ಹೊನ್ನಾವರ ಬಳಿ ಬಸ್ ಬೈಕ್ ಮಧ್ಯೆ ಅಪಘಾತ: ಮೂವರು ಸವಾರರ ಸಾವು

| Published : Jan 01 2025, 12:00 AM IST

ಹೊನ್ನಾವರ ಬಳಿ ಬಸ್ ಬೈಕ್ ಮಧ್ಯೆ ಅಪಘಾತ: ಮೂವರು ಸವಾರರ ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ಹೊನ್ನಾವರ ತಾಲೂಕಿನ ಮಾವಿನಕುರ್ವಾದ ರಾಘವೇಂದ್ರ ಸೋಮಯ್ಯ ಗೌಡ (೩೪), ಖರ್ವಾ ನಾಥಗೇರಿಯ ರಮೇಶ ರಾಮಚಂದ್ರ ನಾಯ್ಕ (೨೨), ಸಂಶಿ- ಕುದ್ರಿಗಿಯ ಗೌರೀಶ (ಗಣಪತಿ) ಮಂಜುನಾಥ ನಾಯ್ಕ (೨೨) ಮೃತಪಟ್ಟ ವ್ಯಕ್ತಿಗಳು.

ಹೊನ್ನಾವರ: ಸಾರಿಗೆ ಸಂಸ್ಥೆಯ ಬಸ್‌ ಮತ್ತು ಬೈಕ್‌ ನಡುವೆ ಅಪಘಾತವಾಗಿ ದ್ವಿಚಕ್ರ ವಾಹನದಲ್ಲಿದ್ದ ಮೂವರು ಸವಾರರು ಸಾವಿಗೀಡಾದ ಘಟನೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಶರಾವತಿ ಸೇತುವೆ ಮೇಲೆ ಮಂಗಳವಾರ ಬೆಳಗಿನ ಜಾವ ನಡೆದಿದೆ.

ತಾಲೂಕಿನ ಮಾವಿನಕುರ್ವಾದ ರಾಘವೇಂದ್ರ ಸೋಮಯ್ಯ ಗೌಡ (೩೪), ಖರ್ವಾ ನಾಥಗೇರಿಯ ರಮೇಶ ರಾಮಚಂದ್ರ ನಾಯ್ಕ (೨೨), ಸಂಶಿ- ಕುದ್ರಿಗಿಯ ಗೌರೀಶ (ಗಣಪತಿ) ಮಂಜುನಾಥ ನಾಯ್ಕ (೨೨) ಮೃತಪಟ್ಟ ವ್ಯಕ್ತಿಗಳು.

ವಿಜಯಪುರದಿಂದ ಮಂಗಳೂರಿಗೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಹೊನ್ನಾವರದ ಶರಾವತಿ ಸೇತುವೆ ಮೇಲೆ ಸಾಗುತ್ತಿರುವಾಗ ಮಂಕಿ ಕಡೆಯಿಂದ ಹೊನ್ನಾವರ ಕಡೆಗೆ ಎದುರಿನಿಂದ ಬಂದ ಬೈಕ್ ನಡುವೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಬೈಕ್ ಸವಾರರಾದ ರಾಘವೇಂದ್ರ ಗೌಡ ಮತ್ತು ರಮೇಶ ನಾಯ್ಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗೌರೀಶ(ಗಣಪತಿ) ನಾಯ್ಕ ಅವರು ಹೊನ್ನಾವರದ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.ಈ ಕುರಿತು ಹೊನ್ನಾವರದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಎಸ್ಐ ಮಮತಾ ನಾಯ್ಕ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಮುಗಿಲು ಮುಟ್ಟಿದ ಆಕ್ರಂದನ: ಮೃತಪಟ್ಟವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಆಸ್ಪತ್ರೆಯ ಮುಂದೆ ಜಮಾಯಿಸಿದ ಕುಟುಂಬದ ಸದಸ್ಯರು, ಸ್ನೇಹಿತರು ಕಣ್ಣೀರಿಟ್ಟರು.

ಮೃತಪಟ್ಟ ಮೂವರಲ್ಲಿ ರಾಘವೇಂದ್ರ ಎಂಬವರು ವಿವಾಹಿತರು. ಇವರು ವೃತ್ತಿಯಲ್ಲಿ ಚಾಲಕರಾಗಿದ್ದರು. ಇನ್ನಿಬ್ಬರು ಅವಿವಾಹಿತರು. ನಾಥಗೇರಿಯ ರಮೇಶ, ಸಂಶಿಯ ಗೌರೀಶ ಇಬ್ಬರು ಕಾಲೇಜು ಶಿಕ್ಷಣ ಪೂರೈಸಿ ಉದ್ಯೋಗ ಹೊಂದಬೇಕೆಂದಿದ್ದರು‌. ರಮೇಶ ಎಂಬವರು ಸೇನೆಯಲ್ಲಿ ಅಥವಾ ಸರ್ಕಾರಿ ಸೇವೆ ಸಲ್ಲಿಸಬೇಕೆಂದು ಕನಸು ಕಂಡಿದ್ದರು. ಇದಕ್ಕಾಗಿ ಅಂಕೋಲಾದಲ್ಲಿ ತರಬೇತಿ ಪಡೆಯುತ್ತಿದ್ದರು. ಇವರ ತಂದೆ- ತಾಯಿಗಳು ಕೂಲಿ ಕೆಲಸ ಮಾಡಿಕೊಂಡಿದ್ದರು. ಇನ್ನು ಗೌರೀಶ ಅವರ ಕೌಟುಂಬಿಕ ಪರಿಸ್ಥಿತಿ ಕರುಣಾಜನಕವಾಗಿದೆ. ತಾಯಿ ಮಗ ಇಬ್ಬರೇ ಇದ್ದರು. ಮನೆಯ ಸಂಪೂರ್ಣ ಜವಾಬ್ದಾರಿ ಗೌರೀಶ ಅವರ ಮೇಲಿತ್ತು. ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

ಶಿರಸಿ: ತಾಲೂಕಿನ ದೊಡ್ನಳ್ಳಿ ಸಮೀಪದ ನರೇಬೈಲ್ ಅರಣ್ಯ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ದೊಡ್ನಳ್ಳಿ ಸಮೀಪದ ನರೇಬೈಲ್‌ನ ರಾಜು ಯಲ್ಲಪ್ಪ ಆರೇರ(೪೫) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.ಸೊಂಟ ನೋವು ಹಾಗೂ ಕಳೆದ ಒಂದು ವಾರದಿಂದ ಥಂಡಿ ಜ್ವರದಿಂದ ಬಳಲುತ್ತಿದ್ದ ಅವರು ಎಲ್ಲಿಯೂ ಕೆಲಸಕ್ಕೆ ಹೋಗದೇ ಮನೆಯಲ್ಗಿ ಇದ್ದರು. ಅನಾರೋಗ್ಯದಿಂದ ಅಥವಾ ಇನ್ನಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಡಿ. ೨೯ರ ರಾತ್ರಿ ತಾಲೂಕಿನ ನರೆಬೈಲ್ ಗ್ರಾಮದ ವ್ಯಾಪ್ತಿಯ ಅರಣ್ಯ ಪ್ರದೇಶದ ಮರದ ಟೊಂಗೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪತ್ನಿ ಸಾವಿತ್ರಿ ರಾಜು ಆರೇರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.