ಸಾರಾಂಶ
ಈ ರಸ್ತೆಗೆ ವಿಶೇಷವಾಗಿ ₹6 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಶಾಸಕರು ಭೂಮಿಪೂಜೆ ನೆರವೇರಿಸಿದ್ದಾರೆ. ಆದರೂ, ಕಾಮಗಾರಿ ಆರಂಭವಾಗಿಲ್ಲ. ಗುತ್ತಿಗೆದಾರರಿಗೆ ಕೇಳಿದರೆ ಸರಿಯಾಗಿ ಉತ್ತರ ನೀಡಲ್ಲ. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೆ ಹಾರಿಕೆ ಉತ್ತರ ನೀಡುತ್ತಾರೆ.
ಕುಂದಗೋಳ: ಜಿಲ್ಲಾ ಮುಖ್ಯ ರಸ್ತೆಗೆ ಒಳ ಪಡುವ ಚಾಕಲಬ್ಬಿ- ಸಂಶಿ ಮಾರ್ಗ ರಸ್ತೆ ಮಳೆಗೆ ಕೊಚ್ಚಿಹೋಗಿದೆ. ಕಿರಿದಾದ ರಸ್ತೆ ಮಾತ್ರ ಉಳಿದಿದ್ದು ವಾಹನ ಸಂಚಾರ ಸ್ಥಗಿತಗೊಂಡಿದೆ. ಹೀಗಾಗಿ, ಚಾಕಲಬ್ಬಿ ಗ್ರಾಮಕ್ಕೆ ಬಸ್ ಬರದೆ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಚಾಕಲಬ್ಬಿ ಗ್ರಾಮದ ಜನತೆ ಹುಬ್ಬಳ್ಳಿ- ಧಾರವಾಡ, ಕುಂದಗೋಳ, ಸಂಶಿ, ಲಕ್ಷ್ಮೇಶ್ವರ, ಗದಗ, ಹಾವೇರಿ ಹಾಗೂ ಅನೇಕ ಗ್ರಾಮಗಳಿಗೆ ತಮ್ಮ ಕೆಲಸ ಕಾರ್ಯಗಳಿಗೆ ತೆರಳಲು ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಶನಿವಾರ ಸಂಜೆ ಧಾರಾಕಾರ ಮಳೆ ಸುರಿದಿದೆ. ಈ ವೇಳೆ ಸಂಚರಿಸುತ್ತಿದ್ದ ಲಾರಿಯೊಂದು ರಸ್ತೆಯಲ್ಲಿ ಸಿಲುಕಿದ್ದರಿಂದ ಕಿರಿದಾದ ರಸ್ತೆಯಲ್ಲಿ ಮತ್ತೊಂದು ವಾಹನ ಸಂಚರಿಸದಂತಾಗಿ ಬಸ್ ಸೇವೆ ಕಡಿತಗೊಂಡಿತ್ತು. ದಾರಿ ಕಾಯುತ್ತಿದ್ದ ಚಾಕಲಬ್ಬಿ ಗ್ರಾಮಸ್ಥರು ಬಸ್ ಬರದಿರುವುದರಿಂದ ಅನಿವಾರ್ಯವಾಗಿ ಮರಳಿ ಮನೆ ಸೇರುವಂತಾಯಿತು.ಈ ರಸ್ತೆಗೆ ವಿಶೇಷವಾಗಿ ₹6 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಶಾಸಕರು ಭೂಮಿಪೂಜೆ ನೆರವೇರಿಸಿದ್ದಾರೆ. ಆದರೂ, ಕಾಮಗಾರಿ ಆರಂಭವಾಗಿಲ್ಲ. ಗುತ್ತಿಗೆದಾರರಿಗೆ ಕೇಳಿದರೆ ಸರಿಯಾಗಿ ಉತ್ತರ ನೀಡಲ್ಲ. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೆ ಹಾರಿಕೆ ಉತ್ತರ ನೀಡುತ್ತಾರೆ.
ಮಳೆ ಬಂದರೆ ಸಾಕು ರಸ್ತೆಯಲ್ಲಿ ವಾಹನಗಳು ಸಂಚರಿಸಲು ಪರದಾಡುವಂತಾಗುತ್ತದೆ. ಇಂದು ಗ್ರಾಮಕ್ಕೆ ಬಸ್ ಬಾರದೆ ತೊಂದರೆಯಾಗಿದೆ. ನಾವು ಗ್ರಾಮಸ್ಥರಿಗೆ ಹಾಗೂ ಪ್ರಯಾಣಿಕರಿಗೆ ಏನು ಉತ್ತರ ಕೊಡಬೇಕು ಹೀಗೆ ಮುಂದುವರೆದರೆ ಲೋಕೋಪಯೋಗಿ ಇಲಾಖೆಯ ಎದುರಿಗೆ ಶಾಲಾ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ ಪ್ರತಿಭಟನೆ ಮಾಡುತ್ತೇವೆ ಎಂದು ಗ್ರಾಪಂ ಸದಸ್ಯ ಟೋಪಣ್ಣ ಕಟಗಿ ಎಚ್ಚರಿಸಿದ್ದಾರೆ.ಬೇಸಿಗೆ ರಜೆ ಮುಗಿಯುತ್ತ ಬಂದು ಶಾಲಾ- ಕಾಲೇಜುಗಳು ಮೇ 29ರಿಂದ ಆರಂಭವಾಗುತ್ತಿವೆ. ಪದೇ ಪದೇ ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡತಡೆ ಉಂಟಾಗುತ್ತಿದೆ. ಆದ್ದರಿದ ಎಷ್ಟೋ ಬಾರಿ ಜೆಸಿಬಿಯಿಂದ ಕೆಲಸ ಮಾಡಿ ದಾರಿ ಮಾಡಿಕೊಟ್ಟಿದ್ದೇವೆ. ಇದಕ್ಕಾಗಿ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದೆವು. ಅದರಂತೆ ಅವರೂ ಅನುದಾನ ಬಿಡುಗಡೆ ಮಾಡಿಸಿ ಭೂಮಿಪೂಜೆ ನೆರವೇರಿಸಿದ್ದಾರೆ.
ಆದರೆ, ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬಂತೆ ಗುತ್ತಿಗೆದಾರ ಕಾಮಗಾರಿ ಆರಂಭಿಸುತ್ತಿಲ್ಲ. ಯಾರ ಸಂಪರ್ಕಕ್ಕೂ ಸಿಗದೆ ಜನರಿಗೆ ತೊಂದರೆ ಉಂಟು ಮಾಡುತ್ತಿದ್ದಾರೆ. ಅವರ ಗುತ್ತಿಗೆ ರದ್ದು ಮಾಡಿ ಬೇರೆಯವರಿಗೆ ಕೊಡಬೇಕು ಎಂದು ಗ್ರಾಮದ ಮುಖಂಡ ಇಬ್ರಾಹಿಂ ನದಾಫ ಆಗ್ರಹಿಸಿದ್ದಾರೆ.