ಸಾರಾಂಶ
ಕನ್ನಡಪ್ರಭ ವಾರ್ತೆ ಕಾಗವಾಡ
ಬಹುದಿನಗಳಿಂದ ಬೇಡಿಕೆಯಾಗಿಯೇ ಉಳಿದಿದ್ದ ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿಭಾಗವಾದ ಕೃಷ್ಣಾ ನದಿ ತಟದಲ್ಲಿರುವ ಕಾಗವಾಡ ತಾಲೂಕಿನ ಕಟ್ಟ ಕಡೆಯ ಜುಗೂಳ ಗ್ರಾಮಕ್ಕೆ ಬಸ್ ಸೌಕರ್ಯ ಒದಗಿಸುವಂತೆ ಅಥಣಿ ಹಾಗೂ ಚಿಕ್ಕೋಡಿ ಬಸ್ ನಿಲ್ದಾಣದ ಡಿಪೋ ಮ್ಯಾನೇಜರ್‌ಗಳಿಗೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಿಗಮದ ಅಧ್ಯಕ್ಷ, ಶಾಸಕ ರಾಜು ಕಾಗೆ ಅವರು ದೂರವಾಣಿ ಕರೆ ಮಾಡಿ ಸೂಚನೆ ನೀಡಿದರು.ಜುಗೂಳ ಗ್ರಾಮದ ಅಭಯ ಶಹಾ ಸೇರಿದಂತೆ ಸಾರ್ವಜನಿಕರ ಮನವಿಗೆ ಸ್ಪಂದಿಸಿದ ಶಾಸಕರು ಮಂಗಾವತಿ ಹಾಗೂ ಶಹಾಪುರ ಗ್ರಾಮಗಳ ಸಾರ್ವಜನಿಕರ ಸಮಸ್ಯೆಗೆ ಸ್ಥಳದಲ್ಲಿಯೇ ಪರಿಹರಿಸಿ ಚಿಕ್ಕೋಡಿಗೆ ವಸತಿಗೆ ಬರುವ ಯಾವುದಾದರೊಂದು ಬಸ್‌ನ್ನು ಜುಗೂಳ ವಸತಿಗೆ ಕಳಿಸುವಂತೆ ಸೂಚಿಸಿದರು. ಶಾಸಕರ ಸೂಚನೆಯ ಮೇರೆಗೆ ಬಸ್ ಓಡಿಸುವ ವ್ಯವಸ್ಥೆ ಮಾಡುವ ಬಗ್ಗೆ ತಿಳಿಸಿದರು.ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿಭಾಗವಾದ ಕೃಷ್ಣಾ ನದಿ ತಟದಲ್ಲಿರುವ ಕಾಗವಾಡ ತಾಲೂಕಿನ ಕಟ್ಟ ಕಡೆಯ ಜುಗೂಳ ಗ್ರಾಮದಲ್ಲಿಯ ಶಾಲಾ ಮಕ್ಕಳಿಗೆ ಪ್ರತಿನಿತ್ಯ ಶಾಲಾ ಕಾಲೇಜುಗಳಿಗೆ ತೆರಳಲು 4 ಕಿಮೀ ನಡೆದುಕೊಂಡು ಹೋಗುವ ಅನಿವಾರ್ಯತೆ ಇರುವುದರಿಂದ ಬಸ್ ಬಿಡುವಂತೆ ಜುಗೂಳ ಗ್ರಾಮದ ಅಭಯ ಶಹಾ ಸೇರಿದಂತೆ ಗ್ರಾಮಸ್ಥರು ಮನವಿ ಮಾಡಿದರು.ಸರಿಯಾದ ವಾಹನ ಸೌಕರ್ಯವಿಲ್ಲ, ವಿದ್ಯಾರ್ಥಿಗಳು ಪ್ರತಿದಿನ ಕೊರೆಯುವ ಚಳಿಯಲ್ಲಿ ಬೆಳ್ಳಂಬೆಳಗ್ಗೆ 4 ಕಿಮೀ ನಡೆದುಕೊಂಡು ಶಿರಗುಪ್ಪಿ ಗ್ರಾಮಕ್ಕೆ ಹೋಗಿ ಅಲ್ಲಿಂದ ಬೇರೆ ಬೇಕೆ ಕಡೆಗೆ ಬಸ್ ಹಿಡಿದುಕೊಂಡು ಹೋಗುವ ಅನಿವಾರ್ಯತೆ ಇದೆ. ಮಂಗಾವತಿ ಹಾಗೂ ಶಹಾಪುರ ಈ ಎರಡು ಗ್ರಾಮಗಳಿಗೆ ಜುಗೂಳ ಹೃದಯ ಭಾಗವಾಗಿದ್ದು, ಜುಗೂಳ ಗ್ರಾಮಕ್ಕೆ ಪ್ರತಿನಿತ್ಯ ಬೆಳಗ್ಗೆ, ಮಧ್ಯಾಹ್ನ ಹಾಗೂ ಸಂಜೆ ಬಸ್ ಓಡಿಸಿದರೇ ವಿದ್ಯಾರ್ಥಿಗಳಿಗೆ ಶಾಲಾ, ಕಾಲೇಜುಗಳಿಗೆ ಹೋಗಲು ಹಾಗೂ ಮಹಿಳೆ, ವೃದ್ಧರು ಆಸ್ಪತ್ರೆಗೆ ತೆರಳಲು ಮತ್ತು ಸಾರ್ವಜನಿಕರಿಗೆ ತಮ್ಮ ನಿತ್ಯದ ಕೆಲಸ ಕಾರ್ಯಗಳಿಗೆ ತೆರಳಲು ಅನುಕೂಲವಾಗುತ್ತದೆ. ಕೂಡಲೇ ಜುಗೂಳ ಗ್ರಾಮಕ್ಕೆ ನಿತ್ಯ 4 ಬಸ್ ಬಂದು ಹೋಗುವಂತೆ ವ್ಯವಸ್ಥೆ ಮಾಡಿ ಎಂದು ಕೈ ಮುಗಿದು ಕೋರಿದರು.ಈ ವೇಳೆ ಪಿಕೆಪಿಎಸ್ ಅಧ್ಯಕ್ಷ ಅಣ್ಣಾಸಾಹೇಬ ಪಾಟೀಲ, ಗ್ರಾಪಂ ಅಧ್ಯಕ್ಷ ಕಾಕಾಸಾಹೇಬ ಪಾಟೀಲ, ಕೃಷ್ಣಾ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಸೌರಭ ಪಾಟೀಲ, ಮುಖಂಡರಾದ ಅನೀಲ ಕಡೋಲಿ, ಭಾಸ್ಕರ ಪಾಟೀಲ(ವಕೀಲರು), ರಾಜು ಕಡೋಲಿ, ಉಮೇಶ ಪಾಟೀಲ, ಸುರೇಶ ಪಾಟೀಲ, ಅಭಯ ಶಹಾ, ಬಾಬಾಸಾಹೇಬ ತಾರದಾಳೆ, ನಿತೀನ ಪಾಟೀಲ, ಅಸ್ಲಂ ಅಪರಾಜ, ಅವಿನಾಶ ಪಾಟೀಲ, ಪ್ರಕಾಶ ಮುಗಳೆ, ಶಾಂತಿನಾಥ ಕರವ, ರಾಜು ಕರವ, ಅಣ್ಣಾಸಾಬ ಖಟಾರೆ, ರಾಜು ಮಾಮಗೂರೆ, ಬಸವರಾಜ ಮಗದುಮ್, ಶಿವಪುತ್ರ ನಾಯಿಕ, ರಾಜು ಮರಡಿ, ಪ್ರವೀಣ ಬಜಂತ್ರಿ, ನಿಖಿಲ ಬಜಂತ್ರಿ, ಸಿದ್ದಾರೂಢ ನೇಮಗೌಡರ, ಸೋಹಿಲ್ ಪಾಟೀಲ ಸೇರಿದಂತೆ ಅನೇಕರು ಇದ್ದರು.