ್ರಾಮದ ತೃಪ್ತಿ ಲೇಔಟ್‌ನಲ್ಲಿ ಭಾನುವಾರ ಅಮಾನುಷವಾಗಿ ಕೊಲೆಯಾದ ಒಂದೇ ಕುಟುಂಬದ ತಾಯಿ ಮತ್ತು ಮೂವರು ಮಕ್ಕಳ ಅಂತ್ಯಕ್ರಿಯೆ ಸೋಮವಾರ ನಡೆಯಿತು.

ವಿದೇಶದಲ್ಲಿದ್ದ ಮನೆಯ ಯಜಮಾನ ನೂರ್ ಮುಹಮ್ಮದ್ ಸೋಮವಾರ ಬೆಳಗ್ಗೆ ಮನೆಗೆ ಆಗಮಿಸಿದ್ದರು. ಬೆಂಗಳೂರಿನಲ್ಲಿದ್ದ ಅವರ ಹಿರಿಯ ಮಗ ಭಾನುವಾರ ರಾತ್ರಿಯೇ ಆಗಮಿಸಿದ್ದರು. ತೀವ್ರ ಅಘಾತಕ್ಕೊಳಗಾದ ತಂದೆ, ಮಗ ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತು.

ಎಲ್ಲ ನಾಲ್ಕು ಮೃತದೇಹಗಳನ್ನು ಭಾನುವಾರವೇ ಮನೆಯಿಂದ ಮಣಿಪಾಲ ಕೆಎಂಸಿಯ ಶವಾಗಾರಕ್ಕೆ ಸ್ತಳಾಂತರಿಸಲಾಗಿತ್ತು. ಅಲ್ಲಿ ಸೋಮವಾರ ಬೆಳಗಿನ ಜಾವ 4 ಗಂಟೆಗೆ ಸುಮಾರಿಗೆ ಮರಣೋತ್ತರ ಪರೀಕ್ಷೆಗಳನ್ನು ಪೂರ್ಣಗೊಳಿಸಲಾಯಿತು. ಬಳಿಕ ಕುಟುಂಬಸ್ಥರಿಗೆ ಮೃತದೇಹಗಳನ್ನು ಹಸ್ತಾಂತರಿಸಲಾಯಿತು.

ನಂತರ ತಾಯಿ ಹಸೀನಾ ಮತ್ತು ಹಿರಿಯ ಮಗಳು ಅಫ್ನಾನ್ ಅವರ ಮೃತದೇಹಗಳನ್ನು ಉಡುಪಿ ಜಾಮಿಯ ಮಸೀದಿಗೆ, ಕಿರಿಯ ಮಗಳು ಅಝ್ನಾನ್ ಮೃತದೇಹವನ್ನು ಇಂದ್ರಾಳಿ ಮಸೀದಿಗೆ ಹಾಗೂ ಕಿರಿಯ ಮಗ ಅಸೀಂ ಮೃತದೇಹವನ್ನು ಉಡುಪಿ ಖಬರಸ್ತಾನಕ್ಕೆ ತಂದು ಅಂತಿಮ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು.

ನಂತರ ನಾಲ್ಕು ಪ್ರಾರ್ಥಿವ ಶರೀರಗಳನ್ನು ನೇಜಾರು ತೃಪ್ತಿ ಲೇಔಟ್‌ನಲ್ಲಿರುವ ಮನೆಗೆ ಕೊಂಡೊಯ್ಯಲಾಯಿತು. ಅಲ್ಲಿ ಸಾರ್ವಜನಿಕರ ದರ್ಶಕ್ಕೆ ಅವಕಾಶ ಮಾಡಿಕೊಡಲಾಯಿತು. ಸಂಜೆ ಕೋಡಿ ಬೇಂಗ್ರೆಯಲ್ಲಿರುವ ಮಸೀದಿಯಲ್ಲಿ ದಫನ ನಡೆಸಲಾಯಿತು.

ಈ ಎಲ್ಲ ಕಾರ್ಯಕ್ರಮಗಳಲ್ಲಿ ನೂರಾರು ಮುಸ್ಲಿಂ ಬಂಧುಗಳು ಭಾಗವಹಿಸಿದ್ದು, ಎಲ್ಲರ ಮುಖದಲ್ಲಿಯೂ ದುಃಖ ಎದ್ದುಕಾಣುತ್ತಿತ್ತು. ಮೃತದೇಹಗಳನ್ನು ಸಾಗಿಸುವಲ್ಲಿ ಯುವಕರು ಸ್ವಯಂ ಪ್ರೇರಣೆಯಿಂದ ಹೆಗಲು ನೀಡಿದರು. ಎಲ್ಲ ಕಡೆಗಳಲ್ಲಿ ಪೊಲೀಸ್ ಉಸ್ತುವಾರಿ ನಡೆಸಲಾಗಿತ್ತು.

ಆರೋಪಿಯ ಸುಳಿವಿಲ್ಲ: ಕೊಲೆಯ ಆರೋಪಿಯ ಬಗ್ಗೆ ಪೊಲೀಸರಿಗೆ ಇನ್ನೂ ಖಚಿತ ಸುಳಿವು ಸಿಕ್ಕಿಲ್ಲ. ಸಂತೆಕಟ್ಟೆ ಎಂಬಲ್ಲಿಂದ ಸುಮಾರು 4 ಕಿ.ಮೀ. ತೃಪ್ತಿ ಲೇಔಟ್ ಗೆ ಆಟೋದಲ್ಲಿ ಬಂದಿದ್ದ ಸುಮಾರು 45ರ ಆಸುಪಾಸಿನ ವ್ಯಕ್ತಿ ಈ ಕೊಲೆ ಮಾಡಿದ್ದು, ಆತನ ಓಡಾಟ ಸಂತೆಕಟ್ಟೆಯಲ್ಲಿ ಸಿಸಿ ಕ್ಯಾಮರಗಳಲ್ಲಿ ದಾಖಲಾಗಿದೆ. ಆದರೇ ಆತನ ಚಹರೆಯ ಗುರುತು ಪರಿಚಯವಾಗಿಲ್ಲ.ಆರೋಪಿ ಪತ್ತೆಗೆ ಈಗಾಗಲೇ 5 ಪೊಲೀಸ್ ತಂಡಗಳನ್ನು ರಚಿಸಿದ್ದು, ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ ಎಂದು ಎಸ್ಪಿ ಅರುಣ್ ಕುಮಾರ್ ತಿಳಿಸಿದ್ದಾರೆ. ಈ ತಂಡಗಳು ಮೃತರ ಸಂಬಂಧಿಕರು ಮತ್ತು ಪರಿಚಯವರಿಂದ ಮಾಹಿತಿ ಸಂಗ್ರಹಣೆ, ಸಿಸಿ ಕ್ಯಾಮರ ದೃಶ್ಯಗಳನ್ನು ಪರಿಶೀಲನೆ, ಆಟೋ ಚಾಲಕರ ವಿಚಾರಣೆ ಜೊತೆಗೆ ತಾಂತ್ರಿಕ ರೀತಿಯಲ್ಲಿಯೂ ತನಿಖೆ ನಡೆಸುತ್ತಿವೆ ಎಂದವರು ತಿಳಿಸಿದ್ದಾರೆ.ಅನುಮಾನಗಳ ಸುತ್ತ ತನಿಖೆ:ಆರೋಪಿಗೆ ಘಟನೆ ನಡೆದ ಮನೆಯ ವಿಳಾಸ ಸ್ಪಷ್ಟವಾಗಿ ಗೊತ್ತಿದ್ದರಿಂದ ಮನೆಯವರಿಗೆ ಪರಿಚಯಸ್ಥನಾಗಿರಬೇಕು ಎಂದು ಶಂಕಿಸಲಾಗುತ್ತಿದೆ. ದರೋಡೆಯ ಉದ್ದೇಶಕ್ಕೆ ಕೊಲೆ ನಡೆದಿಲ್ಲವಾದ್ದರಿಂದ ದ್ವೇಷಸಾಧನೆಯೇ ಕೊಲೆಯ ಉದ್ದೇಶವಾಗಿರಬೇಕು ಎಂಬ ದಿಕ್ಕಿನಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರು, ಆರೋಪಿ ಮತ್ತು ಕೊಲೆಯಾದವರ ನಡುವೆ ಹಣಕಾಸಿನ ವ್ಯವಹಾರ ಇತ್ತೇ ಎನ್ನುವ ಬಗ್ಗೆಯೂ ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದಾರೆ.ನೇಜಾರಿನಲ್ಲಿ ನೀರವ:ಬೆಳ್ಳಂಬಳಗ್ಗೆ ನಡೆದ ಈ ಘಟನೆಯಿಂದ ನೇಜಾರು ಗ್ರಾಮವೇ ಬೆಚ್ಚಿಬಿದ್ದಿದ್ದು, ಕಳೆದೆರಡು ದಿನಗಳಿಂದ ಈ ಪರಿಸರದಲ್ಲಿ ನೀರವ ಮೌನ ಆವರಿಸಿದೆ. ಜನಜೀವನವೇ ಸ್ಥಗಿತಗೊಂಡಂತಿದೆ. ಸೋಮವಾರ ಮೃತದೇಹಗಳನ್ನು ಮನೆಗೆ ತಂದಾಗ ಸಾವಿರಾರು ಮಂದಿ ಆಂತಿಮದರ್ಶನಕ್ಕೆ ಸೇರಿದ್ದರು.