ಮುಸುಕುಧಾರಿಯ ವಿರುದ್ಧವೇ ತಿರುಗಿಬಿತ್ತು ಬುರುಡೆ ಗ್ಯಾಂಗ್‌!

| N/A | Published : Sep 02 2025, 01:00 AM IST / Updated: Sep 02 2025, 06:53 AM IST

Dharmasthala Burude Gang
ಮುಸುಕುಧಾರಿಯ ವಿರುದ್ಧವೇ ತಿರುಗಿಬಿತ್ತು ಬುರುಡೆ ಗ್ಯಾಂಗ್‌!
Share this Article
  • FB
  • TW
  • Linkdin
  • Email

ಸಾರಾಂಶ

‘ಮಾಸ್ಕ್‌ ಮ್ಯಾನ್‌’ ಚಿನ್ನಯ್ಯನನ್ನು ಮುಂದಿಟ್ಟುಕೊಂಡು ಧರ್ಮಸ್ಥಳದ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದ ಬುರುಡೆ ಟೀಂ, ತಮ್ಮ ಯೋಜನೆ ವಿಫಲವಾಗುತ್ತಿದ್ದಂತೆ ಮಾಸ್ಕ್‌ ಮ್ಯಾನ್‌ ವಿರುದ್ಧವೇ ತಿರುಗಿ ಬಿದ್ದಿದೆ.

 ಮಂಗಳೂರು/ಬೆಳ್ತಂಗಡಿ :  ‘ಮಾಸ್ಕ್‌ ಮ್ಯಾನ್‌’ ಚಿನ್ನಯ್ಯನನ್ನು ಮುಂದಿಟ್ಟುಕೊಂಡು ಧರ್ಮಸ್ಥಳದ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದ ಬುರುಡೆ ಟೀಂ, ತಮ್ಮ ಯೋಜನೆ ವಿಫಲವಾಗುತ್ತಿದ್ದಂತೆ ಮಾಸ್ಕ್‌ ಮ್ಯಾನ್‌ ವಿರುದ್ಧವೇ ತಿರುಗಿ ಬಿದ್ದಿದೆ.

ಧರ್ಮಸ್ಥಳ ಗ್ರಾಮದಲ್ಲಿ ಕೊಲೆಗೀಡಾದ, ಅತ್ಯಾಚಾರಕ್ಕೊಳಗಾದ ನೂರಾರು ಶವಗಳನ್ನು ನಾನೇ ಹೂತಿದ್ದೇನೆ ಎಂದಿದ್ದ ಚಿನ್ನಯ್ಯ, ತನಿಖೆ ವೇಳೆ ‘ಬುರುಡೆ ಗ್ಯಾಂಗ್‌ನ ಸೂತ್ರಧಾರಿಗಳು ಹಣ ನೀಡಿ ಹೀಗೆ ಹೇಳಬೇಕು ಅಂತ ನನಗೆ ಬೆದರಿಕೆ ಹಾಕಿದ್ದರು. ನಾವು ಹೇಳಿದ ಹಾಗೆ ಕೇಳಿಲ್ಲ ಅಂದರೆ ನಿನ್ನ ವಿರುದ್ಧವೇ ಕೇಸ್ ಹಾಕುತ್ತೇವೆ ಎಂದೆಲ್ಲಾ ನನ್ನನ್ನು ಹೆದರಿಸಿದ್ದರು’ ಎಂದು ಸ್ಫೋಟಕ ಹೇಳಿಕೆ ನೀಡಿದ್ದ. ಇದು ಬುರುಡೆ ಗ್ಯಾಂಗ್‌ನ ಆಕ್ರೋಶಕ್ಕೆ ಕಾರಣವಾಗಿದೆ.

ಇದರ ಬೆನ್ನಲ್ಲೇ ಬೆಳ್ತಂಗಡಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿರುವ ಪ್ರಕರಣದ ದೂರುದಾರ ಹಾಗೂ ಸೌಜನ್ಯ ಪರ ಹೋರಾಟಗಾರ ಜಯಂತ್‌, ‘ಆತನಿಗೆ (ಚಿನ್ನಯ್ಯ) ಶವ ಹೂತ ಸ್ಥಳಗಳು ಗೊತ್ತು. ಆದರೆ, ದೊಡ್ಡಮಟ್ಟದಲ್ಲಿ ಹೆಣ್ಣು ಮಕ್ಕಳನ್ನು ಹೂತಿರುವ ಸ್ಥಳವನ್ನು ಆತ ಎಸ್‌ಐಟಿಗೆ ತೋರಿಸಿಲ್ಲ. ಎಸ್‌ಐಟಿಗೆ ಬೇರೆ ಜಾಗ ತೋರಿಸಿದ್ದಾನೆ. ಹಾಗಾಗಿ, ಹೂತಿರುವ ಶವಗಳು ಪತ್ತೆಯಾಗಿಲ್ಲ. ಈ ಆಟ ಒಂದು ಹಂತಕ್ಕೆ ಬರಲಿ, ಆಮೇಲೆ ತೋರಿಸುತ್ತೇವೆ. ನಮ್ಮ ಹೋರಾಟದಲ್ಲಿ ಬಿರುಕು ಬಂದಿಲ್ಲ. ನಮ್ಮದು ಸತ್ಯಪರ, ನ್ಯಾಯದ ಪರ ಹೋರಾಟ. ಸೌಜನ್ಯ ಪ್ರಕರಣದಲ್ಲಿ ಚಿನ್ನಯ್ಯ ಭಾಗಿಯಾಗಿದ್ದಾನೆ ಎನ್ನುವುದು ನನಗೆ ಗೊತ್ತು. ಈಗ ಚಿನ್ನಯ್ಯ ನಮ್ಮನ್ನು ಹಳ್ಳಕ್ಕೆ ತಂದು ಹಾಕಿದ್ದಾನೆ. ಹಾಗಾಗಿ, ಅವನಿಗೆ ಮುಂದೆ ಮಾರಿ ಹಬ್ಬ ಇದೆ’ ಎಂದು ಕಿಡಿಕಾರಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಗಿರೀಶ್ ಮಟ್ಟಣ್ಣವರ್, ‘ಯಾರೋ ಆತನ (ಚಿನ್ನಯ್ಯ) ಬ್ರೇನ್‌ವಾಶ್‌ ಮಾಡಿದ್ದಾರೆ. ಆತ ಶವಗಳನ್ನು ಹೂತ ಸ್ಥಳಗಳನ್ನು ಸರಿಯಾಗಿ ತೋರಿಸಿಲ್ಲ. ಎಸ್‌ಐಟಿಗೆ ಎಲ್ಲಾ ದಾಖಲೆಗಳನ್ನು ಕೊಟ್ಟಿದ್ದೇವೆ. ನಮ್ಮ ಹೋರಾಟ ನಿಲ್ಲಲ್ಲ’ ಎಂದು ತಿಳಿಸಿದ್ದಾರೆ.

ಈ ಮಧ್ಯೆ, ಮಹೇಶ್‌ ಶೆಟ್ಟಿ ತಿಮರೋಡಿ ಮನೆಯಲ್ಲಿ ಶವ ಹೂತ ಜಾಗಗಳ ಬ್ಲೂ ಪ್ರಿಂಟ್‌ ತಯಾರಾಗಿದ್ದು, ಈ ವೇಳೆ ತಾನು ಹೂತ ಶವಗಳ ಬಗ್ಗೆ ನಿಖರತೆ ಹೊಂದಿದ್ದಾಗಿ ಚಿನ್ನಯ್ಯ ತಿಳಿಸಿದ್ದ. ಅಲ್ಲದೆ, ಸೌಜನ್ಯ ಶವ ಹೂತ ಸ್ಥಳವೂ ತನಗೆ ಗೊತ್ತು ಎಂದಿದ್ದ ಎಂದು ತಿಳಿದು ಬಂದಿದೆ.

ಈಗ ಉತ್ಖನನ ವೇಳೆ ಶವ ಪತ್ತೆಯಾಗದ ಹಿನ್ನೆಲೆಯಲ್ಲಿ ತಿಮರೋಡಿ ಕೂಡ ಆತನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೌಜನ್ಯ ನಾಪತ್ತೆ ಪ್ರಕರಣ ಸಂಬಂಧ ಎಸ್‌ಐಟಿ ಕಚೇರಿಗೆ ಮಟ್ಟಣ್ಣವರ್‌ ಜೊತೆ ತೆರಳಿ ದಾಖಲೆಗಳನ್ನು ನೀಡಿದ್ದಾರೆ ಎನ್ನಲಾಗಿದೆ.

ಶವ ಹೂತ 30 ಸ್ಥಳಗಳ ಕುರಿತು ಬ್ಲೂಪ್ರಿಂಟ್‌ ಸಿದ್ಧ ಮಾಡಿದ್ದ ಬುರುಡೆ ಟೀಂ

ಮಂಗಳೂರು: ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣವನ್ನು ಸುದ್ದಿ ಮಾಡುವ ಮುನ್ನ ‘ಬುರುಡೆ ಟೀಂ’ ಆ ಸಂಬಂಧ ಪೂರ್ವ ತಯಾರಿಯನ್ನು ಮಾಡಿಕೊಂಡಿತ್ತು. ಶವ ಹೂತ ಆರೋಪ ಸಂಬಂಧ 30 ಜಾಗಗಳನ್ನು ಗುರುತು ಮಾಡಿ ಬ್ಲೂ ಪ್ರಿಂಟ್‌ ಕೂಡ ಸಿದ್ಧಪಡಿಸಿತ್ತು. ಬೆಂಗಳೂರಿನ ಜಯಂತ್‌ ಮನೆಯಲ್ಲಿ ತಯಾರಾದ ಈ ನೀಲನಕ್ಷೆಯ ಕುರಿತು ಉಜಿರೆಯ ತಿಮರೋಡಿ ಮನೆಯಲ್ಲಿ ಚರ್ಚೆ ನಡೆಯುತ್ತಿತ್ತು ಎಂದು ವರದಿಗಳು ತಿಳಿಸಿವೆ.

Read more Articles on