ಸಾರಾಂಶ
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಹಾಗೂ ಬೈಕ್‌ವೊಂದರ ನಡುವೆ ಮುಖಾಮುಖಿ ಡಿಕ್ಕಿ ಪರಿಣಾಮ, ಬೈಕ್‌ನಲ್ಲಿದ್ದ ಮೂವರು ಮಕ್ಕಳೂ ಸೇರಿದಂತೆ ಐವರು ದಾರುಣವಾಗಿ ಮೃತಪಟ್ಟ ದುರ್ಘಟನೆ, ಬೀದರ್-ಶ್ರೀರಂಗಪಟ್ಟಣ ಹೆದ್ದಾರಿ-150 ಮೇಲಿನ ಸುರಪುರ ತಾಲೂಕಿನ ತಿಂಥಣಿ ಕಮಾನ್ ಸಮೀಪ ಬುಧವಾರ ಮಧ್ಯಾಹ್ನ ಜರುಗಿದೆ.
ಯಾದಗಿರಿ/ಸುರಪುರ : ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಹಾಗೂ ಬೈಕ್‌ವೊಂದರ ನಡುವೆ ಮುಖಾಮುಖಿ ಡಿಕ್ಕಿ ಪರಿಣಾಮ, ಬೈಕ್‌ನಲ್ಲಿದ್ದ ಮೂವರು ಮಕ್ಕಳೂ ಸೇರಿದಂತೆ ಐವರು ದಾರುಣವಾಗಿ ಮೃತಪಟ್ಟ ದುರ್ಘಟನೆ, ಬೀದರ್-ಶ್ರೀರಂಗಪಟ್ಟಣ ಹೆದ್ದಾರಿ-150 ಮೇಲಿನ ಸುರಪುರ ತಾಲೂಕಿನ ತಿಂಥಣಿ ಕಮಾನ್ ಸಮೀಪ ಬುಧವಾರ ಮಧ್ಯಾಹ್ನ ಜರುಗಿದೆ.
ಶಹಾಪುರದ ಹಳಿಸಗರದಲ್ಲಿ ವಾಸಿಸುತ್ತಿದ್ದ, ರಾಯಚೂರು ಜಿಲ್ಲೆ ಲಿಂಗಸೂಗೂರು ತಾಲೂಕಿನ ಗುಡಗುಂಟಿ ಗ್ರಾಮ ಮೂಲದ ಆಂಜನೇಯ (35), ಗುಂಡಗುಂಟಿಯಲ್ಲಿ ಬುಧವಾರ ನಡೆಯಲಿದ್ದ ಗ್ರಾಮದ ಜಾತ್ರೆಗೆಂದು ಬೈಕ್‌ನಲ್ಲಿ ತೆರಳುತ್ತಿದ್ದರು. ತಮ್ಮ ಜೊತೆ, ಪತ್ನಿ ಗಂಗಮ್ಮ (28), 18 ತಿಂಗಳ ತಮ್ಮ ಮಗು ಹನುಮಂತ ಹಾಗೂ ಪತ್ನಿ ಗಂಗಮ್ಮಳ ಸಹೋದರ ಮಲ್ಲಣ್ಣನ ಮಕ್ಕಳಾದ ಐದು ವರ್ಷದ ಪವಿತ್ರಾ ಹಾಗೂ ಮೂರು ವರ್ಷದ ರಾಯಪ್ಪನನ್ನೂ ಬೈಕ್ ಮೇಲೆ ಕರೆದುಕೊಂಡು ಹೊರಟಿದ್ದರು.
ಕೊಟ್ಟೂರು ಸಮೀಪದ ಉಜ್ಜನಿಯಿಂದ ಕಲಬುರಗಿ ಮಾರ್ಗವಾಗಿ ಚಿಂಚೋಳಿಗೆ ಹೊರಟಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸೊಂದು (ಕೆಎ-32 ಎಫ್-2684) ತಿಂಥಣಿ ಕಮಾನ್ ಕ್ರಾಸ್ ಬಳಿ ಮುಖಾಮುಖಿಯಾದಾಗ ವಾಹನಗಳ ನಿಯಂತ್ರಣ ತಪ್ಪಿದ್ದರಿಂದ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಅಪಘಾತದ ತೀವ್ರತೆಗೆ ಬೈಕ್‌ನಲ್ಲಿದ್ದ ಐವರೂ ಭೀಕರವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ದುರ್ಘಟನೆ ಕಣ್ಣಾರೆ ಕಂಡ ಬಸ್‌ನಲ್ಲಿದ್ದ ಪ್ರಯಾಣಿಕರ ಚೀತ್ಕಾರ ಮುಗಿಲು ಮುಟ್ಟಿತ್ತು. ರಕ್ತಸಿಕ್ತವಾಗಿ ರಸ್ತೆಯಲ್ಲಿ ಪ್ರಾಣ ಕಳೆದುಕೊಂಡು ಬಿದ್ದಿದ್ದ ಎಳೆಯ ಕಂದಮ್ಮಗಳ ಜೊತೆ ಆಂಜನೇಯ ಹಾಗೂ ಗಂಗಮ್ಮಳ ಮೃತದೇಹಗಳ ಕಂಡು ಸ್ಥಳಕ್ಕಾಗಮಿಸಿದ ಜನರು ಕಣ್ಣೀರಾದರು. ಸುರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ.