ಸಾರಾಂಶ
ಶಿರಹಟ್ಟಿ: ಬಸ್ ಪ್ರಯಾಣ ದರ ಏರಿಕೆಯನ್ನು ಕೂಡಲೇ ತಡೆಹಿಡಿಯಬೇಕು ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಪಟ್ಟಣದಲ್ಲಿ ಸೋಮವಾರ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಬೆಳಗ್ಗೆ ದಿಢೀರ್ ಬಸ್ ನಿಲ್ದಾಣಕ್ಕೆ ಬಂದ ನೂರಾರು ವಿದ್ಯಾರ್ಥಿಗಳು ಬಸ್ ತಡೆದು, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ರಾಜ್ಯ ಸರ್ಕಾರ ಬಸ್ ದರ ಹೆಚ್ಚಳ ಮಾಡುವ ಮೂಲಕ ಬಡವರ ಮೇಲೆ ಆರ್ಥಿಕ ಹೊರೆ ಹಾಕುತ್ತಿದೆ ಎಂದು ದೂರಿದರು.ರಾಜ್ಯ ಸರ್ಕಾರ ಹೊಸ ವರ್ಷದ ಆರಂಭಕ್ಕೇ ರಾಜ್ಯದ ಜನತೆಗೆ ಶಾಕ್ ನೀಡಿದೆ. ಹೊಸ ವರ್ಷದ ಮೊದಲ ದಿನವೇ ಶೇ. ೧೫ರಷ್ಟು ಬಸ್ ದರ ಏರಿಕೆ ಮಾಡಿದೆ. ಬಡ ಕೂಲಿ ಕಾರ್ಮಿಕರು, ಮಧ್ಯಮ ವರ್ಗದ ಜನತೆಗೆ ಹೊರೆಯನ್ನು ಹೇರಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಬಿವಿಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅರುಣ್‌ಕುಮಾರ್ ಬಾರ್ಕಿ ಮಾತನಾಡಿ, ಸರ್ಕಾರಿ ಬಸ್‌ಗಳನ್ನೇ ಅವಲಂಬಿಸಿ ಸಾವಿರಾರು ಜನ ದಿನನಿತ್ಯ ತಮ್ಮ ಕೆಲಸ ಕಾರ್ಯಗಳಿಗೆ ಓಡಾಡುತ್ತಾರೆ. ಹೀಗಿರುವಾಗ ಸರ್ಕಾರ ಶೇ. ೧೫ರಷ್ಟು ಸಾರಿಗೆ ಪ್ರಯಾಣದರ ಹೆಚ್ಚಳ ಮಾಡಿರುವುದು ಸರಿಯಾದ ಕ್ರಮವಲ್ಲ ಎಂದು ದೂರಿದರು.ಶಕ್ತಿ ಯೋಜನೆ ಜಾರಿಯಾದಾಗಿನಿಂದ ದಿನನಿತ್ಯ ಬಸ್‌ಗಳು ತುಂಬಿ ತುಳುಕುತ್ತಿವೆ. ಪುರುಷರು ನಿಂತೇ ಪ್ರಯಾಣ ಮಾಡುವಂತಾಗಿದೆ. ಎಷ್ಟೇ ತೊಂದರೆಯಾದರೂ ಬಡವರು ರಾಜ್ಯ ಸಾರಿಗೆ ಸಂಸ್ಥೆ ಬಸ್‌ಗಳಲ್ಲೇ ಓಡಾಡುತ್ತಾರೆ. ಆದರೆ ಏಕಾಏಕಿ ಬಸ್ ದರ ಹೆಚ್ಚಳದಿಂದ ಬಡವರಿಗೆ ಶಾಕ್ ನೀಡಿದಂತಾಗಿದೆ. ಸರ್ಕಾರಕ್ಕೆ ಜನತೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.
ಬಸ್‌ಗಳಲ್ಲಿ ಓಡಾಡುತ್ತಿರುವ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿರುವುದು ಸರ್ಕಾರದ ಗಮನಕ್ಕೆ ಇದೆ. ಪ್ರಯಾಣಿಕರ ಸಂಖ್ಯೆಗನುಗುಣವಾಗಿ ಹೆಚ್ಚುವರಿ ಬಸ್‌ಗಳನ್ನು ನೀಡದೇ ಜನರು ಗೋಳಾಡುವಂತೆ ಮಾಡಿದೆ. ನಿತ್ಯ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಸ್ಥಳಾವಕಾಶವಿಲ್ಲದೆ ಸರಿಯಾದ ಸಮಯಕ್ಕೆ ತರಗತಿಗಳಿಗೆ ತೆರಳಲು ಆಗುತ್ತಿಲ್ಲ ಎಂದು ಆರೋಪಿಸಿದರು.ತಾಲೂಕಿನ ಗ್ರಾಮೀಣ ಪ್ರದೇಶಗಳಿಂದ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಶಾಲೆ-ಕಾಲೇಜುಗಳಿಗೆ ತೆರಳುತ್ತಿದ್ದು, ಸಮಯಕ್ಕೆ ಸರಿಯಾಗಿ ಬಸ್ ಓಡಿಸುವಂತೆ ವರ್ಷದಲ್ಲಿ ನಾಲ್ಕೈದು ಬಾರಿ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸುವಂತಾಗಿದೆ. ಇದರಿಂದ ಅವರ ಓದಿಗೆ ಹಿನ್ನಡೆಯಾಗುತ್ತಿದೆ. ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ತಕ್ಷಣ ಪ್ರಯಾಣ ದರ ಏರಿಕೆ ತಡೆಯಿಡಿಯಬೇಕು, ಜತೆಯಲ್ಲಿ ಸಮರ್ಪಕ ಬಸ್ ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನೆಹರು ವೃತ್ತದ ಬಳಿ ಮಾನವ ಸರಪಳಿ ನಿರ್ಮಿಸಿ ಬಸ್‌ಗಳನ್ನು ತಡೆದರು. ಸಾರಿಗೆ ಇಲಾಖೆಯ ಡಿಎಂಎ ಕಿರಣ್ ಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.ಸಂಘಟನೆಯ ನಗರ ಕಾರ್ಯದರ್ಶಿ ಪರಶುರಾಮ ಕಳ್ಳಿಮನಿ, ಅಭಿಷೇಕ ಪುರಶೆಟ್ಟರ್, ಕಿರಣ್ ಮಜ್ಜಿಗುಡ್ಡ, ಪ್ರಜ್ವಲ್ ಬೇಂದ್ರೆ, ರೇಣುಕಾ ಪಾಟೀಲ್, ರಂಜಿತಾ ಚವ್ಹಾಣ ಹಾಗೂ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು.
ದರ ಏರಿಕೆ ಬದಲು ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ಸೇವೆ ಒದಗಿಸಿ:ಬಸ್ ಪ್ರಯಾಣ ದರ ಏರಿಕೆ ಖಂಡಿಸಿ ಲಕ್ಷ್ಮೇಶ್ವರ ಬಸ್ ನಿಲ್ದಾಣದ ಎದುರು ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಸೋಮವಾರ ಬಸ್ ತಡೆದು ಪ್ರತಿಭಟನೆ ನಡೆಸಿದರು.
ಬಳಿಕ ತಹಸೀಲ್ದಾರ್ ವಾಸುದೇವ ಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು. ರಾಜ್ಯ ಸರ್ಕಾರ ಅವೈಜ್ಞಾನಿಕವಾಗಿ ಬಸ್ ದರ ಏರಿಸುವ ಮೂಲಕ ಜನಸಾಮಾನ್ಯರಿಗೆ ಬರೆ ಹಾಕುವ ಕಾರ್ಯ ಮಾಡುತ್ತಿರುವುದು ಖಂಡನೀಯ. ಬಸ್ ಪ್ರಯಾಣ ದರ ಏರಿಸುವ ಬದಲು ಬಸ್ ಸಂಖ್ಯೆ ಹೆಚ್ಚಳ ಮಾಡಿ ಎಂದು ಆಗ್ರಹಿಸಿದರು.ಈ ವೇಳೆ ವಿದ್ಯಾರ್ಥಿ ಮುಖಂಡರು ಮಾತನಾಡಿ, ವಿದ್ಯಾರ್ಥಿಗಳು ಸಮರ್ಪಕ ಬಸ್ ವ್ಯವಸ್ಥೆ ಇಲ್ಲದೇ ಪರದಾಡುತ್ತಿದ್ದಾರೆ. ರಾಜ್ಯ ಸರ್ಕಾರ ಈ ಸಮಸ್ಯೆ ಬಗೆಹರಿಸುವ ಬದಲು ಪ್ರಯಾಣ ದರ ಹೆಚ್ಚಳ ಮಾಡಿದೆ. ಬಡ ಮತ್ತು ಮಧ್ಯಮ ವರ್ಗದ ಜನರ ಜೇಬಿಗೆ ಕತ್ತರಿ ಹಾಕುವ ಕಾರ್ಯ ಮಾಡುತ್ತಿದೆ. ಬಸ್ ಸಂಖ್ಯೆ ಹೆಚ್ಚಳ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆ ತಪ್ಪಿಸಿ, ಅವರ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡುವ ಕಾರ್ಯ ಮಾಡಬೇಕು. ಬಸ್ ದರ ಏರಿಕೆಯನ್ನು ಕೈಬಿಡುವ ಮೂಲಕ ಸಾರ್ವಜನಿಕರ ಹಿತ ಕಾಪಾಡುವ ಕಾರ್ಯ ಮಾಡಬೇಕು ಎಂದು ಆಗ್ರಹಿಸಿದರು.ವಿದ್ಯಾರ್ಥಿ ಮುಖಂಡರಾದ ಪ್ರಕಾಶ ಕುಂಬಾರ, ವಿನಯ ಸಪಡ್ಲ, ಅಭಿಷೇಕ ಉಮಚಗಿ, ಯಶ್ವಂತ ಶಿರಹಟ್ಟಿ, ಮನೋಜ ತಂಡಗೇರ, ವಿನಾಯಕ ಕುಂಬಾರ, ಅಭಿಷೇಕ ಈಶನಗೌಡರ, ವಿನಾಯಕ ಹುಂಬಿ, ಅರವಿಂದ ಇಚ್ಚಂಗಿ, ಯುವರಾಜ ದುರ್ಗದ, ಈರಣ್ಣ ಕುಂಬಾರ, ಈರಣ್ಣ ಗುಡಗೇರಿ ಇದ್ದರು.