ಸಾರಾಂಶ
ಕಾಮಗಾರಿಯಲ್ಲಿದ್ದ ರಸ್ತೆಯ ಏರುತಗ್ಗುಗಳನ್ನು ನಿಭಾಯಿಸುವ ಸಂದರ್ಭ ಮೆಟ್ಟಿಲು ತುಂಡಾಗಿದ್ದೇ ವಿನಃ ಬೇರೆ ಯಾವ ಕಾರಣಗಳಿಂದಲ್ಲ ಎಂಬುದು ಪ್ರಾಥಮಿಕ ನೋಟಕ್ಕೆ ತಿಳಿದು ಬಂದಿದೆ ಎಂದು ಮುಖ್ಯಮಂತ್ರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಕನ್ನಡಪ್ರಭ ವಾರ್ತೆ ಕಾರ್ಕಳ
ಕಾರ್ಕಳ- ಉಡುಪಿ ನಡುವೆ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್ಸೊಂದರ ಫುಟ್‌ಬೋರ್ಡ್ ಕಳಚಿದ ವೈರಲ್ ವೀಡಿಯೋಗೆ ಮುಖ್ಯಮಂತ್ರಿಗಳ ಕಚೇರಿ (ಸಿಎಂಒ) ಸ್ಪಷ್ಟನೆ ನೀಡಿದೆ. ಹಾಗೆಯೇ ಸ್ಥಳೀಯವಾಗಿ ಎದುರಿಸುತ್ತಿರುವ ಸಮಸ್ಯೆಗಳನ್ನು ನಮ್ಮ ಗಮನಕ್ಕೆ ತರಲು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯ ಅಧಿಕಾರಿಗಳ @osd_cmkarnataka ಎಕ್ಸ್ ಖಾತೆಗೆ ಟ್ಯಾಗ್ ಮಾಡಿ ಸಂದೇಶ ಪ್ರಕಟಿಸುವಂತೆ ಮನವಿ ಮಾಡಿದೆ.ಸಿಎಂಒ ಕಚೇರಿ ಪ್ರತಿಕ್ರಿಯೆ ಏನು: ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ವೀಡಿಯೋ ಆ.29ರ ಬೆಳಗ್ಗಿನದ್ದಾಗಿದೆ. ಪ್ರಸಕ್ತ ಕಾಮಗಾರಿ ನಡೆಯುತ್ತಿರುವ ರಸ್ತೆಯಲ್ಲಿ ಎದುರಾದ ಏರುತಗ್ಗುಗಳ ಪರಿಣಾಮ ಹಿಂದಿನ ಬಾಗಿಲಿನ ಮೆಟ್ಟಿಲು ನೆಲಕ್ಕೆ ಬಡಿದು ತುಂಡಾಗಿದೆ. ಸ್ವಲ್ಪ ದೂರದ ವರೆಗೆ ನೆಲಕ್ಕೆ ಉಜ್ಜಿಕೊಂಡು ಬಂದಿದ್ದರಿಂದ ಕೀರಲು ಶಬ್ದ ಮಾಡಿದೆ. ತಕ್ಷಣ ಎಚ್ಚೆತ್ತುಕೊಂಡ ನಿರ್ವಾಹಕ ಹಾಗೂ ಚಾಲಕ ಬಸ್ ನಿಲ್ಲಿಸಿ ಪರಿಶೀಲಿಸಿದ್ದಾರೆ. ಬಳಿಕ ಬಸ್‌ನಲ್ಲಿದ್ದ ಪ್ರಯಾಣಿಕರನ್ನು ಹಿಂದೆ ಬರುತ್ತಿದ್ದ ಬಸ್‌ಗೆ ಹತ್ತಿಸಿ ಕಳುಹಿಸಿಕೊಟ್ಟಿದ್ದಾರೆ. ಘಟನೆಯಲ್ಲಿ ಯಾರಿಗೂ ಯಾವುದೇ ರೀತಿ ತೊಂದರೆಯಾಗಿಲ್ಲ.
ಕಾಮಗಾರಿಯಲ್ಲಿದ್ದ ರಸ್ತೆಯ ಏರುತಗ್ಗುಗಳನ್ನು ನಿಭಾಯಿಸುವ ಸಂದರ್ಭ ಮೆಟ್ಟಿಲು ತುಂಡಾಗಿದ್ದೇ ವಿನಃ ಬೇರೆ ಯಾವ ಕಾರಣಗಳಿಂದಲ್ಲ ಎಂಬುದು ಪ್ರಾಥಮಿಕ ನೋಟಕ್ಕೆ ತಿಳಿದು ಬಂದಿದೆ. ಆದರೂ ಘಟನೆಗೆ ಸಂಬಂಧಿಸಿ ಸಂಬಂಧಪಟ್ಟ ತಾಂತ್ರಿಕ ಸಿಬ್ಬಂದಿ, ಮೇಲ್ವಿಚಾರಕರು ಹಾಗೂ ಘಟಕ ವ್ಯವಸ್ಥಾಪಕರಿಗೆ ಈ ಬಗ್ಗೆ ಸಮಜಾಯಿಷಿ ನೀಡುವಂತೆ, ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಲು ಸೂಚಿಸಲಾಗಿದೆ ಎಂದು ಮಂಗಳೂರಿನ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ ಎಂದೂ ಸಿಎಂಒ ಸಂದೇಶದಲ್ಲಿ ಉಲ್ಲೇಖಿಸಿದೆ.