ಸಾರಾಂಶ
ಪ್ರಯಾಣಿಕರೊಬ್ಬರನ್ನು ಕೆಳಗೆ ಇಳಿಸಲು ನಿಲ್ಲಿಸಿದ ವೇಳೆ ಹಿಂಬದಿಯಿಂದ ಖಾಸಗಿ ಬಸ್ ಡಿಕ್ಕಿ. ಹಾರಾಪುರ ಬಳಿ ಘಟನೆ. ಅಪಘಾತದ ರಭಸಕ್ಕೆ ಸಾರಿಗೆ ಬಸ್ ರಸ್ತೆ ಬದಿ ಉರುಳಿದ್ದು ಬಸ್‌ನ ಹಿಂಬದಿ ಜಖಂಗೊಂಡಿದೆ. ಸುಗಮ ಟ್ರಾವೆಲ್ಸ್ ಬಸ್ ಮುಂಬದಿ ನಜ್ಜುಗುಜ್ಜಾಗಿ ಓರ್ವ ಸಾವನ್ನಪ್ಪಿದ್ದು, 10 ಜನರಿಗೆ ಗಂಭೀರ ಗಾಯಗಳಾಗಿವೆ.
ಕನ್ನಡಪ್ರಭ ವಾರ್ತೆ ತುರ್ವಿಹಾಳ
ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಕಪಗಲ್ ಸಮೀಪದಲ್ಲಿ ನಡೆದ ಖಾಸಗಿ ಶಾಲಾ ವಾಹನ ಮತ್ತು ಸಾರಿಗೆ ಸಂಸ್ಥೆಯ ಬಸ್ ಘಟನೆ ಮಾಸುವ ಮುನ್ನವೇ ಸಾರಿಗೆ ಸಂಸ್ಥೆ ಹಾಗೂ ಖಾಸಗಿ ವಾಹನದ ನಡುವೆ ಮತ್ತೊಂದು ಅಪಘಾತ ಭಾನುವಾರ ಸಂಭವಿಸಿದೆ.ಬಸವಕಲ್ಯಾಣ ತಾಲೂಕಿನ ಪುಂಡಲೀಕಪ್ಪ (38) ಸಾವನ್ನಪ್ಪಿದ್ದು, 10 ಜನರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಸಿಂಧನೂರು ತಾಲೂಕಿನ ತುರ್ವಿಹಾಳ ಠಾಣೆ ವ್ಯಾಪ್ತಿಯ ಹಾರಾಪುರ ಗ್ರಾಮದ ಹೆದ್ದಾರಿ ಬಳಿ ಶನಿವಾರ ತಡರಾತ್ರಿ ಸುಮಾರಿಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಯಾದಗಿರಿ ಡಿಪೋದ ಬೆಂಗಳೂರು-ಯಾದಗಿರಿ ಬಸ್ ಹಾಗೂ ಸುಗಮ ಟ್ರಾವೆಲ್ಸ್ ಬಸ್ ನಡುವೆ ಅಪಘಾತ ಸಂಭವಿಸಿದೆ. ಬೆಂಗಳೂರಿನಿಂದ ಯಾದಗಿರಿಗೆ ಹೊರಟಿದ್ದ ಸಾರಿಗೆ ಬಸ್ ಪ್ರಯಾಣಿಕರೊಬ್ಬರನ್ನು ಇಳಿಸಲು ಚಾಲಕ ಹಾರಾಪುರದಲ್ಲಿ ನಿಲ್ಲಿಸಿದ್ದಾನೆ. ಇದೇ ಸಮಯದಲ್ಲಿ ಕಲಬುರಗಿ ಕಡೆ ಹೊರಟಿದ್ದ ಸುಗಮ ಬಸ್ ಸಾರಿಗೆ ಬಸ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಸಾರಿಗೆ ಬಸ್ ರಸ್ತೆ ಬದಿ ಉರುಳಿದ್ದು ಬಸ್‌ನ ಹಿಂಬದಿ ಜಖಂಗೊಂಡಿದೆ. ಸುಗಮ ಟ್ರಾವೆಲ್ಸ್ ಬಸ್ ಮುಂಬದಿ ನಜ್ಜುಗುಜ್ಜಾಗಿ ಓರ್ವ ಸಾವನ್ನಪ್ಪಿದ್ದು, 10 ಜನರಿಗೆ ಗಂಭೀರ ಗಾಯಗಳಾಗಿವೆ.ಘಟನಾ ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ, ಡಿವೈಎಸ್ಪಿ ಬಿ.ಎಸ್.ತಳವಾರ, ಸಿಪಿಐ ವೀರಾರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳನ್ನು ಆರೋಗ್ಯ ವಿಚಾರಿಸಿದರು. ಈ ಕುರಿತು ತುರ್ವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.